ರಾಜ್ಯದಲ್ಲಿ ಅಗ್ಗ, ಆಂಧ್ರದಲ್ಲಿ ಸುಗ್ಗಿ!
ಜಗನ್ನಾಥ ಆರ್. ದೇಸಾಯಿ
ಕ.ಪ್ರ. ವಾರ್ತೆ ್ಣ ರಾಯಚೂರು ್ಣ ಏ.9
ಮದ್ಯದ ಅಕ್ರಮ ಸಾಗಣೆ ಮತ್ತು ಹಂಚಿಕೆ ಇತ್ತೀಚೆಗೆ ನಡೆದ ಬಹುತೇಕ ಚುನಾವಣೆಗಳಲ್ಲಿ ಸರ್ವೇ ಸಾಮಾನ್ಯ ಕೇಳಿಬಂದಿರುವ ದೂರು. ಈ ಬಾರಿಯ ಹೊಸ ಬೆಳವಣಿಗೆಯೆಂದರೆ ಕರ್ನಾಟಕದಿಂದ ಆಂಧ್ರಕ್ಕೆ ಮದ್ಯ ಸಾಗಣೆ ದಂಧೆ ನಡೆಯುತ್ತಿರುವುದು ಆತಂಕದ ಮೂಲ. ಗಡಿಯಲ್ಲಿ ಚೆಕ್ ಪೋಸ್ಟ್ಗಳಿದ್ದರೂ ಅವುಗಳ ಕಣ್ತಪ್ಪಿಸಿ ನಡೆಯುವ ದಂಧೆ ತಡೆಯುವುದು ಪೊಲೀಸ್ ಇಲಾಖೆಗೆ ಸವಾಲಾಗಿದೆ.
ರಾಯಚೂರು ಆಂಧ್ರದ ಮಹೆಬೂಬ್ ನಗರ ಜಿಲ್ಲೆಯೊಂದಿಗೆ ಗಡಿ ಹಂಚಿಕೊಂಡಿದೆ. ಇದುವರೆಗೆ ಅಕ್ರಮ ಸೇಂದಿ ಆಂಧ್ರದಿಂದ ಜಿಲ್ಲೆಯೊಳಗೆ ಸಾಗಣೆಯಾಗುತ್ತಿತ್ತು. ಆದರೆ ಸದ್ಯ ಜಿಲ್ಲೆಯಿಂದ ಆಂಧ್ರಕ್ಕೆ ಮದ್ಯದ ಸಾಗಣೆ ಅಕ್ರಮವಾಗಿ ನಡೆಯುತ್ತಿರುವುದು ಇತ್ತೀಚೆಗೆ ಬಯಲಾಗಿದೆ.
ಸೇಂದಿ ಜಾಲ: ಆಂಧ್ರದಲ್ಲಿ ಸಿಎಚ್ ಪೌಡರ್ ಬಳಸಿ ತಯಾರಿಸುವ ಮಾನವನ ಆರೋಗ್ಯಕ್ಕೆ ಹಾನಿಕಾರಕ ಸೇಂದಿ ರಾಜ್ಯದೊಳಕ್ಕೆ ತಂದು ಮಾರುವ ದಂಧೆ ಈಗಲೂ ಜಾರಿಯಲ್ಲಿದೆ. ಪೊಲೀಸರು ಆಗೊಮ್ಮೆ ಈಗೊಮ್ಮೆ ದಾಳಿ ಮಾಡಿ ಸಿಎಚ್ ಪೌಡರ್, ಸೇಂದಿ ಜಪ್ತಿ ಮಾಡುತ್ತಲೇ ಸಾಗಿದ್ದಾರೆ.
ಆದರೆ ಆಂಧ್ರ ಸರ್ಕಾರದ ಅಸಹಕಾರದಿಂದ ಕರ್ನಾಟಕದೊಳಗೆ ನಿಷೇಧಿಸಿದ್ದರೂ ಸೇಂದಿಯನ್ನು ಅಕ್ರಮವಾಗಿ ಸಾಗಿಸುವುದು ಮಾತ್ರ ನಿಂತಿರಲಿಲ್ಲ. ಆಂಧ್ರದ ಗಡಿಯಲ್ಲಿರುವ ಅನೇಕ ಹಳ್ಳಿಗಳ ಮೂಲಕ, ರೈಲಿನ ಮೂಲಕ ರಾಯಚೂರು ತಾಲೂಕಿನೊಳಗೆ ಸೇಂದಿ ಸಾಗಣೆ ನಿರಂತರವಾಗಿದೆ.
ಮದ್ಯದ ಸಾಗಣೆ: ಚುನಾವಣೆಯಲ್ಲಿ ಸೇಂದಿಗಿಂತ ಮದ್ಯಕ್ಕೆ ಭಾರೀ ಬೇಡಿಕೆ ಬಂದಿದೆ. ಆಂಧ್ರಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಮದ್ಯದ ದರ ಕಡಿಮೆಯಿರುವುದರಿಂದ ಆಂಧ್ರದಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಚುನಾವಣೆಗಳಲ್ಲಿ ಮತದಾರರಿಗೆ ಹಂಚಲು ಕರ್ನಾಟಕದಿಂದ ಅಕ್ರಮವಾಗಿ ಮದ್ಯ ಸಾಗಿಸುವ ದಂಧೆ ಪೊಲೀಸರ ಕಾರ್ಯಾಚರಣೆ ವೇಳೆ ಬಯಲಾಗಿದೆ.
ಆಂಧ್ರಕ್ಕಿಂತ ಕರ್ನಾಟಕದಲ್ಲಿ ಮದ್ಯದ ದರವು ಪ್ರತಿ ಬಾಟಲ್ಗೆ 8- 10 ಅಗ್ಗವಂತೆ. ಅದಕ್ಕೆ ಇಲ್ಲಿಂದಲೇ ಆಂಧ್ರಕ್ಕೆ ಸಾಗಿಸುವ ಅಕ್ರಮ ಕಾರ್ಯ ಮಾಡಲಾಗುತ್ತಿದೆ ಎಂಬುವ ಮಾತು ಕೇಳಿಬಂದಿದೆ. ನಗರದ ಮಾರ್ಕೆಟ್ ಯಾರ್ಡ್ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ವಾಹನದಲ್ಲಿ ಅಕ್ರಮವಾಗಿ ಆಂಧ್ರದ ಗದ್ವಾಲ್ಗೆ ಸಾಗಿಸುತ್ತಿದ್ದ 37 ಬಾಕ್ಸ್ಗಳಲ್ಲಿದ್ದ 2.05 ಲಕ್ಷ ಮೌಲ್ಯದ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.
ಪೊಲೀಸ್ ಇಲಾಖೆಯ ಪ್ರಕಾರ- ಇದುವರೆಗೆ ನೀತಿ ಸಂಹಿತೆ ಜಾರಿ ನಂತರ 21 ಕೇಸ್ಗಳಲ್ಲಿ 10 ಲಕ್ಷ ಮೌಲ್ಯದ ಮದ್ಯ ಮತ್ತು ವಾಹನಗಳನ್ನು ಜಪ್ತಿ ಮಾಡಿದ್ದು, 41 ಜನರನ್ನು ಬಂಧಿಸಲಾಗಿದೆ. ಚುನಾವಣೆ ದಿನಾಂಕ ಸಮೀಪಿಸುತ್ತಿದ್ದಂತೆಯೇ ಅಕ್ರಮ ಮದ್ಯದ ಸಾಗಣೆ ಪ್ರಮಾಣ ಹೆಚ್ಚಳ ಕಾಣುವ ಸಾಧ್ಯತೆಯಿದೆ.