ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಾಕಿ; ಸುರಾನಾ ಇಂಡಸ್ಟ್ರೀಸ್ ವಿರುದ್ಧ ಪ್ರತಿಭಟನೆ

Mainashree
Updated On : 11 Apr 2014, 11:57 am

ರಾಯಚೂರು: ತಾಲೂಕಿನ ವಡ್ಲೂರು ಗ್ರಾಮದಲ್ಲಿರುವ ಸುರಾನಾ ಇಂಡಸ್ಟ್ರೀಸ್ ಕಂಪನಿಯು ಕಾರ್ಮಿಕರಿಗೆ ನೀಡಬೇಕಿರುವ ಮೂರು ತಿಂಗಳ ಬಾಕಿ ವೇತನ ಪಾವತಿ ಮತ್ತು ಆಡಳಿತ ಮಂಡಳಿಯು ಕಾನೂನು ಬಾಹಿರವಾಗಿ ಹೊರಡಿಸಿದ ಎಲ್ಲ ಆದೇಶಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಗುರುವಾರ ಕಂಪನಿಯ ನೂರಾರು ಕಾರ್ಮಿಕರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನೆ ಮೆರವಣಿಗೆಯಲ್ಲಿ ಸಿಐಟಿಯು ನೇತೃತ್ವದಲ್ಲಿ ಆಗಮಿಸಿದ ಕಾರ್ಮಿಕರು ಜಿಲ್ಲಾಡಳಿತದ ಮೂಲಕ ಗುಲ್ಬರ್ಗದ ಉಪ ಕಾರ್ಮಿಕ ಆಯುಕ್ತರಿಗೆ ಮನವಿ ಸಲ್ಲಿಸಿ, ಸುರಾನಾ ಇಂಡಸ್ಟ್ರೀಸ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಸಮಸ್ಯೆಗಳಿಗೆ ಸಂಬಂಧಿಸಿ ಕಾರ್ಮಿಕ ಆಯುಕ್ತರ ಕಚೇರಿಯಲ್ಲಿ ಕೈಗಾರಿಕಾ ವಿವಾದ ಕಾಯಿದೆ ಅಡಿ ಎರಡು ಬಾರಿ ಸಂಧಾನ ಸಭೆ ನಡೆಸಲಾಗಿದೆ.
ಕಾರ್ಮಿಕರ ವಿರೋಧಿ ನೀತಿ: ಕಾರ್ಮಿಕ ಕಾನೂನುಗಳನ್ನು ಕಂಪನಿಯ ಆಡಳಿತ ಮಂಡಳಿಯು ಉಲ್ಲಂಘಿಸುತ್ತಿರುವ ಬಗ್ಗೆ ಗಮನಕ್ಕೆ ತರಲಾಗಿದೆ. ಆದರೆ ಆಡಳಿತ ಮಂಡಳಿಯು ಸಂಧಾನಸಭೆಯ ವೇಳೆ ಕೈಗೊಂಡ ನಿರ್ಣಯಗಳಿಗೆ ವಿರುದ್ಧವಾಗಿ ನಿರಂತರ ಕಾರ್ಮಿಕರ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಟೀಕಿಸಿದರು.
ಕಂಪನಿಯಲ್ಲಿ ಕಾರ್ಯನಿರ್ವಹಿಸಿದ ಕಾರ್ಮಿಕರ ಮೂರು ತಿಂಗಳ ವೇತನ ಬಾಕಿ ಉಳಿಸಿಕೊಳ್ಳಲಾಗಿದೆ. ವೇತನ ನೀಡುವಂತೆ ಒತ್ತಾಯಿಸಿದರೆ ಆಡಳಿತ ಮಂಡಳಿಯು ಬೇಜವಾಬ್ದಾರಿ ಉತ್ತರ ನೀಡುತ್ತಿದೆ. ಮಂಡಳಿ ಕಾರ್ಮಿಕರ ಹಕ್ಕುಗಳನ್ನು ಸಂಪೂರ್ಣ ಮೊಟಕುಗೊಳಿಸಿ ಗುತ್ತಿಗೆ ಆಧಾರಿತ ವ್ಯವಸ್ಥೆ ಜಾರಿ ಮಾಡುವ ದುರುದ್ದೇಶ ಹೊಂದಿದೆ ಎಂದು ಆರೋಪಿಸಿದರು.
ಭದ್ರತೆ ಕಸಿವ ತಂತ್ರ: ಸುರಾನಾ ಇಂಡಸ್ಟ್ರೀಸ್ ಕಂಪನಿ ಆರಂಭಿಸಲು ಭೂಮಿ ನೀಡಿದ ಅನೇಕರು ಕಾರ್ಮಿಕರಾಗಿ ಅಲ್ಲಿಯೇ ದುಡಿಯುತ್ತಿದ್ದಾರೆ. ಆದರೆ ಇದ್ಯಾವುದನ್ನು ಪರಿಗಣಿಸದೇ ಅತಿ ಲಾಭದ ದೃಷ್ಟಿಯಿಂದ ಕಾರ್ಮಿಕರ ಸಾಮಾಜಿಕ ಭದ್ರತೆಯನ್ನು ಕಸಿದುಕೊಳ್ಳುವ ತಂತ್ರವನ್ನು ಕಂಪನಿಯ ಆಡಳಿತ ಮಂಡಳಿ ಮಾಡುತ್ತಿದೆ ಎಂದು ದೂರಿದರು. ಕೂಡಲೇ ಕಾರ್ಮಿಕ ಆಯುಕ್ತರ ಕಚೇರಿಯು ಕಂಪನಿ ಆಡಳಿತ ಮಂಡಳಿಗೆ ಸೂಚನೆ ನೀಡಿ ಕಾರ್ಮಿಕರ ಬಾಕಿ ವೇತನ ಪಾವತಿಗೆ ಕ್ರಮ ಕೈಗೊಳ್ಳಬೇಕು. ಕಾನೂನು ಬಾಹಿರವಾಗಿ ಹೊರಡಿಸಿರುವ ಎಲ್ಲ ವರ್ಗಾವಣೆ ಹಾಗೂ ಕಾರ್ಮಿಕರನ್ನು ಸೇವೆಯಿಂದ ವಜಾಗೊಳಿಸಿದ ಆದೇಶ ಹಿಂಪಡೆಯಬೇಕೆಂದು ಆಗ್ರಹಿಸಿದರು.
ಪದ್ಧತಿ ಕೈಬಿಡಿ: ಅನಧಿಕೃತವಾಗಿ ಮುಚ್ಚಿರುವ ಕಾರ್ಖಾನೆಯನ್ನು ಕೂಡಲೇ ಪುನಾರಂಭಿಸಬೇಕು. ಕಾರ್ಮಿಕರನ್ನು ಸೇವೆಯಿಂದ ತೆಗೆದು ಹಾಕುವ ನಿಟ್ಟಿನಲ್ಲಿ ಕಂಪನಿಯ ಆಡಳಿತವು ಒತ್ತಾಯ ಪೂರ್ವಕವಾಗಿ ಕಾರ್ಮಿಕರ ಸಹಿ ಪಡೆದು ಪರಿಹಾರ ವಿತರಿಸುವ ಪದ್ಧತಿ ಕೈಬಿಡಬೇಕೆಂದು ಒತ್ತಾಯಿಸಿದರು. ಆಡಳಿತ ಮಂಡಳಿಯು ಕಂಪನಿಯನ್ನು ಶಾಶ್ವತವಾಗಿ ಮುಚ್ಚುವ ಬಗ್ಗೆ ವದಂತಿ ಹರಡುವ ಮೂಲಕ ಕಾರ್ಮಿಕರಲ್ಲಿ ಭೀತಿಯ ವಾತಾವರಣ ಮೂಡಿಸುತ್ತಿದ್ದು, ಅದಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷೆ ಎಚ್.ಪದ್ಮಾ, ಪ್ರಧಾನ ಕಾರ್ಯದರ್ಶಿ ಶೇಕ್ಷಾಖಾದ್ರಿ, ಕಂಪನಿ ಕಾರ್ಮಿಕರ ಸಂಘದ ಅಧ್ಯಕ್ಷ ಎಚ್. ಸೂಗನಗೌಡ, ನಾಗೇಂದ್ರ, ಸಿಐಟಿಯು ಮುಖಂಡರಾದ ಡಿ.ಎಸ್. ಶರಣಬಸವ, ಯಂಕಪ್ಪ, ಕೆ.ಜಿ. ವೀರೇಶ, ನಿಂಗಪ್ಪ, ರಂಗರೆಡ್ಡಿ, ಶಂಕರನಾರಾಯಣ, ಲಕ್ಷ್ಮಿರೆಡ್ಡಿ, ಶಾಲಂ, ಬಸವಂತ್ ಸಿಂಗ್ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement