ಮತದಾನಕ್ಕಾಗಿ ಆಮಂತ್ರಣ ಪತ್ರಿಕೆ!
ಕನ್ನಡಪ್ರಭ ವಾರ್ತೆ ರಾಯಚೂರು ಏ.2
ಮದುವೆ ಮತ್ತಿತರೆ ಸಂಭ್ರಮಾಚರಣೆಯ ಕ್ಷಣಗಳಲ್ಲಿ ಉಪಸ್ಥಿತರಿರುವಂತೆ ಬಂಧುಗಳಿಗೆ ಆಹ್ವಾನ ನೀಡುವುದು ಸಾಮಾನ್ಯ ಸಂಗತಿ. ಆದರೆ ರಾಯಚೂರು ಜಿಲ್ಲಾಡಳಿತ ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳ ಮಾಡಲು ಪಣತೊಟ್ಟಿದ್ದು, ಮತದಾರರಿಗೆ ಏ.17ರಂದು ಮತದಾನಕ್ಕಾಗಿ ಆಮಂತ್ರಿಸಲು ಮುಂದಾಗಿದೆ.
ಲೋಕಸಭೆ ಚುನಾವಣೆಯ ಮತದಾನಕ್ಕೆ ಈ ಬಾರಿ ಜಿಲ್ಲಾಡಳಿತ ಇಂಥ ವಿಶೇಷ ಆಮಂತ್ರಣ ಪತ್ರಿಕೆಯನ್ನೇ ಸಿದ್ಧಗೊಳಿಸಿದ್ದು ಶೀಘ್ರ ಮತದಾರರ ಮನೆ ಮನೆಗೆ ತೆರಳಿ ದಯಾಮಾಡಿ ಬನ್ನಿ ವೋಟ್ ಮಾಡಿ ಎಂಬ ಸಂದೇಶ ಸಾರಲು ಸಜ್ಜಾಗಿದೆ.
ಜಿಲ್ಲೆಯಲ್ಲಿ ಕಳೆದ ಲೋಕಸಭೆ ಚುನಾವಣೆಯ ವೇಳೆ ಮತದಾನದ ಪ್ರಮಾಣ ಶೇ.45.91 ಆಗಿತ್ತು. ಅದರಿಂದ ಚುನಾವಣೆ ಆಯೋಗದ ಕೆಂಗಣ್ಣಿಗೆ ಜಿಲ್ಲಾಡಳಿತ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ವಿಧಾನಸಭೆ ಚುನಾವಣೆಯಿಂದಲೇ ಮತದಾನದ ಪ್ರಮಾಣ ಹೆಚ್ಚಳಕ್ಕೆ ಜಿಲ್ಲಾಡಳಿತ ಹತ್ತಾರು ರೀತಿಯಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.
ಏನಿದು ಆಮಂತ್ರಣ?: ಈ ಬಾರಿಯೂ ಲೋಕಸಭೆ ಚುನಾವಣೆಯ ಅಂಗವಾಗಿ ಮತದಾರರ ಜಾಗೃತಿ ಮತ್ತಿತರೆ ಕಾರ್ಯಕ್ರಮ ಆಯೋಜಿಸಿದೆ. ಅದರ ಭಾಗವಾಗಿ ಮತದಾರರಿಗೆ ಮತದಾನ ಮಾಡುವಂತೆ ಆಮಂತ್ರಣ ಪತ್ರಿಕೆ ಸಿದ್ಧಗೊಳಿಸಲಾಗಿದೆ.
18 ವರ್ಷ ಮೀರಿದ ಎಲ್ಲ ಮತದಾರರೇ ಏ.17ರಂದು ಮತಗಟ್ಟೆಗಳಿಗೆ ಬಂದು ತಪ್ಪದೇ ಮತದಾನ ಮಾಡಿ, ಪ್ರಜಾಪ್ರಭುತ್ವ ರಕ್ಷಿಸಿ ಎಂಬ ಸಂದೇಶ ಹೊತ್ತ ಆಮಂತ್ರಣ ಪತ್ರಿಕೆಯಿದು.
ಆಮಂತ್ರಣ ಪತ್ರಿಕೆಯಲ್ಲಿ ಮತದಾನದ ದಿನಾಂಕ ಮತ್ತು ಸಮಯ ನಮೂದಿಸಲಾಗಿದೆ. ಸುಭದ್ರ ಭಾರತ ನಿರ್ಮಾಣಕ್ಕಾಗಿ ಪ್ರಜಾಪಭುತ್ವ ವ್ಯವಸ್ಥೆಯ ಸದೃಢಗೊಳಿಸಲು ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಲು ಏ. 17ರಂದು ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ನಿಮ್ಮ ಮತಗಟ್ಟೆಗೆ ಬನ್ನಿ- ದೇಶದ ಸುಭದ್ರ ಭವಿಷ್ಯ ರೂಪಿಸಲು ಮತಚಲಾಯಿಸಿ, ನಿಮ್ಮ ಕರ್ತವ್ಯ ನಿರ್ವಹಿಸಿ ಎಂಬ ಸಂದೇಶವಿದೆ.
ಮತದಾನ ಮಾಡಲು ಜಿಲ್ಲಾಡಳಿತ ಹಾಗೂ ಮತದಾರರ ಜಾಗೃತಿ ಸಮಿತಿಯ ವತಿಯಿಂದ ಸ್ವಾಗತಿಸುವ ಒಕ್ಕಣಿಕೆಯಿದೆ. ಅಷ್ಟೇ ಅಲ್ಲ ಆಮಂತ್ರಣ ಪತ್ರಿಕೆಯಲ್ಲಿ 'ವೋಟಿನ ಖದರ್- ಅದು ನಿಮ್ಮ ಪವರ್' ಎಂಬ ಸ್ಲೋಗನ್ ಸೇರಿಸುವ ಮೂಲಕ ಸಿನಿಮೀಯ ಶೈಲಿಯಲ್ಲಿ ಮತದಾರರನ್ನು ಆಕರ್ಷಿಸುವ ಪ್ರಯತ್ನ ಮಾಡಲಾಗಿದೆ.
ಹಂಚಿಕೆ: ಜಿಲ್ಲಾಡಳಿತದ ಮೂಲಗಳ ಪ್ರಕಾರ- ಇಂಥ ಮತದಾನದ ಆಮಂತ್ರಣ ಪತ್ರಿಕೆಗಳನ್ನು ಮತದಾನದ ದಿನಾಂಕ ಸಮೀಪಿಸುತ್ತಿದ್ದಂತೆಯೇ ಕಳೆದ ಲೋಕಸಭೆ ಚುನಾವಣೆಯವಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿದ್ದ ಒಟ್ಟು 160 ಮತಗಟ್ಟೆಗಳ ಮತದಾರರ ಮನೆಮನೆಗೆ ತೆರಳಿ ಮತದಾನ ಮಾಡುವಂತೆ ಆಮಂತ್ರಣ ಪತ್ರ ನೀಡಿ ಆಹ್ವಾನಿಸಲು ಯೋಜಿಸಲಾಗಿದೆ.
ಸುಮಾರು 50 ಸಾವಿರ ಇಂಥ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಲು ಯೋಜಿಸಿದ್ದು, ಶೀಘ್ರವೇ ಇಂಥ ವಿನೂತನ ಪ್ರಯತ್ನಕ್ಕೆ ಜಿಲ್ಲಾಡಳಿತ ನಾಂದಿ ಹಾಡುವ ಮೂಲಕ ಮತದಾರರನ್ನು ಮತಗಟ್ಟೆಗಳಿಗೆ ಸೆಳೆಯುವ ಪ್ರಯತ್ನ ಮಾಡಲಿದೆ.
ಮತಯಂತ್ರಗಳ ಪರಿಶೀಲನೆ ಪೂರ್ಣ
ಯಾದಗಿರಿ: ಗುಲ್ಬರ್ಗ ಹಾಗೂ ರಾಯಚೂರ ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ಸಂಬಂಧಪಟ್ಟಂತೆ ವಿದ್ಯುನ್ಮಾನ ಮತಯಂತ್ರಗಳ ಎರಡನೇ ಹಂತದ ರ್ಯಾಂಡಮೈಜೇಷನ್ ಕಾರ್ಯ ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಎಫ್. ಆರ್. ಜಮಾದಾರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ನ್ಯಾಷನಲ್ ಇನ್ಫಾರ್ಮೆಟಿಕ್ ಸೆಂಟರ್ದಲ್ಲಿ ಗುರುವಾರ ಈ ಕುರಿತು ಪರಿಶೀಲಿಸಿದ ಅವರು ವಿದ್ಯುನ್ಮಾನ ಮತಯಂತ್ರಗಳು ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೆಟ್ ಯೂನಿಟ್ ಎಂಬ ಎರಡು ಘಟಕಗಳನ್ನು ಹೊಂದಿದೆ. ಪ್ರತಿಯೊಂದು ಮತಗಟ್ಟೆಗೆ ತಲಾ ಒಂದು ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೇಟ್ ಯೂನಿಟ್ ಬಳಸಲಾಗುತ್ತದೆ. ಗುಲ್ಬರ್ಗ ಹಾಗೂ ರಾಯಚೂರ ಲೋಕಸಭಾ ಕ್ಷೇತ್ರಗಳ ಮತದಾನಕ್ಕಾಗಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳಿಗೆ ಅನುಗುಣವಾಗಿ ಒಟ್ಟು 1,160 ಕಂಟ್ರೋಲ್ ಯೂನಿಟ್ ಹಾಗೂ 1,470 ಬ್ಯಾಲೇಟ್ ಯೂನಿಟ್ಗಳು ಶೇ.10ರಷ್ಟು ಹೆಚ್ಚುವರಿ ಮತಯಂತ್ರಗಳು ಸೇರಿ ಒಟ್ಟು 1,108 ವೋಟಿಂಗ್ ಮಷಿನ್ಗಳನ್ನು ಯಾದಗಿರಿ ಜಿಲ್ಲಾ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ.
ಜಗನ್ನಾಥ ಆರ್. ದೇಸಾಯಿ