ಎಸ್‌ಯುಸಿಐ-ಸಿ ಪ್ರಚಾರಕ್ಕೆ ಜೀಪ್ ಜಾಥಾ ಚಾಲನೆ
ರಾಯಚೂರು: ಪ್ರಸಕ್ತ ಲೋಕಸಭೆ ಚುನಾವಣೆ ಹಿನ್ನೆಲೆ ಎಸ್‌ಯುಸಿಐ-ಸಿ ಅಭ್ಯರ್ಥಿ ಸೋಮಶೇಖರ್ ಯಾದಗಿರಿ ಅವರು ಇತ್ತೀಚೆಗೆ ನಗರದಲ್ಲಿ ಚುನಾವಣೆ ಪ್ರಚಾರಾರ್ಥ ಜೀಪ್ ಜಾಥಾಕ್ಕೆ ನಗರದ ತೀನ್ ಕಂದೀಲ್ ವೃತ್ತದಲ್ಲಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿ, ಪಕ್ಷದ ವಿಚಾರ ಮತ್ತು ಹೋರಾಟವನ್ನು ಜನರಿಗೆ ಮನವರಿಕೆ ಮಾಡಿ ಮತ ನೀಡುವಂತೆ ಮನವಿ ಮಾಡುವ ಉದ್ದೇಶದಿಂದ ಜೀಪ್ ಜಾಥಾ ಆರಂಭಿಸಲಾಗಿದೆ. ಬಿಜೆಪಿ- ಕಾಂಗ್ರೆಸ್ ಅಭ್ಯರ್ಥಿಗಳು ವೈಯಕ್ತಿಕ ನಿಂದನೆಯಲ್ಲಿ ಕಾಲಹರಣ ಮಾಡುವ ಮೂಲಕ ಮತದಾರರನ್ನು ನೈಜ ಸಮಸ್ಯೆಗಳ ಬಗ್ಗೆ ವಿಷಯ ಪ್ರಸ್ತಾಪಿಸದಂತೆ ಮಾಡಿದ್ದಾರೆಂದು ಆರೋಪಿಸಿದರು. ಕ್ಷೇತ್ರದ ಜನತೆ ಇಂದಿಗೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೆಲಸ ಹುಡುಕಿ ಗುಳೆ ಹೋಗುವವರ ಸಂಖ್ಯೆ ಕಡಿಮೆಯಾಗಿಲ್ಲ. ಬಹಳಷ್ಟು ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆಯಿದೆ. ನಾರಾಯಣಪುರ ಬಲದಂಡೆ ಕಾಲುವೆ ವಿಸ್ತರಣೆ ಕಾಮಗಾರಿ ಚಾಲನೆ ಪಡೆದಿಲ್ಲ ಎಂದು ಟೀಕಿಸಿದರು. ಅಧಿಕಾರ ಹಿಡಿಯುವುದೇ ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಪರಮ ಧ್ಯೇಯವಾಗಿದೆ. ಜನತೆ ಈ ಪಕ್ಷಗಳ ಹಾಗೂ ಅಭ್ಯರ್ಥಿಗಳ ರಾಜಕೀಯವನ್ನು ಅರಿತು ಜನರಪರ ಹೋರಾಟ ಬೆಳೆಸುತ್ತಿರುವ ಎಸ್‌ಯುಸಿಐ-ಸಿ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.