ಎಸ್ಬಿಐ ಎಟಿಎಂ ಬಂದ್,ಗ್ರಾಹಕರ ಪರದಾಟ
ಮುದಗಲ್: ರಾಷ್ಟ್ರೀಕೃತ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುದಗಲ್ ಶಾಖೆಯ ಎಟಿಎಂ ಯಂತ್ರದ ಸೇವೆ ಸ್ಥಗಿತಗೊಂಡಿದ್ದರಿಂದ ಗ್ರಾಹಕರು ಪರದಾಡುವಂತಾಗಿದೆ. ಎಟಿಎಂ ಯಂತ್ರ ದುರಸ್ತಿಯಲ್ಲಿದೆ ಎಂದು ಬ್ಯಾಂಕ್ ವ್ಯವಸ್ಥಾಪಕರು ಯಂತ್ರಕ್ಕೆ ನೋಟಿಸ್ ಅಂಟಿಸಿದ್ದರಿಂದ ಗ್ರಾಹಕರು ಎಟಿಎಂ ಬಳಿ ಹಣ ಪಡೆಯಲು ಬಂದು ನಿರಾಶೆಯಿಂದ ಮರಳುತ್ತಿದ್ದಾರೆ. ಕಳೆದ ಒಂದು ವಾರದಿಂದ ಬಂದ್ ಆಗಿದ್ದರೂ ಬ್ಯಾಂಕ್ ಅಧಿಕಾರಿಗಳು ಅದರ ದುರಸ್ತಿ ಬಗ್ಗೆ ಹೆಚ್ಚಿನ ಮಹತ್ವ ನೀಡಿಲ್ಲ ಎಂದು ಗ್ರಾಹಕರು ಆರೋಪಿಸಿದ್ದಾರೆ.
ಮುದಗಲ್‌ನಲ್ಲಿದ್ದ ಏಕೈಕ ಎಟಿಎಂ ಇದಾಗಿತ್ತು. ಇತ್ತೀಚೆಗೆ ಕರ್ನಾಟಕ ಬ್ಯಾಂಕ್‌ನವರು ಒಂದು ಎಟಿಎಂ ಆರಂಭಿಸಿದೆ. ಆದರೆ ಅದೂ ಸದಾ ಜನಜಂಗುಳಿಯಿಂದ ಕೂಡಿರುತ್ತದೆ. ಅಲ್ಲದೆ ಪಟ್ಟಣ ವ್ಯಾಪ್ತಿಯಲ್ಲಿ ಎಸ್‌ಬಿಐ ಗ್ರಾಹಕರೇ ಹೆಚ್ಚಾಗಿದ್ದು, ಮೂರು ಬಾರಿಗಿಂತ ಹೆಚ್ಚು ಅನ್ಯ ಬ್ಯಾಂಕಿನ ಎಟಿಎಂ ಸೇವೆ ಪಡೆದರೆ ಸರ್ವಿಸ್ ಚಾರ್ಜ್ ತೆರಬೇಕಾಗುತ್ತಿದೆ ಎಂದು ಗ್ರಾಹಕರು ದೂರಿದ್ದಾರೆ.
ತೊಂದರೆ: ಎಸ್‌ಬಿಐ ಎಟಿಎಂ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದ್ದ ಖಾಸಗಿ ಕಟ್ಟಡದಲ್ಲಿ ನಿರ್ಮಿಸಲಾಗಿತ್ತು. ರಸ್ತೆ ಅಗಲೀಕರಣ ಸಮಯದಲ್ಲಿ ಕಟ್ಟಡ ನೆಲಸಮವಾಗಿದ್ದರಿಂದ ಎಟಿಎಂ ಯಂತ್ರವನ್ನು ಬ್ಯಾಂಕಿನ ಒಳ ಆವರಣದಲ್ಲಿ ನಿರ್ಮಿಸಲಾಗಿದೆ. ಬ್ಯಾಂಕಿನ ಸಮಯದಲ್ಲಿ ಮಾತ್ರ ಲಭ್ಯವಿರುತ್ತಿತ್ತು. ಅದೀಗ ದುರಸ್ತಿ ಕಾಣದೆ ಇದ್ದುದರಿಂದ ಗ್ರಾಹಕರು ಪರದಾಡುವಂತಾಗಿದೆ. ಕೂಡಲೇ ಎಟಿಎಂ ದುರಸ್ತಿಗೊಳಿಸಿ ಸಾರ್ವಜನಿಕರ ಸೇವೆಗೆ ಅಣಿ ಮಾಡುವುದು ಸೂಕ್ತವಾಗಿದೆ.