ಅರಬಾವಿ ರೈತ ಆತ್ಮಹತ್ಯೆ ಸಿಎಂ ಹೇಳಿಕೆಗೆ ಖಂಡನೆ
ಕ.ಪ್ರ. ವಾರ್ತೆ , ರಾಯಚೂರು , ಏ.4
ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ಬೆಳಗಾವಿಯ ರೈತ ವಿಠ್ಠಲ್ ಅರಭಾವಿ ಆತ್ಮಹತ್ಯೆ ಕುರಿತು ನೀಡಿರುವ ಹೇಳಿಕೆಯನ್ನು ಖಂಡಿಸಿರುವ ಕರ್ನಾಟಕ ರಾಜ್ಯ ರೈತ ಸಂಘವು, ಸಿಎಂ ಕೂಡಲೇ ರೈತರ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದೆ.
ನಗರದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಈ ಕುರಿತು ಪ್ರತಿಕ್ರಿಯಿಸಿ, ರಾಜ್ಯದ ಸಿಎಂ ಸ್ಥಾನದಲ್ಲಿರುವಂಥ ವ್ಯಕ್ತಿ ರಾಜ್ಯದಲ್ಲಿ ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ದೊರೆಯದ್ದಕ್ಕೆ ರೈತ ಮಾಡಿಕೊಂಡ ಆತ್ಮಹತ್ಯೆಗೂ ತಮಗೂ ಸಂಬಂಧವಿಲ್ಲ ಎಂದಿದ್ದು ಅಕ್ಷಮ್ಯ ಎಂದರು.
ನಷ್ಟ: ರಾಜ್ಯದಲ್ಲಿ ಇದುವರೆಗೆ ಸಂಭವಿಸಿದ ರೈತರ ಆತ್ಮಹತ್ಯೆಗೆ ಸರ್ಕಾರಗಳ ರೈತ ವಿರೋಧಿ ನೀತಿಯೇ ನೇರ ಕಾರಣವಾಗಿದೆ. ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಲು ಸರ್ಕಾರಗಳು ವಿಫಲವಾಗಿದ್ದು, ಅದರಿಂದಾಗಿ ರೈತರು ಕೃಷಿಯಲ್ಲಿ ನಷ್ಟ ಅನುಭವಿಸುವಂತಾಗಿದೆ ಎಂದು ಟೀಕಿಸಿದರು.
ಬೆಳಗಾವಿಯಲ್ಲಿ ಸುವರ್ಣ ಸೌಧದ ಎದುರು ಕಬ್ಬಿಗೆ ಸೂಕ್ತ ಬೆಲೆ ನೀಡುವಂತೆ ರೈತರು ನಡೆಸುತ್ತಿದ್ದ ಧರಣಿಗೆ ಸರ್ಕಾರ ಕಿವಿಗೊಡದ್ದರಿಂದ ರೈತ ವಿಠ್ಠಲ್ ಅರಭಾವಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಚುನಾವಣೆ ಪ್ರಚಾರ ಸಭೆಯಲ್ಲಿ ಹೆಂಡ ಕುಡಿದು ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳುವ ಮೂಲಕ ರೈತ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆಂದರು.
ಸಾವಿನ ಹೊಣೆ: ರೈತನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಬೇಜವಾಬ್ದಾರಿತನದಿಂದ ಕೂಡಿದೆ. ರೈತನ ಆತ್ಮಹತ್ಯೆಗೂ ತಮಗೂ ಸಂಬಂಧವಿಲ್ಲ ಎಂದಿರುವುದು ಸರಿಯಲ್ಲ. ರಾಜ್ಯದ ಸಿಎಂ ಸ್ಥಾನದಲ್ಲಿರುವ ವ್ಯಕ್ತಿ ರೈತನ ಸಾವಿನ ಹೊಣೆ ಹೊರಲೇಬೇಕಾಗುತ್ತದೆ ಎಂದು ಹೇಳಿದರು.
ವಾರದೊಳಗೆ ಸಿಎಂ ಸಿದ್ದರಾಮಯ್ಯ ರೈತ ಸಮುದಾಯದ ಕ್ಷಮೆ ಯಾಚಿಸಬೇಕು. ಚುನಾವಣೆ ಪ್ರಚಾರದ ವೇಳೆ ನೀಡಿದ ಹೇಳಿಕೆ ತಿರುಚಲಾಗಿದೆ ಎಂದಿರುವ ಅವರ ಹೇಳಿಕೆ ತೀರಾ ಬಾಲಿಶತನದ್ದಾಗಿದೆ ಎಂದ ಅವರು, ಸಿಎಂ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಅದಕ್ಕೆ ತಕ್ಕಂತೆ ವರ್ತಿಸುವುದನ್ನು ಕಲಿಯಬೇಕಿದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರ ಮಧ್ಯೆ ನಡೆದ ವಿವಾದಾತ್ಮಕ ಹೇಳಿಕೆ ವಿನಿಮಯಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ವಿವಿಧ ಪಕ್ಷಗಳ ರಾಜಕೀಯ ನಾಯಕರು ವೈಯಕ್ತಿಕ ವಿಚಾರಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಅದರಿಂದ ಅನಗತ್ಯ ಗೊಂದಲ ಸೃಷ್ಟಿಯಾಗುತ್ತಿದೆ ಎಂದು ಹೇಳಿದರು.
ಬೆಂಬಲ: ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಅವರಿಗೆ ರಾಜ್ಯ ರೈತ ಸಂಘ ಬೆಂಬಲ ನೀಡಲು ನಿರ್ಧರಿಸಿದ್ದಕ್ಕೆ ಸಂಘದ ಎಲ್ಲರ ಸಮ್ಮತಿಯಿದೆ. ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಪುಟ್ಟರಾಜು ಅವರು ಆ ಭಾಗದಲ್ಲಿ ನೈಸರ್ಗಿಕ ಸಂಪತ್ತು ಅಪಾರ ಪ್ರಮಾಣದಲ್ಲಿ ಕೊಳ್ಳೆ ಹೊಡೆದಿದ್ದಾರೆ. ಅವರಿಂದ ಕನ್ನಂಬಾಡಿ ಕಟ್ಟೆಗೆ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಅಧಿಕಾರಕ್ಕೆ ಬಾರದಂತೆ ತಡೆಯಲು ಸಂಘವು ಕಾಂಗ್ರೆಸ್ಗೆ ಬೆಂಬಲಿಸಲು ನಿರ್ಧರಿಸಿತೆಂದು ಹೇಳಿದರು.
ಈಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಕೇಂದ್ರದ ತಂಡವು ಈಗಾಗಲೇ ಹಾನಿಯ ಅಂದಾಜು ಅಧ್ಯಯನ ನಡೆಸಿದ್ದು, ಬಿಜಾಪುರದಲ್ಲಿ ಸಂಭವಿಸಿರುವ ದ್ರಾಕ್ಷಿ ಬೆಳೆ ಹಾನಿಗೆ ಪ್ರತಿಯಾಗಿ ಎಕರೆಗೆ ರು. 25 ಸಾವಿರ ನೀಡಲು ಶಿಫಾರಸು ಮಾಡಿದೆ. ಆದರೆ ಅಂಥ ಯಾವುದೇ ಪರಿಹಾರಕ್ಕೆ ಸಂಘದ ವಿರೋಧವಿದೆ. ಸಂಘವು ಕನಿಷ್ಟ ಎಕರೆಗೆ ರು. 1ಲಕ್ಷ ಬೆಳೆ ಹಾನಿ ಪರಿಹಾರ ರೈತರಿಗೆ ನೀಡಬೇಕೆಂದು ಆಗ್ರಹಿಸುತ್ತದೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಜಯಪ್ಪಸ್ವಾಮಿ, ನರಸಪ್ಪ, ಬಸನಗೌಡ ಮಾಲಿಪಾಟೀಲ್ ಇದ್ದರು.