ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕೇಂದ್ರ-ರಾಜ್ಯ ಸರ್ಕಾರಗಳ ಸಾಧನೆ ಕಾಂಗ್ರೆಸ್ ಅಭ್ಯರ್ಥಿ ಗೆಲವಿಗೆ ಸಹಕಾರಿ

Rashmi Kasaragodu
Updated On : 9 Apr 2014, 10:21 am

ಕ.ಪ್ರ. ವಾರ್ತೆ    ಲಿಂಗಸ್ಗೂರು    ಏ.8
ಕೇಂದ್ರದ ಯುಪಿಎ ಸರ್ಕಾರ ಹಾಗೂ ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರದ ಸಾಧನೆಗಳು ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ. ನಾಯಕರ ಗೆಲವಿಗೆ ಸಹಕಾರಿಯಾಗಲಿವೆ ಎಂದು ಮಾಜಿ ಶಾಸಕ ಸೈಯದ್ ಯಾಸೀನ್ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ಯುಪಿಎ ಸರ್ಕಾರ ನೀರಾವರಿ, ವಿದ್ಯುತ್, ಕೃಷಿ, ಕೈಗಾರಿಕೆ ಸೇರಿದಂತೆ ಎಲ್ಲ ರಂಗಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡಿದೆ. ಭೂಕಂಪ, ನೆರೆ ಸಂಭವಿಸಿದಾಗ ಪ್ರಧಾನ ಮಂತ್ರಿಗಳು ಹಾಗೂ ಪಕ್ಷ ವರಿಷ್ಠರು ಭೇಟಿ ನೀಡಿ, ಪರಿಹಾರ ಒದಗಿಸುವಲ್ಲಿ ಶ್ರಮಿಸಿದ್ದಾರೆ. ಇಂತಹ ಅನೇಕ ಜನಪರ ಕಾರ್ಯ ದೇಶದ ಜನತೆ ಗಮನಿಸುತ್ತಿದ್ದಾರೆ. ಆದರೆ ಇತ್ತೀಚಿಗೆ ಮಾಧ್ಯಮಗಳ ಮೂಲಕ ಪ್ರಚಾರ ಪಡೆಯುತ್ತಿರುವ ಮೋದಿ ಅಲೆಗೆ ಜನ ಬೆಂಬಲಿಸುವುದಿಲ್ಲ ಎಂದರು.
ಕಾಂಗ್ರೆಸ್ ಇತಿಹಾಸ ಗಮನಿಸಿದರೆ ಜವಹಾರ್ ಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಸೇರಿದಂತೆ ಎಲ್ಲ ಪ್ರಧಾನ ಮಂತ್ರಿಗಳನ್ನು ದೇಶದ ಜನತೆ ಆಯ್ಕೆ ಮಾಡಿದ್ದಾರೆ.
ಅಸಂವಿಧಾನಿಕ: ಕಾಂಗ್ರೆಸ್ ದೇಶದ ಎಲ್ಲ ವರ್ಗಗಳ ಜನರಿಗೆ ಸಮಾನವಾಗಿ ಕಂಡಿದೆ. ಆದರೆ ಚುನಾವಣೆಗೆ ಮುನ್ನವೇ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿರುವುದು ಅಸಂವಿಧಾನಿಕ. ಇಂತಹ ವಿಷಯಗಳ ಬಗ್ಗೆ ಜನತೆ ಗಮನಿಸುತ್ತಾರೆ. ಅದರಂತೆ ಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಬೆಂಬಲಿಸಲಿದ್ದಾರೆಂದು ಹೇಳಿದರು.
ಜನಪರ ಕಾರ್ಯ: ರಾಜ್ಯದಲ್ಲಿ ಮಲ್ಲಿಕಾರ್ಜುನ ಖರ್ಗೆ, ಎಸ್.ಎಂ. ಕೃಷ್ಣಾ, ವೀರಪ್ಪ ಮೊಯ್ಲಿ, ಸಿದ್ದರಾಮಯ್ಯ, ಡಾ.ಜಿ. ಪರಮೇಶ್ವರ ಸೇರಿದಂತೆ ಅನೇಕ ನಾಯಕರು ಜನಪರ ಕಾಳಜಿ ಹೊಂದಿದ್ದಾರೆ. ಕಳೆದ 9 ತಿಂಗಳ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅನ್ನಭಾಗ್ಯ, ಕ್ಷೀರಭಾಗ್ಯ, ಸಾಲಮನ್ನಾ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕಳೆದ 3 ಅವಧಿಯಲ್ಲಿ ಸಂಸದರಾಗಿದ್ದ ಹಾಗೂ ಪ್ರಸ್ತುತ ದೇವದುರ್ಗ ಶಾಸಕರಾದ ಎ. ವೆಂಕಟೇಶ ನಾಯಕರು ಸೌಮ್ಯ ಸ್ವಭಾವದವರಾಗಿದ್ದು, ಅವರು ಸಂಸದರಾಗಿದ್ದಾಗ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಅವರ ಪುತ್ರ ಪಕ್ಷದ ಅಭ್ಯರ್ಥಿ ಬಿ.ವಿ. ನಾಯಕರು ರಾಜಕೀಯ ಅನುಭವ ಮತ್ತು ಉತ್ತಮ ವ್ಯಕ್ತಿತ್ವ ಹೊಂದಿದ್ದಾರೆ. ಈ ಬಾರಿ ಕ್ಷೇತ್ರದ ಜನತೆ ಬಿ.ವಿ. ನಾಯಕರನ್ನು ಬೆಂಬಲಿಸಲಿದ್ದಾರೆಂದರು. ಈ ವೇಳೆ ಪಕ್ಷದ ಮುಖಂಡರಾದ ಲಾಲ್ ಅಹ್ಮದ್ ಸಾಬ, ಖಾದರಪಾಶಾ, ಮಲ್ಲಣ್ಣ ವಾರದ, ಅನೀಸ್ ಪಾಶಾ, ಎಂ.ಡಿ. ರಫೀ ಸೇರಿದಂತೆ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement