ವೆಚ್ಚದ ವಿವರ ಪರಿಶೀಲನೆ ದಿನ ನಿಗದಿ: ಜಿಲ್ಲಾಡಳಿತ
ರಾಯಚೂರು: ಲೋಕಸಭೆ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳ ಚುನಾವಣಾ ವೆಚ್ಚದ ವಿವರ ಪರಿಶೀಲನೆಗೆ ದಿನ ನಿಗದಿಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಏ.6, ಏ.10 ಮತ್ತು ಏ.14ರಂದು ಬೆಳಗ್ಗೆ 10.30ರಿಂದ ಸಂಜೆ 5ರವರೆಗೆ ಅಭ್ಯರ್ಥಿಗಳ ವೆಚ್ಚದ ಮಾಹಿತಿಯನ್ನು ಜಿಲ್ಲಾಧಿಕಾರಿ ಕಾರ್ಯಾಲಯದ ಸಭಾಂಗಣದಲ್ಲಿ ಪರಿಶೀಲಿಸಲಾಗುತ್ತದೆ. ಆದ್ದರಿಂದ ಲೋಕಸಭೆ ಕ್ಷೇತ್ರದ ಸ್ಪರ್ಧಾಳುಗಳು ಖುದ್ದಾಗಿ ಅಥವಾ ಅಧಿಕೃತ ಪ್ರತಿನಿಧಿಗಳ ಮೂಲಕ ಸೂಕ್ತ ದಾಖಲೆಗಳೊಂದಿಗೆ ಹಾಜರಾಗಿ ತಮ್ಮ ವೆಚ್ಚ ವಿವರಗಳನ್ನು ಪರಿಶೀಲನೆಗೆ ಸಲ್ಲಿಸುವಂತೆ ಆಡಳಿತ ಸೂಚಿಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ತಿಳಿಸಿದ್ದಾರೆ.
ಆಪ್ತ ಸಮಾಲೋಚನೆ ಕಾರ್ಯಕ್ರಮ ಯಶಸ್ವಿ
ರಾಯಚೂರು: ನಗರದ ಟಾಗೋರ್ ಸ್ಮಾರಕ ಶಿಕ್ಷಣ ಸಂಸ್ಥೆಯ ಸೀತಾ ಸುಬ್ಬರಾಜು ಮಹಾವಿದ್ಯಾಲಯದಲ್ಲಿ ಈಚೆಗೆ ಬಿಎ ನಾಲ್ಕನೇ ಮತ್ತು ಆರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಎ. ಮಾಲಿಪಾಟೀಲ್ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮೆರೆಯುವತ್ತ ಹೆಚ್ಚಿನ ಗಮನಹರಿಸಬೇಕು. ಆ ಮೂಲಕ ಗುರಿ ತಲುಪಲು ಕಾರ್ಯಪ್ರವೃತ್ತರಾಗಬೇಕೆಂದರು. ಸತತ ಅಧ್ಯಯನ ಹಾಗೂ ಜ್ಞಾನಾಭಿವೃದ್ಧಿಗೆ ಮಾಧ್ಯಮಗಳ ಮೂಲಕ ಮಾಹಿತಿ ಪಡೆದು ಪ್ರಗತಿ ಸಾಧಿಸಬೇಕು. ಶ್ರವಣ, ಮನನ ಕ್ರಿಯೆಗಳ ಮೂಲಕ ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಸ್ಥಾನಕ್ಕೇರುವ ಪ್ರಯತ್ನ ವಿದ್ಯಾರ್ಥಿಗಳು ಮಾಡಬೇಕೆಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕ ಡಾ. ಸಿದ್ದಲಿಂಗಪ್ಪ, ಪರಮೇಶ್ವರ ಸೇರಿದಂತೆ ಬೋಧಕ ವರ್ಗದವರಿದ್ದರು. ಕಾಲೇಜು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಬಾಬೂಜಿಗೆ ಜೈ ಕರವೇ ಗೌರವ ಸಮರ್ಪಣೆ
ರಾಯಚೂರು: ದಲಿತರ ಧೀಮಂತ ನಾಯಕ, ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನ ರಾಂ ಅವರ 107ನೇ ಜಯಂತಿ ಅಂಗವಾಗಿ ನಗರದಲ್ಲಿ ಶನಿವಾರ ಜೈ ಕನ್ನಡ ರಕ್ಷಣಾ ವೇದಿಕೆ ವತಿಯಿಂದ ಗೌರವ ಸಲ್ಲಿಸಲಾಯಿತು. ಸಂಘಟನೆಯ ರಾಜ್ಯಾಧ್ಯಕ್ಷ ಶರಣಪ್ಪ ಅಸ್ಕಿಹಾಳ್, ರಾಜ್ಯ ಗೌರವಾಧ್ಯಕ್ಷ ಶ್ರೀ ಶ್ರೀಕಾಂತ ವಕೀಲರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಸಂತಕುಮಾರ್ ಅಸ್ಕಿಹಾಳ್, ಜಿಲ್ಲಾ ವಕ್ತಾರ ಶರಣಬಸವ.ಎಂ, ವೇದಿಕೆ ಮುಖಂಡರಾದ ಬಸವರಾಜ ಮುರಾಂಪುರ, ರೇವಣ್ಣನಾಯಕ, ಅನೀಲಕುಮಾರ್, ವೆಂಕಟಸ್ವಾಮಿ, ಉರುಕುಂದಿ, ತಿಮ್ಮಪ್ಪ ನಾಯಕ, ವಡವಟ್ಟಿ, ವೆಂಕಟೇಶ.ವೈ, ಸೂಗುಪ್ಪ ಬೇಲ್ದಾರ್, ಜಗದೀಶ ರಮೇಶ, ರಾಘವೇಂದ್ರ, ಜಿಂದು, ವೀರೇಶ, ಶಿವಣ್ಣ, ಸಿದ್ದು, ಶಾಲಂ ಹೊಸಪೇಟೆ, ಗೋವಿಂದು ಎಲ್.ಬಿ.ಎಸ್. ನಗರ, ಮಲ್ಲೇಶ, ತಿಮ್ಮಪ್ಪ, ರಾಮು ಯರಮರಸ್ ಸೇರಿದತೆ ಅನೇಕರ ಉಪಸ್ಥಿತಿಯಲ್ಲಿ ಡಾ. ಬಾಬು ಜಗಜೀವನ ರಾಂ ಅವರ ಪುತ್ಥಳಿಗೆ ಮಾಲಾರ್ಪಣೆ ಗೌರವ ಸಲ್ಲಿಸಲಾಯಿತು.
ಸರ್ಕಾರಿ ಕಚೇರಿ ಸಮಯ ಬದಲಾವಣೆಗೆ ಆಗ್ರಹ
ರಾಯಚೂರು: ಹೈ.ಕ. ಭಾಗದಲ್ಲಿ ಬೇಸಿಗೆಯ ಬಿರು ಬಿಸಿಲಿನ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳ ಸಮಯವನ್ನು ಕೂಡಲೇ ಬದಲಾವಣೆ ಮಾಡಿ ಆದೇಶ ಹೊರಡಿಸುವಂತೆ ನವಕರ್ನಾಟಕ ಜಾಗೃತಿ ಸಮಿತಿ ಜಿಲ್ಲಾ ಘಟಕ ಒತ್ತಾಯಿಸಿದೆ. ಈ ಕುರಿತು ಈಚೆಗೆ ಜಿಲ್ಲಾಡಳಿತದ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿರುವ ಸಂಘಟನೆಯವರು, ಹೈ.ಕ.ಭಾಗದಲ್ಲಿ ಪ್ರತಿವರ್ಷ ಬೇಸಿಗೆಯ ದಿನಗಳಲ್ಲಿ ತಾಪಮಾನ ಹೆಚ್ಚಳ ಹಿನ್ನೆಲೆಯಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣೆ ಸಮಯವನ್ನು ಬದಲಿಸಲಾಗುತ್ತಿತ್ತು. ಆದರೆ ಪ್ರಸಕ್ತ ವರ್ಷ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳ ವೇಳೆ ಬದಲಿಸಿಲ್ಲ ಎಂದು ಆರೋಪಿಸಿದರು. ಬಿಸಿಲಿನ ತಾಪದಿಂದ ಸರ್ಕಾರಿ ಕೆಲಸಗಳಿಗೆ ಸಾರ್ವಜನಿಕರು ಪ್ರಯಾಪಡುತ್ತಲೇ ಅಲೆಯುವಂತಾಗಿದೆ. ಕಾರಣ ಕೂಡಲೇ ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣೆ ಅವಧಿಯನ್ನು ಬೆಳಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ನಿಗದಿ ಮಾಡಿ ಆದೇಶ ಹೊರಡಿಸುವಂತೆ ಸಂಘಟನೆಯ ಜಿಲ್ಲಾಧ್ಯಕ್ಷ ವಿಶ್ವನಾಥ ಪಟ್ಟಿ, ಹುಸೇನ್ ಬಾಷಾ, ಮಹೇಶ್ ಕುಮಾರ್ ಸೇರಿದಂತೆ ಅನೇಕರು ಒತ್ತಾಯಿಸಿದ್ದಾರೆ.
ರಜೆ ಅವಧಿಯಲ್ಲೂಬಿಸಿಯೂಟಕ್ಕೆ ಒತ್ತಾಯ
ರಾಯಚೂರು: ಬರಗಾಲದ ಹಿನ್ನೆಲೆಯಲ್ಲಿ ಬೇಸಿಗೆಯ ಶಾಲಾ ರಜೆ ಅವಧಿಯಲ್ಲಿಯೂ ಮಕ್ಕಳಿಗೆ ಬಿಸಿಯೂಟ ಯೋಜನೆ ಅಡಿ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸುವಂತೆ ಕರ್ನಾಟಕ ರಾಜ್ಯ ಅಕ್ಷರದಾಸೋಹ ಬಿಸಿಯೂಟ ನೌಕರರ ಸಂಘ ಒತ್ತಾಯಿಸಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಈಚೆಗೆ ಮನವಿ ಸಲ್ಲಿಸಿ, ಬರಗಾಲದ ಹಿನ್ನೆಲೆಯಲ್ಲಿ ಕಾರ್ಮಿಕರು ಕೆಲಸಕ್ಕಾಗಿ ಅಲೆಯುವಂ ತಾಗಿದೆ. ಇದರಿಂದ ಕಾರ್ಮಿಕರ ಮಕ್ಕಳಿಗೆ ತೊಂದರೆಯಾಗುತ್ತಿದೆ. ಅಕ್ಷರ ದಾಸೋಹ ಯೋಜನೆಯಲ್ಲಿ ನಗರದ ಕೊಳಚೆ ಪ್ರದೇಶದ ಬಡ ಕಾರ್ಮಿಕರ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಂಥವರಿಗೆ ಯೋಜನೆಯ ಲಾಭ ದೊರಕಿಸುವ ಕಾರ್ಯ ಆಡಳಿತ ಮಾಡಬೇಕಿದೆ ಎಂದು ಸಂಘ ಒತ್ತಾಯಿಸಿದೆ. ಈ ಹಿನ್ನೆಲೆಯಲ್ಲಿ ನಗರ ಪ್ರದೇಶದ ಶಾಲಾ ಮಕ್ಕಳಿಗೆ ರಜೆ ಅವಧಿಯಲ್ಲಿಯೂ ಬಿಸಿಯೂಟದ ಸೌಲಭ್ಯ ಒದಗಿಸುವ ಅವಶ್ಯಕತೆಯಿದ್ದು, ಕೂಡಲೇ ಶಾಲೆಗಳಲ್ಲಿ ಬಡಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುವಂತೆ ಸಂಘದ ಗೌರವಾಧ್ಯಕ್ಷ ಜೆ.ಎಂ. ಚನ್ನಬಸಯ್ಯ, ಕಾರ್ಯದರ್ಶಿ ಕಲ್ಯಾಣಿ, ಅಧ್ಯಕ್ಷೆ ಅಕ್ಕಮ್ಮ ಮತ್ತಿತರರು ಆಗ್ರಹಿಸಿದ್ದಾರೆ.
ನಾಳೆ ಕಾಂಗ್ರೆಸ್ಗೆ ಸೇರ್ಪಡೆ: ನೀಲಕಂಠ ಬೇವಿನ್
ರಾಯಚೂರು: ನಗರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಕಾರ್ಯಕ್ಕೆ ಏ.7ರಂದು ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಆಗಮಿಸಲಿದ್ದು, ಆ ವೇಳೆ ಕಾಂಗ್ರೆಸ್ ಸೇರುತ್ತಿರುವುದಾಗಿ ರಾಜ್ಯ ಪ್ರದೇಶದ ಕುರುಬರ ಸಂಘದ ನಿರ್ದೇಶಕ ನೀಲಕಂಠ ಬೇವಿನ್ ತಿಳಿಸಿದರು. ಅವರು ನಗರದಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ತಮ್ಮ ನಾಯಕರಾದ ವರ್ತೂರು ಪ್ರಕಾಶ್ ಅವರು ಏ.8ರಂದು ಕಾಂಗ್ರೆಸ್ ಸೇರಲಿದ್ದು, ಈ ಹಿನ್ನೆಲೆಯಲ್ಲಿ ತಾವೂ ಸಹ ಏ.7ರಂದು ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಗೊಳ್ಳುವುದಾಗಿ ಹೇಳಿದರು.ಹಾಲುಮತ ಸಮಾಜದವರು ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ. ಈಚೆಗೆ ಬೆಂಗಳೂರಿನಲ್ಲಿ ನಡೆದ ಪ್ರದೇಶ ಕುರುಬರ ಸಂಘದ ನಿರ್ದೇಶಕರ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು. ಈ ಸಂದರ್ಭ ಆಂಜನೇಯ, ಸಿದ್ದಪ್ಪ ಹೆಂಬೆರಾಳ್, ಅಯ್ಯಾಳಪ್ಪ ಮತ್ತಿತರರಿದ್ದರು.
ಪ್ರೌಢಶಾಲೆ-ಶಿಕ್ಷಕರ ಜೇಷ್ಠತಾ ಪಟ್ಟಿ ಪ್ರಕಟ
ರಾಯಚೂರು: ಜಿಲ್ಲೆಯ ವಿವಿಧ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚಿತ್ರಕಲೆ ಶಿಕ್ಷಕರ ಹಾಗೂ ದೈಹಿಕ ಶಿಕ್ಷಕರ ಗ್ರೇಡ್-1 ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟಿಸಲಾಗಿದೆ. ಚಿತ್ರಕಲೆ ಶಿಕ್ಷಕರ ಜೇಷ್ಠತಾ ಪಟ್ಟಿಯನ್ನು 2012ರ ಜು.31ರಲ್ಲಿದ್ದಂತೆ ಹಾಗೂ ಗ್ರೇಡ್-1 ದೈಹಿಕ ಶಿಕ್ಷಕರ ತಾತ್ಕಾಲಿಕ ಪಟ್ಟಿಯನ್ನು 2011ರ ಜ.1ರಲ್ಲಿದ್ದಂತೆ ಜೇಷ್ಠತಾ ಪಟ್ಟಿ ಪ್ರಕಟಿಸಲಾಗಿದೆ. ಪಟ್ಟಿಯನ್ನು ಇಲಾಖೆಯ ವೆಬ್ಸೈಟ್ ವಿಳಾಸ ಡಿಡಿಠ///ಢಿಢಿಢಿ.ಝ್ಛ್ಟ್ಟಟಜಜ್ಡ್ಛಡ್ಝ್ಟಿಟಿ.್ಞಛ್ಠ.ಟ್ಝ್ಛಿ.್ಝಟಿ ರಲ್ಲಿ ಪ್ರಕಟಿಸಲಾಗಿದೆ. ಈ ಕುರಿತು ಆಕ್ಷೇಪಣೆಗಳಿದ್ದಲ್ಲಿ ಏ.10ರೊಳಗೆ ಅರ್ಜಿಯನ್ನು ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ರಾಯಚೂರು ಇವರಿಗೆ ಸಲ್ಲಿಸಲು ಕಚೇರಿ ಪ್ರಕಟಣೆ ತಿಳಿಸಿದೆ.
ಸಾಮೂಹಿಕ ವಿವಾಹ: 28 ಜೋಡಿ ದಾಂಪತ್ಯಕ್ಕೆ
ಸಿಂಧನೂರು: ತಾಲೂಕಿನ ಗಿಣಿವಾರ ಗ್ರಾಮದಲ್ಲಿ ಇತ್ತೀಚೆಗೆ ನೂತನ ಶಿವಾಲಯದಲ್ಲಿ ಮಲ್ಲಿಕಾರ್ಜುನ ಲಿಂಗ, ನಂದೀಶ್ವರ, ಭ್ರಮರಾಂಭ, ನವಗ್ರಹ, ನಾಗದೇವತಾ ಮೂರ್ತಿಗಳ ಪ್ರತಿಷ್ಠಾಪನೆ ನಿಮಿತ್ತ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 28 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಡವಿ ಅಮರೇಶ್ವರದ ಶಾಂತಮಲ್ಲ ಸ್ವಾಮೀಜಿ, ರೌಡಕುಂದಾದ ಮರಿಸಿದ್ದಲಿಂಗ ಸ್ವಾಮಿಗಳು, ಯದ್ದಲದೊಡ್ಡಿಯ ಮಹಾಲಿಂಗ ಸ್ವಾಮೀಜಿ, ಕರೇಗುಡ್ಡದ ಮಹಾಂತಲಿಂಗ ಶಿವಾಚಾರ್ಯರು, ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಜಿಪಂ ಮಾಜಿ ಸದಸ್ಯ ಕೆ. ಕರಿಯಪ್ಪ, ಕಾಂಗ್ರೆಸ್ ಮುಖಂಡ ಮಲ್ಲನಗೌಡ ಕನ್ನಾರಿ, ಸತ್ಯಪ್ಪ ವಳಬಳ್ಳಾರಿ, ತಾಪಂ ಸದಸ್ಯೆ ಚನ್ನಮ್ಮ, ಗ್ರಾಪಂ ಅಧ್ಯಕ್ಷ ಉಪ್ಪಳಪ್ಪ, ಎಪಿಎಂಸಿ ನಿರ್ದೇಶಕ ಶರಣೇಗೌಡ ಗಿಣಿವಾರ, ಶಿಕ್ಷಕ ಬಸವಲಿಂಗಪ್ಪ ಸೇರಿ ಅನೇಕರಿದ್ದರು.
ಡಾ. ಬಾಬು ಜಗಜೀವನರಾಂ ಜಯಂತಿ ಆಚರಣೆ
ರಾಯಚೂರು: ಸ್ಥಳೀಯ ಮನೋರಮಾಬಾಯಿ ಛಯಿಗನ್ ಲಾಲ್ ಠಾಕರ್ಸಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಡಾ.ಬಾಬು ಜಗಜೀವನರಾಂ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಜಗದೇವಪ್ಪ ಮಾತನಾಡಿದರು. ಶಿಕ್ಷಕ ವೆಂಕಟರಾವ್ ಜಗಜೀವನರಾಂ ಭಾವಚಿತ್ರಕ್ಕೆ ಗೌರವ ಸಲ್ಲಿಸಿದರು. ಸ್ಪಿಲ್ ಪತ್ರಿಕೋದ್ಯಮ ಕಾಲೇಜು ಪ್ರಾಚಾರ್ಯ ಬಿ. ಅನ್ನಪೂರ್ಣ, ಸಮುದಾಯದತ್ತ ಶಾಲೆ ನೋಡಲ್ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ನವಕರ್ನಾಟಕ ಜಾಗೃತಿ ಸಂಘದಿಂದ: ಇಲ್ಲಿನ ನವಕರ್ನಾಟಕ ಜಾಗೃತಿ ಸಂಘದಿಂದ ಶನಿವಾರ ಡಾ.ಬಾಬು ಜಗಜೀವನರಾಂ ಅವರ ಜಯಂತಿ ಸಂದರ್ಭ ಅವರ ರೈಲು ನಿಲ್ದಾಣದ ಬಳಿಯಿರುವ ವೃತ್ತದಲ್ಲಿನ ಪುತ್ಥಳಿಗೆ ಗೌರವ ಸಲ್ಲಿಸಲಾಯಿತು. ಡಾ. ಬಾಬು ಜಗಜೀವನರಾಂ 107ನೇ ಜಯಂತಿ ಅಂಗವಾಗಿ ಸಂಘಟನೆಯ ಅಧ್ಯಕ್ಷ ವಿಶ್ವನಾಥ ಪಟ್ಟಿ ಪುತ್ಥಳಿಗೆ ಮಾರ್ಲಾಪಣೆ ಮಾಡಿ ಗೌರವ ಸಲ್ಲಿಸಿದರು. ಸಮಿತಿಯ ಪದಾಧಿಕಾರಿಗಳಾದ ಹುಸೇನ್ ಬಾಷಾ, ಮಹೇಶ್ ಕುಮಾರ್, ಎಂ.ಅಶೋಕ, ಹನುಮಂತು, ಈರಣ್ಣ, ಉದಯಕುಮಾರ್, ಧರ್ಮರಾಜ್, ಸುರೇಶ್ ಸೇರಿದಂತೆ ಅನೇಕರಿದ್ದರು.
ಜೋಡೆತ್ತಿನ ತಿರುಗುಬಂಡಿ ಸ್ಪರ್ಧೆಯಲ್ಲಿ ಸಾಧನೆ
ಸಿಂಧನೂರು: ತಾಲೂಕಿನ ಬಳಗಾನೂರಲ್ಲಿ ಯುಗಾದಿ ಉತ್ಸವದ ನಿಮಿತ್ತ ಬಳಗಾನೂರ ಸೀಮಾದ ಎರೆಹೊಲದ ಗುರುವಿನ ಹೊಲದಲ್ಲಿ ಈಚೆಗೆ ಜರುಗಿದ ಜೋಡೆತ್ತಿನ ಚಕ್ರಬಂಡಿ(ತಿರುಗು ಬಂಡಿ)ಸ್ಪರ್ಧೆಯಲ್ಲಿ ಬಳಗಾನೂರ ಬಸವೇಶ್ವರ ನಗರದ ರೈತ ಬಸವರಾಜ ಬೆಂಚಮರಡಿ ಅವರ ಜೋಡೆತ್ತು ಪ್ರಥಮ ಬಹುಮಾನ ಗಳಿಸಿವೆ. ಪ್ರಥಮ ಬಹುಮಾನವಾಗಿ ಜೋಡೆತ್ತಿನ ಮಾಲೀಕರಿಗೆ 10 ತೊಲೆ ಬೆಳ್ಳಿ ಕಡಗ ವಿತರಿಸಲಾಯಿತು. ಅದೇ ರೀತಿ ದ್ವಿತೀಯ ಬಹುಮಾನವನ್ನು ಬಳಗಾನೂರಿನ ರೈತ ಅಮರಪ್ಪ ಗರಡಿ ಎತ್ತುಗಳು ಪಡೆದು 2,001 ಬಹುಮಾನ ಪಡೆದರೆ, ತೃತೀಯ ಬಹುಮಾನವಾಗಿ 1,001ನ್ನು ಗ್ರಾಮದ ಹನುಮಂತ ಕಾಯಿಗಡ್ಡಿ ಅವರ ಎತ್ತುಗಳು ಪಡೆದವು. ಸ್ಪರ್ಧಾಕೂಟವನ್ನು ವಿರಕ್ತಮಠದ ಬಸಲಿಂಗಯ್ಯಸ್ವಾಮಿ, ಹಾಲುಮತ ಸಮಾಜದ ಗುರುಗಳಾದ ತಿಪ್ಪಣ್ಣ ಪೂಜಾರ, ಶಂಕರ ದೇವರಮಠದ ಮಹಾಬಳೇಶ್ವರಸ್ವಾಮಿ ಪೂಜೆ ಸಲ್ಲಿಸಿದರು. ಸ್ಪರ್ಧೆಗೆ ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಮಾಲಿಪಾಟೀಲ್ ಚಾಲನೆ ನೀಡಿದರು. ವಿರುಪಣ್ಣ ಗುತ್ತೇದಾರ, ಹನುಮಂತಪ್ಪ ಕ್ಯಾತನಹಟ್ಟಿ, ಮರಿದೇವಪ್ಪ ಪೂಜಾರಿ, ಹೊನ್ನಪ್ಪ ಪೂಜಾರಿ, ಸೇರಿ ಅನೇಕರಿದ್ದರು.
ಹೊಟ್ಟೆಪಾಡಿಗಾಗಿ ಶಿಕ್ಷಣ ಬೇಡ: ಸರಸ್ವತಿಶ್ರೀ
ಸಿಂಧನೂರು: ಕೇವಲ ಹೊಟ್ಟೆ ಪಾಡಿಗಾಗಿ ಶಿಕ್ಷಣ ಪಡೆಯುವುದು ಬೇಡ. ಜ್ಞಾನ ವೃದ್ಧಿಗೆ ಶಿಕ್ಷಣ ಪಡೆದುಕೊಳ್ಳಬೇಕೆಂದು ಧಾರವಾಡ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿಜಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ನಗರದ ಕೋಟೆ ಕಲ್ಯಾಣ ಮಂಟಪದಲ್ಲಿ ಬುಧವಾರ ಆದಿತ್ಯ ಸ್ವತಂತ್ರ ಪ.ಪೂ. ಹಾಗೂ ಪದವಿ ಮಹಾವಿದ್ಯಾಲಯದ ವಾರ್ಷಿಕೋತ್ಸವ ಬಿಕಾಂ ಅಂತಿಮ ಮತ್ತು ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ನೇತ್ರ ತಜ್ಞ ಡಾ. ಚನ್ನನಗೌಡ ಪಾಟೀಲ್ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಕೆ. ಚಕ್ರವರ್ತಿ ಮಾತನಾಡಿದರು. ಉಪನ್ಯಾಸಕರಾದ ಮಂಜುನಾಥ ಕಂಬಾಳಿಮಠ, ಸತ್ಯಪ್ರಕಾಶ ಮಾತನಾಡಿದರು. ಸಂಸ್ಥೆ ಕಾರ್ಯದರ್ಶಿ ವೆಂಕಟರತ್ನಾವತಿ ವಾರ್ಷಿಕ ವರದಿ ವಾಚಿಸಿದರು. ಕಾಲೇಜ್ಗೆ ಹೆಚ್ಚು ಅಂಕ ಪಡೆದ ಹಾಗೂ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸನ್ಮಾನ: ಧಾರವಾಡ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿಜಯಾನಂದ ಸರಸ್ವತಿ ಸ್ವಾಮೀಜಿ ಹಾಗೂ ಉಪನ್ಯಾಸಕ ಮಂಜುನಾಥರಿಗೆ ಕಾಲೇಜ್ ವತಿಯಿಂದ ಸನ್ಮಾನಿಸಲಾಯಿತು.
ಮತದಾರರ ಜಾಗೃತಿ ಜಾಥಾ ಯಶಸ್ವಿ
ಸಿಂಧನೂರು: ನಗರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಇತ್ತೀಚೆಗೆ ಮತದಾರರ ಜಾಗೃತಿ ಜಾಥಾ ಆಯೋಜಿಸಲಾಗಿತ್ತು. ನಗರದ ತಹಸೀಲ್ದಾರ್ ಕಚೇರಿಯಿಂದ ಪ್ರಾರಂಭಗೊಂಡ ಜಾಥಾ ಬಸವೇಶ್ವರ ವೃತ್ತ, ನಟರಾಜ ಕಾಲನಿ, ಬಡಿಬೇಸ್, ಹಳೇಬಜಾರ್ ಮಾರ್ಗವಾಗಿ ಸಾಗಿತು. ತಹಸೀಲ್ದಾರ್ ಜಗನ್ನಾಥರೆಡ್ಡಿ, ಸಿಡಿಪಿಒ ಯೋಗಿತಾ ಬಾಯಿ, ಸರಸ್ವತಿ, ಸುನಿತಾ, ಮಂಗಳಾ, ಲಿಂಗನಗೌಡ ಇದ್ದರು.
ಕಾರ್ಮಿಕರಿಗೆ ವೇತನ ಸಹಿತ ರಜೆ
ರಾಯಚೂರು ವರದಿ: ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡುವಂತೆ ಅನುಕೂಲ ಕಲ್ಪಿಸಲು ಕಾರ್ಮಿಕರಿಗೆ ಕಡ್ಡಾಯ ಮತದಾನ ಮಾಡಲು ಸೂಚಿಸಿರುವ ಕಾರ್ಮಿಕ ಇಲಾಖೆಯು ಮತದಾನ ದಿನದಂದು ವೇತನ ಸಹಿತ ರಜೆ ನೀಡಲು ಆದೇಶಿಸಿದೆ. ಕಾರ್ಮಿಕ ಇಲಾಖೆಯ ಕಾರ್ಯ ವ್ಯಾಪ್ತಿಯಲ್ಲಿನ ಕಾರ್ಖಾನೆ ಮತ್ತು ಅಂಗಡಿ ವಾಣಿಜ್ಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಕಾರ್ಮಿಕ ವರ್ಗದವರಿಗೆ ಕಡ್ಡಾಯವಾಗಿ ಮತದಾನ ಮಾಡಲು ಏ.17ರಂದು ವೇತನ ಸಹಿತ ರಜೆ ನೀಡಲು ಜಿಲ್ಲಾ ಕಾರ್ಮಿಕ ಅಧಿಕಾರಿ ಆರತಿ ಅವರು ಎಲ್ಲ ಉದ್ಯಮಿಗಳಿಗೆ ಸೂಚಿಸಿದ್ದಾರೆ.
ಲೆದರ್ ಬಾಲ್ ಕ್ರಿಕೆಟ್ ತರಬೇತಿ ಶಿಬಿರ 10ರಿಂದ
ಸಿಂಧನೂರು: ನಗರದ ಬಾಲಾಜಿ ಸ್ಪೋರ್ಟ್ಸ್ ಕ್ಲಬ್ ಹಾಗೂ ಮೀನಾಕ್ಷಿ ಪಬ್ಲಿಕ್ ಶಾಲೆ ಸಂಯುಕ್ತಾಶ್ರಯದಲ್ಲಿ ಏ.10ರಿಂದ ಆದರ್ಶ ಕಾಲನಿಯ ಮೀನಾಕ್ಷಿ ಪಬ್ಲಿಕ್ ಶಾಲೆ ಆವರಣದಲ್ಲಿ 15 ವರ್ಷದೊಳಗಿನವರ ಲೆದರ್ ಬಾಲ್ ಕ್ರಿಕೆಟ್ ತರಬೇತಿ ಶಿಬಿರ ಆಯೋಜಿಸಲಾಗಿದೆ. ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿಚ್ಛಿಸುವವರು ವ್ಯವಸ್ಥಾಪಕ ಕೆ.ಶ್ರೀನಿವಾಸ ಅವರನ್ನು ಸಂಪರ್ಕಿಸಲು ಸೂಚಿಸಿದ್ದು, ತಾಲೂಕಿನ ಕ್ರೀಡಾಪಟು ಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕಳೆದ 7 ವರ್ಷಗಳಿಂದ ಕ್ರಿಕೆಟ್ ತರಬೇತಿ ಶಿಬಿರ ಆಯೋಜಿಸಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ. 15 ವರ್ಷ ವಯಸ್ಸು ಮೇಲ್ಪಟ್ಟ ಬಾಲಕರು ತರಬೇತಿಯಲ್ಲಿ ಪಾಲ್ಗೊಳ್ಳಲು ಮೊ. 89701 60070, 99640 19733 ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.
ನ್ಯಾಯ, ನಿಷ್ಠೆ, ಪ್ರಾಮಾಣಿಕತೆ ಮೆರೆಯಿರಿ: ರಾಯಣ್ಣವರ್
ಸಿಂಧನೂರು: ನಗರದ ಇಬ್ಬರು ನ್ಯಾಯವಾದಿಗಳು ನ್ಯಾಯಾಧೀಶರಾಗಿ ನೇಮಕಗೊಂಡಿರುವುದು ಸಂತಸದ ಸಂಗತಿ. ಇಬ್ಬರೂ ನ್ಯಾಯ ನಿಷ್ಠುರಿಗಳಾಗಿ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಲಿ ಎಂದು ಪ್ರಧಾನ ನ್ಯಾಯಾಧೀಶೆ ಬಿ.ಎಸ್. ರಾಯಣ್ಣವರ್ ಸಲಹೆ ನೀಡಿದರು. ನಗರದ ನ್ಯಾಯವಾದಿಗಳ ಸಭಾಂಗಣದಲ್ಲಿ ಶನಿವಾರ ನಡೆದ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಚನ್ನಪ್ಪ ಬಂಗಾರಶೆಟ್ರು, ಮರಿಯಪ್ಪ ತುರ್ವಿಹಾಳ ಕಿರಿಯ ವಯಸ್ಸಿನಲ್ಲಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ಅವರು ಏ.9ರಂದು ಬೆಂಗಳೂರಿನ ಹೈಕೋರ್ಟ್ನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಏ.15ರಂದು ನ್ಯಾಯಾಧೀಶರಾಗಿ ಸೇವೆ ಆರಂಭಿಸಲಿದ್ದಾರೆ ಎಂದರು. ನೂತನವಾಗಿ ನ್ಯಾಯಾಧೀಶರಾಗಿ ನೇಮಕಗೊಂಡ ಇಬ್ಬರೂ ನ್ಯಾಯಾಧೀಶರನ್ನು ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಭೀಮನಗೌಡ ಆತ್ಮೀಯವಾಗಿ ಸನ್ಮಾನಿಸಿ, ಗೌರವಿಸಿದರು. ಇದೇ ವೇಳೆ ವಿವಿಧ ನ್ಯಾಯವಾದಿಗಳು ಸಹ ಸನ್ಮಾನಿಸಿದರು. ವಿ.ಎ. ಪಾಟೀಲ್, ಎನ್. ಕೋಟೇಶ್ವರರಾವ್, ಟಿ. ರಾಜಶೇಖರಯ್ಯ, ಅಬ್ದುಲ್ಗನಿಸಾಬ್, ಅಮರೇಗೌಡ ಕಲ್ಮಂಗಿ, ಇದ್ದರು.
ಮುಂದಿನ ಪೀಳಿಗೆಗೆ ತತ್ವಪದ ಕಲೆ ಅವಶ್ಯ: ಡಾ. ಬಳಿಗಾರ
ಸಿಂಧನೂರು: ತತ್ವಪದಕಾರರು ರಚಿಸಿದ ತತ್ವಪದಗಳು, ತತ್ವಪದ ಸಾಹಿತ್ಯ ಹಾಗೂ ಹಾಡಿನ ಕಲೆಯನ್ನು ಮುಂದಿನ ಯುವ ಜನಾಂಗಕ್ಕೆ ತಿಳಿಸಬೇಕಾಗಿದೆ ಎಂದು ವಿಸ್ಡಮ್ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಬಸವರಾಜ ಬಳಿಗಾರ ಹೇಳಿದರು. ನಗರದ ಜನತಾ ಕಾಲೋನಿಯಲ್ಲಿರುವ ಹಂಪಮ್ಮ ವೆಂಕಟರಾವ್ ಬಾದರ್ಲಿ ಸ್ಮಾರಕ ಪ್ರೌಢಶಾಲೆಯಲ್ಲಿ ತಾಲೂಕು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿದ್ದ ದಿ. ಬಸನಗೌಡ ಬಾದರ್ಲಿ ಸ್ಮಾರಕದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ತತ್ವಪದ ಸಾಹಿತ್ಯ ಕುರಿತು ಉಪನ್ಯಾಸದಲ್ಲಿ ಕಡಕೋಳ ಮಡಿವಾಳಪ್ಪ, ಹುಬ್ಬಳ್ಳಿಯ ಸಿದ್ಧಾರೂಢರ ಹಾಗೂ ಶಿಶುನಾಳ ಷರೀಫರ ಹಲವಾರು ತತ್ವಪದಗಳನ್ನು ಉಲ್ಲೇಖಿಸಿ ಮಾತನಾಡಿದರು. ತತ್ವಪದ ಗಾಯಕರಾದ ನಾರಾಯಣಪ್ಪ ಮಾಡಶಿರವಾರ ಮಾತನಾಡಿ, ಶಿಶುನಾಳ ಷರೀಫರ 'ನಿನ್ನೊಳಗ ನೀನು ತಿಳಿದು ನೋಡಣ್ಣ..' ಹಾಡನ್ನು, ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಯ ಸಂಗೀತ ಶಿಕ್ಷಕ ಮಾರುತೇಶ ಮೇಣದಾಳ ಅವರು ಕಡಕೋಳ ಮಡಿವಾಳಪ್ಪನವರ 'ನಾ ಹೋದ ಮ್ಯಾಲ.. ನೀ ಹ್ಯಾಂಗ ಇರುತಿ ನಿನ್ನ ಹ್ಯಾಂಗ ಮರೆಯಲಿ ಗುಣವಂತಿ' ಮತ್ತು ಕಲಾವಿದ ಭಕ್ಷಿದರವೇಶ ಅವರು 'ತರವಲ್ಲ ತಗೀ ನಿನ್ನ ತಂಬೂರಿ..' ತತ್ವಪದ ಹಾಡುಗಳನ್ನು ಹಾಡಿ ರಂಜಿಸಿದರು.