ಅನುಮತಿ ಇಲ್ಲದೇ ಬಳಕೆ; ಧ್ವನಿವರ್ಧಕ ವಶಕ್ಕೆ
ರಾಯಚೂರು: ಶ್ರೀರಾಮನವಮಿ ಸಂದರ್ಭ ನಗರದಲ್ಲಿ ಆರ್ಯ ಸಮಾಜದಿಂದ ನಡೆಸಿದ ಶ್ರೀರಾಮನ ಭಾವಚಿತ್ರದ ಮೆರವಣಿಗೆಯ ವೇಳೆ ಅನುಮತಿ ಪಡೆಯದೇ ಧ್ವನಿವರ್ಧಕ ಬಳಕೆ ಮಾಡಿದ್ದಕ್ಕೆ ಪೊಲೀಸರು ಧ್ವನಿವರ್ಧಕ ವಶಪಡಿಸಿಕೊಂಡದ್ದು ಮೆರವಣಿಗೆಯಲ್ಲಿದ್ದವರ ಆಕ್ರೋಶಕ್ಕೆ ಕಾರಣವಾದ ಪ್ರಸಂಗ ಮಂಗಳವಾರ ನಗರದಲ್ಲಿ ನಡೆಯಿತು.
ನಗರದ ಆರ್ಯ ಸಮಾಜದಿಂದ ಶ್ರೀರಾಮನವಮಿ ಅಂಗವಾಗಿ ಶ್ರೀರಾಮನ ಭಾವಚಿತ್ರದ ಮೆರವಣಿಗೆ ಆಯೋಜಿಸಲಾಗಿತ್ತು. ನಗರದ ತೀನ್‌ಕಂದೀಲ್ ವೃತ್ತದಿಂದ ರೇಲ್ವೆ ನಿಲ್ದಾಣ ರಸ್ತೆಯಲ್ಲಿರುವ ರಾಮಮಂದಿರದವರೆಗೆ ಮೆರವಣಿಗೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಮೆರವಣಿಗೆಯಲ್ಲಿ ಧ್ವನಿವರ್ಧಕ ಬಳಸಿದ್ದರಿಂದ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಲೋಕಸಭೆ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಲ್ಲಿದೆ. ಪರವಾನಗಿಯಿಲ್ಲದೇ ಧ್ವನಿವರ್ಧಕ ಬಳಕೆ ಮಾಡುವಂತಿಲ್ಲ ಎಂದು ಎಚ್ಚರಿಸಿ ವಶಕ್ಕೆ ಪಡೆದರು. ಇದರಿಂದ ಆಕ್ರೋಶಗೊಂಡ ಮೆರವಣಿಗೆಯಲ್ಲಿದ್ದವರು ಧ್ವನಿವರ್ಧಕವನ್ನು ಹಿಂದಿರುಗಿಸುವಂತೆ ಮಿಂಚಿನ ಮುಷ್ಕರಕ್ಕೆ ಮುಂದಾದರು. ಆದರೆ ಪೊಲೀಸರು ಸಮಾಜದವರಿಗೆ ಸಮಾಧಾನಪಡಿಸಿದ ನಂತರ ಮೆರವಣಿಗೆ ನಡೆಯಿತು.