ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಿಟ್ಟಿಕೆಲ್ಲೂರು: ಕುಡಿಯುವ ನೀರಿಗೆ ಗ್ರಾಮಸ್ಥರ ಪರದಾಟ

Vishwanath S
Updated On : 5 Apr 2014, 11:29 am

ಮುದಗಲ್: ಸಮೀಪದ ಮಿಟ್ಟಿಕೆಲ್ಲೂರು ಗ್ರಾಮದಲ್ಲಿ ಕುಡಿವ ನೀರಿನ ಅಭಾವ ಹೆಚ್ಚಾಗಿದ್ದು, ಗ್ರಾಮಸ್ಥರು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಟ್ಟೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಮಿಟ್ಟಿಕೆಲ್ಲೂರು ಗ್ರಾಮದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಕಿರು ನೀರಿ ಸರಬರಾಜು ಯೋಜನೆ ತೊಟ್ಟಿಗಳಿಗೆ ಸಮರ್ಪಕವಾಗಿ ನೀರು ಶೇಖರಣೆ ಆಗದಿರುವುದು ಒಂದೆಡೆ ಸಮಸ್ಯೆಯಾದರೆ, ಬಿರು ಬೇಸಿಗೆಯ ಝಳಕ್ಕೆ ಅಂತರ್ಜಲ ಮಟ್ಟ ಕುಸಿ ದಿರುವುದು ಮತ್ತೊಂದೆಡೆಯಾಗಿದೆ. ಗಂಟೆಗಟ್ಟಲೇ ತೊಟ್ಟಿಗಳ ಮುಂದೆ ಕೊಡಗಳನ್ನು ಹಿಡಿದು ನೀರು ಬರುವ ದಾರಿಯನ್ನೇ ಎದುರು ನೋಡಬೇಕಿದೆ. ಗ್ರಾ.ಪಂ.ಗೆ ಮನವಿ ಮಾಡಿದರೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದೇ ಪರಿತಪಿಸುವಂತಾಗಿದೆ. ಗ್ರಾಮದಲ್ಲಿ ಕುಡಿವ ನೀರಿನ ಅಭಾವ ನೀಗಿಸಲು ದೂರದ ತೋಟಗಳ ಬೋರ್‌ವೆಲ್, ತೆರೆದ ಬಾವಿಗಳಿಗೆ ಮೊರೆ ಹೋಗಬೇಕಾದ ಸಂದಿಗ್ಧ ಸ್ಥಿತಿ ಎದುರಾಗಿದೆ. ಬೇಸಿಗೆಗೂ ಮುನ್ನ ತಾಲೂಕು ಆಡಳಿತ ಇಂತಹ ಗ್ರಾಮಗಳನ್ನು ಗುರುತಿಸಿ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸದೇ ಚುನಾವಣೆ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆಂದು ಗ್ರಾಮದ ಮಹಿಳೆಯರು ಅಧಿಕಾರಿಗಳನ್ನು ದೂರಿದ್ದಾರೆ. ಕೂಡಲೇ ಗ್ರಾಮದಲ್ಲಿನ ನೀರಿನ ಅಭಾವ ನೀಗಿಸಲು ಗ್ರಾ.ಪಂ. ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಎರಡು ಗುಂಪುಗಳ ನಡುವೆ ಮಾರಾಮಾರಿ: ಉದ್ವಿಗ್ನ
ಸಿಂಧನೂರು: ಲೇಬರ್ ವಿಷಯಕ್ಕೆ ಸಂಬಂಧಿಸಿದಂತೆ ಮಹೆಬೂಬಿಯಾ ಕಾಲೋನಿಯ ಯಮನೂರು ಹಾಗೂ ಎ.ಕೆ. ಗೋಪಾಲ ನಗರದ ಸುರೇಶ ನಡುವೆ ಜಗಳ ನಡೆದು ವಿಕೋಪಕ್ಕೆ ತಿರುಗಿದ ಘಟನೆ ನಡೆದಿದೆ.
ಘಟನೆಯಿಂದಾಗಿ ಎ.ಕೆ. ಗೋಪಾಲ ನಗರದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಇದರಿಂದ ಕೆಲಕಾಲ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ಘಟನೆ ಯಮನೂರು ಹಾಗೂ ಸುರೇಶ ಇಬ್ಬರು ಕಟ್ಟಡ ಕಾರ್ಮಿಕರೆಂದು ಹೇಳಲಾಗುತ್ತಿದೆ. ಲೇಬರ್ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳ ಉಂಟಾಗಿ ಸುರೇಶ ಕಟ್ಟಿಗೆಯಿಂದ ಯಮನೂರ ಎಂಬಾತನಿಗೆ ಹೊಡೆದಿದ್ದಾನೆ ಎಂದು ತಿಳಿದು ಬಂದಿದೆ. ಗಾಯಗೊಂಡ ಯಮನೂರು ಕಡೆಯವರು ಆಕ್ರೋಶಗೊಂಡು ಎ.ಕೆ. ಗೋಪಾಲನಗರದ ನಿವಾಸಿ ಸುರೇಶನಿಗೆ ಥಳಿಸಿದ್ದಾರೆ.
ಸಿಂಧನೂರಲ್ಲಿ ಅಪರಾಧಿ ಚಟುವಟಿಕೆಗಳ ಪ್ರಮಾಣ ಹೆಚ್ಚುತ್ತಿದ್ದರೂ ಪೊಲೀಸ್ ಸಿಬ್ಬಂದಿ ಮಾತ್ರ ನಿರ್ಲಕ್ಷ್ಯ ಭಾವನೆ ತಾಳಿದ್ದಾರೆಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಶಹರ ಪೊಲೀಸ್ ಠಾಣೆ, ಗ್ರಾಮೀಣ ಪೊಲೀಸ್ ಠಾಣೆಗೆ ಅಪರಾಧಿ ಪ್ರಕರಣಗಳ ಕುರಿತು ಮಾಧ್ಯಮದವರು, ಸಾರ್ವಜನಿಕರು ಮಾಹಿತಿ ಕೇಳಲು ದೂರವಾಣಿ ಮೂಲಕ ಸಂಪರ್ಕಿಸಿದರೂ ಅಸಮರ್ಪಕ ಮಾಹಿತಿ ನೀಡುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಸಾರ್ವಜನಿಕ ವಲಯದಲ್ಲಿ ಕೆಲ ವಿಷಯಗಳು ಢಣಾ ಡಂಗುರವಾದರೂ ಪೊಲೀಸ್ ಮೂಲಗಳಿಗೆ ಗೊತ್ತೆ ಇರುವುದಿಲ್ಲ. ಈಗಾದರೆ ಶಾಂತಿ ಕಾಪಾಡುವುದು ಹೇಗೆ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದು ಗುರುವಾರ ಕೇಳಿಬಂತು. ಜನತಾ ಕಾಲೋನಿಯಲ್ಲಿ ಕಳೆದೆರಡು ದಿನಗಳ ಹಿಂದೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಬೆನ್ನಲ್ಲೆ ಪುನ ಮತ್ತೊಂದು ಘಟನೆ ವರದಿಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement