ಶಿವನಗೌಡ ಲಿಂಗಾಯತ ವಿರೋಧಿಯಲ್ಲ
ಕ.ಪ್ರ. ವಾರ್ತೆ ರಾಯಚೂರು ಏ.6
ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ದೇವದುರ್ಗ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ವಿಚಾರ ಮರೆಮಾಚಲು ಕಾಂಗ್ರೆಸ್ ನಾಯಕರು ಯತ್ನಿಸುತ್ತಿದ್ದು, ಈ ನಿಟ್ಟಿನಲ್ಲಿ ಶಿವನಗೌಡ ನಾಯಕ ಲಿಂಗಾಯತ ವಿರೋಧಿ ಎಂದು ಬಿಂಬಿಸುವ ಕಾರ್ಯ ಮಾಡುತ್ತಿದ್ದಾರೆಂದು ಲಿಂಗಾಯತ ಸಮಾಜದ ಮುಖಂಡ ಗಂಗಾಧರ ಎಲಿ ಆರೋಪಿಸಿದರು.
ನಗರದಲ್ಲಿ ಭಾನುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲಿಂಗಾಯತ ಸಮಾಜದವರು ತಮ್ಮ ಸ್ವಇಚ್ಛೆಯಂತೆ ಮತದಾನ ಮಾಡಲು ಸ್ವತಂತ್ರರಾಗಿದ್ದಾರೆ. ಆದರೆ ಸಮಾಜದ ಮತದಾರರಲ್ಲಿ ಬಿಜೆಪಿ ಬಗ್ಗೆ ದ್ವೇಷ ಮೂಡಿಸುವ ಕಾರ್ಯ ಕಾಂಗ್ರೆಸ್ ನಾಯಕರು ಮಾಡುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಡೆದಾಳುವ ನೀತಿ: ದೇವದುರ್ಗ ಕ್ಷೇತ್ರದಲ್ಲಿ ಕೋಟ್ಯಂತರ ರು. ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವ ಬಿಜೆಪಿ ಅಭ್ಯರ್ಥಿಯು ವೀರಶೈವ ಸಮಾಜದ ಅನೇಕರಿಗೆ ಉನ್ನತ ಹುದ್ದೆಗಳನ್ನು ದೊರೆಯುವಂತೆ ಮಾಡಿದ್ದಾರೆ. ಹಾಗೆಯೇ ವೀರಶೈವ ಸಮಾಜದ ಅನೇಕ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ನಿರಂತರ ಸಹಾಯ ಒದಗಿಸಿದ್ದಾರೆಂದು ಹೇಳಿದರು.
ದೇವದುರ್ಗ ಲೋಕಸಭೆ ಕ್ಷೇತ್ರವು ಕ್ಷೇತ್ರ ಪುನಾವಿಂಗಡಣೆಯಾಗಿ ಎಸ್ಟಿಗೆ ಮೀಸಲಾಗಲು ಹಾಲಿ ಶಾಸಕ ವೆಂಕಟೇಶ ನಾಯಕ ಅವರೇ ನೇರ ಕಾರಣರಾಗಿದ್ದಾರೆ. ಅವರು ಪುನಾವಿಂಗಡಣೆ ಸಮಿತಿಯ ಸದಸ್ಯರಾಗಿದ್ದರು. ಜಿಲ್ಲೆಯ ನಾಲ್ಕು ಕ್ಷೇತ್ರಗಳು ಎಸ್ಟಿಗೆ ಮೀಸಲಾಗಲೂ ಅವರು ಕಾರಣರಾಗಿದ್ದು, ಇನ್ನುಳಿದ ಸಮಾಜದವರಿಗೆ ಅದರಿಂದಾಗಿ ಸ್ಪರ್ಧೆಗೆ ಅವಕಾಶವಿಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಅಭ್ಯರ್ಥಿ ಲಿಂಗಾಯತ ವಿರೋಧಿಯಲ್ಲ. ಸಮಗ್ರ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಕೋನ ಹೊಂದಿರುವ ಅವರು ಸದ್ಯದ ಪರಿಸ್ಥಿತಿಯಲ್ಲಿ ಸಮರ್ಥ ನಾಯಕರಾಗಿದ್ದು, ಈ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಲಿಂಗಾಯತ ಸಮಾಜದವರು ಮತದಾನ ಮಾಡಲು ಸ್ವತಂತ್ರರಾಗಿದ್ದು, ಅವರ ಮೇಲೆ ಒತ್ತಡ ಹೇರುವುದು ಸೂಕ್ತವಲ್ಲ ಎಂದು ಹೇಳಿದರು. ಮಲ್ಲನಗೌಡ ಸಾಹುಕಾರ್, ಚಂದ್ರಶೇಖರಗೌಡ ಜಾಡಲದಿನ್ನಿ, ಪ್ರಕಾಶ ಪಾಟೀಲ್ ಜೇರಬಂಡಿ, ಬಸವರಾಜಪ್ಪಗೌಡ ಕರಡಿಗುಡ್ಡ, ಗಂಗಾಧರ ಇದ್ದರು.