ಉರ್ದು ಭಿತ್ತಿಪತ್ರ ಬಿಡುಗಡೆ
ರಾಯಚೂರು: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಅಲ್ಪಸಂಖ್ಯಾತ ಮತದಾರರ ಅನುಕೂಲಕ್ಕಾಗಿ ರೂಪಿಸಿದ ಮತದಾರರ ಜಾಗೃತಿ ಕುರಿತ ಉರ್ದು ಭಾಷೆಯ ಭಿತ್ತಿಪತ್ರವನ್ನು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಬಿಡುಗಡೆಗೊಳಿಸಿದರು.
ಅವರು ಈ ಸಂದರ್ಭ ಮಾತನಾಡಿ, ಭಾಷೆಯ ತೊಂದರೆಯಿಂದ ಹಲವು ಜನರು ಮತದಾನದ ಮಹತ್ವ ಅರಿಯದೇ ಮತದಾನದಿಂದ ದೂರವಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಉರ್ದು ಭಾಷೆಯಲ್ಲಿ ಸಹ ಮತದಾನದ ಜಾಗೃತಿ ಕುರಿತು ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ವಿಜಯ ಜ್ಯೋತ್ಸ್ನಾ, ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಡಿಡಿಪಿಐ ರಾಮಾಂಜನೇಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ವಯಸ್ಕರ ಶಿಕ್ಷಣಾಧಿಕಾರಿ ಇಂದಿರಾ, ಕ್ಷೇತ್ರ ಶಿಕ್ಷಣಾ ಧಿಕಾರಿ ಮಲ್ಲಿಕಾರ್ಜುನ, ವಾರ್ತಾಧಿಕಾರಿ ಟಿ. ಕನುಮಪ್ಪ ಇದ್ದರು.