ಅಪ್ರಾಪ್ತೆ ಅಪಹರಣ, ಅಪರಾಧಿಗಳಿಗೆ ಶಿಕ್ಷೆ
ರಾಯಚೂರು: ದೇವದುರ್ಗ ತಾಲೂಕಿನ ಡೋಣಮರಡಿ ಗ್ರಾಮದಲ್ಲಿ ನಡೆದಿದ್ದ ಅಪ್ರಾಪ್ತೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ನ್ಯಾಯಾಲಯ ನಾಲ್ವರು ಆರೋಪಿಗಳಿಗೆ ತಲಾ ಮೂರು ವರ್ಷ ಕಾರಾಗೃಹ ಶಿಕ್ಷೆ ಹಾಗೂ ತಲಾ 5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಗ್ರಾಮದಲ್ಲಿ 2011ರ ಜ.1ರಂದು ಅಪ್ರಾಪ್ತೆ ದೇವಮ್ಮ ಎಂಬಾಕೆ ದೇವದುರ್ಗ ತಾಲೂಕಿನ ಮಲದಕಲ್ ಗ್ರಾಮದಲ್ಲಿ ಹೊಲದ ಕೆಲಸಕ್ಕೆ ನಬೀಸಾಬ್ ಎಂಬಾತನ ವಾಹನದಲ್ಲಿ ತೆರಳಿದ್ದು, ಮೂತ್ರ ವಿಸರ್ಜನೆಗೆ ಹೋಗಿದ್ದಾಗ ಆರೋಪಿತರಾದ ನಬೀಸಾಬ, ಹುಸೇನಸಾಬ್, ಭಾಷಾ ಎಂಬುವವರು ಟಾಟಾ ಏಸ್ ವಾಹನದಲ್ಲಿ ಆಕೆಯನ್ನು ಅಪಹರಿಸಿ ದೇವದುರ್ಗಕ್ಕೆ ಕರೆತಂದು ಆರೋಪಿ ಸದ್ದಾಂ ಹುಸೇನ್ ಎಂಬಾತನ ಮೂಲಕ ಪೂನಾಕ್ಕೆ ಕಳಿಸಿದ್ದರು. ಪೂನಾಕ್ಕೆ ತೆರಳುವ ಮಾರ್ಗದಲ್ಲಿ ಪರಿಚಯವಾದ ಹನುಮಂತಪ್ಪ ಎಂಬುವವರ ವಾಸದ ಸ್ಥಳದಲ್ಲಿ ಆಕೆಯನ್ನು ಕೂಡಿ ಹಾಕಿದ ಸದ್ದಾಂ ಹುಸೇನ್ ಅತ್ಯಾಚಾರ ಎಸಗಿದ್ದು, ಈ ಬಗ್ಗೆ ದೇವದುರ್ಗ ಪೊಲೀಸರು ನಂತರದಲ್ಲಿ ದೂರು ದಾಖಲಿಸಿದ್ದರು. ತನಿಖೆ ಪೂರೈಸಿದ ಪೊಲೀಸರು ಆರೋಪಿತರಾದ ಸದ್ದಾಂ ಹುಸೇನ್, ನಬಿಸಾಬ್, ಹುಸೇನಸಾಬ್ ಹಾಗೂ ಬಾಷಾ ಅವರ ವಿರುದ್ಧ ದೋಷಾರೋಪ ಸಲ್ಲಿಸಿದ್ದರು. ನಗರದ ಎರಡನೇ ಅಪರ ಸತ್ರ ನ್ಯಾಯಾಧೀಶರಾದ ಕಾಡ್ಲೂರು ಸತ್ಯನಾರಾಯಣಾಚಾರ್ಯ ಅವರು ನಾಲ್ವರು ಆರೋಪಿಗಳಿಗೆ ತಲಾ 3 ವರ್ಷ ಕಾರಾಗೃಹವಾಸ ಹಾಗೂ ತಲಾ 5 ಸಾವಿರ ದಂಡ ವಿಧಿಸಿ ತೀರ್ಪಿತ್ತಿದ್ದಾರೆ. ಸರ್ಕಾರದ ಪರವಾಗಿ ಬಿ.ರಂಗಯ್ಯ ವಾದ ಮಂಡಿಸಿದ್ದರು.