ಮೊಬೈಲ್ ಗೋಪುರ ಸ್ಥಾಪನೆ ವೇಳೆ ನಿಯಮ ಪಾಲಿಸಿ: ರೈತ ಸಂಘ
ಲಿಂಗಸ್ಗೂರು: ಕೇಂದ್ರ ಸರ್ಕಾರದ ದೂರ ಸಂಪರ್ಕ ಇಲಾಖೆ ಹಾಗೂ ಪರಿಸರ ಮಾಲಿನ್ಯ ಇಲಾಖೆ ನಿಯಮಗಳ ಪ್ರಕಾರ ಮೊಬೈಲ್ ಗೋಪುರ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ, ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಮಹಾಂತಪ್ಪ ವಿಟ್ಲಾಪುರ ಸಹಾಯಕ ಆಯುಕ್ತರಿಗೆ ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರದ 2006ರ ನಿಯಮದ ಪ್ರಕಾರ ನಿಗದಿ ಪಡಿಸಿದ ಮಾನದಂಡಗಳನ್ನು ಪಾಲಿಸದೆ ಬೇಕಾಬಿಟ್ಟಿಯಾಗಿ ನಾಗರಿಕ ವಸತಿ ಪ್ರದೇಶ, ಶಾಲಾ-ಕಾಲೇಜು, ಆಸ್ಪತ್ರೆಗಳ ಸಮೀಪ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಮೊಬೈಲ್ ಗೋಪುರ ನಿರ್ಮಿಸಿದ ಪರಿಣಾಮ ಅವುಗಳಿಂದ ಹೊರ ಸೂಸುವ ವಿಕಿರಣಗಳು ಮಾನವ ಜೀವಕುಲಕ್ಕೆ ಕಂಟಕಪ್ರಾಯವಾಗಿವೆ.
ನಿಯಮ ಪಾಲನೆ: ಕಾರಣ 2006ರ ನಿಯಮದ ಪ್ರಕಾರ ಶಾಲಾ-ಕಾಲೇಜು, ಆಸ್ಪತ್ರೆ ಮತ್ತು ಬಡಾವಣೆಗಳಿಂದ ಕನಿಷ್ಟ 100 ಮೀಟರ್ ದೂರದಲ್ಲಿ ಗೋಪುರ ಸ್ಥಾಪಿಸಬೇಕು. ಮೊದಲ ಆದ್ಯತೆ ಕಾಡಿನಲ್ಲಿ ಅಳವಡಿಸಲು ಅವಕಾಶ ಕೊಡಬೇಕು ಹಾಗೂ ಸುರಕ್ಷಿತ ಪ್ರಮಾಣ ಪತ್ರ ಪಡೆಯಬೇಕು. ಅಪಘಾತ ಸಮಯದಲ್ಲಿ ಪರಿಹಾರ ನೀಡಲು ದೂರವಾಣಿ ಸಂಸ್ಥೆಯಿಂದ ಕರಾರು ಪತ್ರ ಪಡೆದಿರಬೇಕು. ಕಡಿಮೆ ವಿದ್ಯುತ್ ಕಾಂತಿಯ ತರಂಗಾಂತರ ಕ್ಷಮತೆ ಹೊಂದಿರಬೇಕು. ತಜ್ಞರ ಮುಖಾಂತರ ನಿರ್ವಹಣೆ ಮಾಡಬೇಕು. ಅನುಮತಿ ನೀಡುವ ಪ್ರಾಧಿಕಾರಗಳು ಕಾಲಕಾಲಕ್ಕೆ ತಪಾಸಣೆ ಮಾಡಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.