ಮೋದಿ ಪರಕೀಯ ಕಂಪನಿಗಳ ಗುಲಾಮ
ಸಿಂಧನೂರು: ನರೇಂದ್ರ ಮೋದಿ ಪರಕೀಯ ಕಂಪನಿಗಳ ನಿಷ್ಠಾವಂತ ಗುಲಾಮ. ಪ್ರಮುಖ ದಲ್ಲಾಳಿ ಪಕ್ಷಗಳು ಗುಲಾಮಿ ಸೇವೆ ಮಾಡುವ ಮೂಲಕ ಜನರನ್ನು ವಂಚಿಸಿ ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿವೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಡಿ.ಎಚ್. ಪೂಜಾರ್ ಟೀಕಿಸಿದರು.
ನಗರದ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ನಡೆಸುವ ಮೂಲಕ ಪ್ರಚಾರ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ದೇಶದ ಕೃಷಿ, ಕೈಗಾರಿಕೆ, ಸೇವಾ ವಲಯಗಳ ಮೇಲೆ ಹಿಡಿತ ಹೊಂದಿರುವ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ರಕ್ಷಣೆಗಾಗಿ ನರೇಂದ್ರ ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುತ್ತಿವೆ ಎಂದರು.
ಮೊಸಳೆ ಕಣ್ಣೀರು: ಕಾಂಗ್ರೆಸ್, ಬಿಜೆಪಿ ದೇಶದ ಸಂಪತ್ತನ್ನು ಕೊಳ್ಳೆ ಹೊಡೆದಿವೆ. ಪುನಃ ಕೊಳ್ಳೆ ಹೊಡೆಯಲು ಭರವಸೆಗಳ ಮಹಾಪೂರವನ್ನೇ ಹರಿಸುತ್ತಿವೆ. ಜನಸಾಮಾನ್ಯರು ಬೆಲೆ ಏರಿಕೆಯಿಂದ ಕಡುಕಷ್ಟಕರ ಪರಿಸ್ಥಿತಿ ಎದುರಿಸುತ್ತಿದ್ದರೂ, ಕನಿಷ್ಠ ಸಹಾಯಕ್ಕೆ ಬರದೇ ಈಗ ಮೊಸಳೆ ಕಣ್ಣೀರು ಸುರಿಸುತ್ತಿವೆ ಎಂದು ಕಿಡಿಕಾರಿದರು.
ಎಸ್ಇಜೆಡ್ ಮೂಲಕ ಲಕ್ಷಾಂತರ ಹೆಕ್ಟೇರ್ ಭೂಮಿಯನ್ನು ಬರಡಾಗಿಸಿರುವ ಕಾಂಗ್ರೆಸ್, ಕೋಮುವಾದ ವಿಷಬೀಜ ಬಿತ್ತಿ ಕಾರ್ಪೋರೇಟ್ ಬಂಡವಾಳಶಾಹಿಗಳೊಂದಿಗೆ ಶಾಮೀಲಾಗಿ ಅಧಿಕಾರ ಹಿಡಿಯಲು ಹವಣಿಸುತ್ತಿರುವ ಬಿಜೆಪಿಯನ್ನು ತೊಲಗಿಸುವಂತೆ ಅವರು ಮತದಾರರಲ್ಲಿ ಕರೆ ನೀಡಿದರು.
ಜೀವವೈವಿಧ್ಯ ತಾಣವಾದ ಮತ್ತು ತುಂಗಭದ್ರಾ ಡ್ಯಾಂಗೆ ನೀರಿನ ಮೂಲವಾದ ಪಶ್ಚಿಮಘಟ್ಟವನ್ನು ಯುನೆಸ್ಕೋಗೆ ವಹಿಸಿ ಇಡೀ ಜೀವಸಂಕುಲವನ್ನೇ ನುಂಗಲು ಹೊರಟಿರುವ ಪಕ್ಷಗಳಿಗೆ ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸುವಂತೆ ವಿನಂತಿಸಿದರು.
ಮೆರವಣಿಗೆ: ದೋಬಿಗಲ್ಲಿಯಿಂದ ಆರಂಭವಾದ ಮೆರವಣಿಗೆ ರಾಯಚೂರು ಗಂಗಾವತಿ ರಸ್ತೆ ಮೂಲಕ ಸಾಗಿ ಸುಕಾಲಪೇಟೆ, ದೇವರಾಜು ಅರಸುಮಾರುಕಟ್ಟೆ ಹಾಯ್ದು ಮಹೆಬೂಬಿಯಾ ಕಾಲೋನಿ ತಲುಪಿತು. ನಂತರ ಮಹಾತ್ಮಗಾಂಧಿ ಸರ್ಕಲ್ಗೆ ತೆರಳಿತು. 50ಕ್ಕೂ ಹೆಚ್ಚಿನ ಮಹಿಳಾ ಕಾರ್ಯಕರ್ತರು ಭಾಗವಹಿಸಿದ್ದರು.