ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಹಿಟ್ನಾಳ್ ಜಯ ನಿಶ್ಚಿತ; ಸಚಿವ ತಂಗಡಗಿ ವಿಶ್ವಾಸ

Mainashree
Updated On : 11 Apr 2014, 11:57 am

ಸಿಂಧನೂರು: ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಹಿಟ್ನಾಳ್ ಸುಮಾರು 1.50 ಲಕ್ಷ ಮತಗಳ ಅಂತರದಿಂದ ಜಯ ಸಾಧಿಸುವುದರಲ್ಲಿ ಅನುಮಾನವಿಲ್ಲ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಬಳಗಾನೂರಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕೊಪ್ಪಳ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ 7 ಕ್ಷೇತ್ರಗಳಲ್ಲಿ 2 ಸುತ್ತಿನ ಪ್ರಚಾರ ಕೈಗೊಂಡಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕ್ಷೇತ್ರದಾದ್ಯಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪರವಾದ ಅಲೆಯೇ ಕಾಣುತ್ತಿದೆ. ರಾಜ್ಯದ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ 22 ಕಡೆ ಜಯಭೇರಿ ಬಾರಿಸಲಿದೆ ಎಂದರು.
ನರೇಂದ್ರ ಮೋದಿ ಸಭೆಗೆ 20 ಸಾವಿರ ಜನ ಮಾತ್ರ ಸೇರಿದ್ದರೆನ್ನುವ ಸಂಗತಿಯನ್ನು ಗಮನಿಸಿದರೆ ಬಿಜೆಪಿ ಸೋಲು ಅನುಭವಿಸುವುದು ನಿಶ್ಚಿತವೆಂದು ಸಾಬೀತಾಗಿದೆ. ಹೈದ್ರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 371(ಜೆ) ತಿದ್ದುಪಡಿ ಜಾರಿಗೆ ತಂದಿರುವ ಯುಪಿಎ ಸರ್ಕಾರದ ಋಣವನ್ನು ಈ ಭಾಗದ ಜನತೆ ತೀರಿಸುತ್ತಾರೆಂದು ಹರ್ಷ ವ್ಯಕ್ತಪಡಿಸಿದರು.
ಎಲ್ಲ ವರ್ಗಕ್ಕೂ ಆದ್ಯತೆ: ಕರ್ನಾಟಕದಲ್ಲಿ ಲಿಂಗಾಯತ ಸಮುದಾಯಕ್ಕೆ 5 ಕ್ಷೇತ್ರ, ಅಲ್ಪಸಂಖ್ಯಾತ ಸಮುದಾಯಕ್ಕೆ 2 ಕಡೆ, ಒಕ್ಕಲಿಗರಿಗೆ 4 ಕಡೆ ಸ್ಪರ್ಧಿಸಲು ಅವಕಾಶ ನೀಡಿರುವುದರಿಂದ ಕೊಪ್ಪಳ ಕ್ಷೇತ್ರಕ್ಕೆ ಕುರುಬ ಸಮುದಾಯದ ಹಿಟ್ನಾಳ್ ಅವರಿಗೆ ಹೈಕಮಾಂಡ್ ಟಿಕೆಟ್ ನೀಡಿದೆ. ಭೋವಿ, ಮಾದಿಗ, ವಾಲ್ಮೀಕಿ, ಛಲವಾದಿ, ಲಂಬಾಣಿ ಎಲ್ಲ ಸಮುದಾಯಗಳನ್ನು ಕಾಂಗ್ರೆಸ್ ಗಣನೆಯಲ್ಲಿಟ್ಟುಕೊಂಡು ಪಕ್ಷದ ಟಿಕೆಟ್‌ಗಳನ್ನು ಹಂಚಿಕೆ ಮಾಡಿದೆಯೆಂದು ವಿವರಿಸಿದರು. ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರಿಗೂ ಅಸಮಾಧಾನವಿಲ್ಲ. ಬಯ್ಯಾಪುರ ಅಮರೇಗೌಡರು ಅತ್ಯಂತ್ರ ಸಕ್ರಿಯವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಇನ್ನುಳಿದ ಎಲ್ಲ ಶಾಸಕರು ಹಿಟ್ನಾಳ್ ಗೆಲವಿಗೆ ಒಗ್ಗಟ್ಟಿನಿಂದ ಶ್ರಮಿಸುತ್ತಿದ್ದಾರೆ ಎಂದರು.
ಅಭ್ಯರ್ಥಿ ಪರ ಕೆ.ಕರಿಯಪ್ಪ ಪ್ರಚಾರ ಮಾಡಿದರೆ ಅಭಿನಂದಿಸುತ್ತೇನೆ ಎಂದ ತಂಗಡಗಿ ಅವರಿಗೆ ಸ್ಥಾನಮಾನ ನೀಡುವ ವಿಷಯ ಹೈಕಮಾಂಡ್‌ಗೆ ಬಿಟ್ಟದ್ದು ಎಂದು ಜಾರಿಕೊಂಡರು.
ತಾವು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪನವರ ಸಹಾಯದಿಂದ ಶಾಸಕರಾಗಿರಲಿಲ್ಲವೇ ಎಂಬ ಪ್ರಶ್ನೆಗೆ, ಕನಕಗಿರಿಯ ಎಲ್ಲ ಜನಾಂಗದವರು ಮತ್ತು ವಿವಿಧ ಪಕ್ಷಗಳ ಮುಖಂಡರು ಸಹ ಬೆಂಬಲಿಸಿದ್ದರೆಂದು ಹೇಳಿದರು. ತಮ್ಮ ಸ್ವಾರ್ಥಕ್ಕೆ ಸಾಲೋಣಿ ನಾಗಪ್ಪ ಮತ್ತು ಕೆ.ಕರಿಯಪ್ಪನವರನ್ನು ಕಾಂಗ್ರೆಸ್ ಪ್ರಚಾರಕ್ಕೆ ಬಳಸಿಕೊಂಡು ಮನೆ ಒಡೆಯುವ ಕೆಲಸ ಮಾಡುತ್ತಿದ್ದಾರೆಂದು ವಿರೂಪಾಕ್ಷಪ್ಪ ಆರೋಪಿಸಿದ್ದಾರಲ್ಲ ಎಂದು ಕೇಳಿದ್ದಕ್ಕೆ, ಮನೆಯ ಒಡೆಯುವುದು ಗೊತ್ತಿಲ್ಲ. ಮೂಲತಃ ಮನೆ ಕಟ್ಟುವ ವಂಶದವದಿಂದ ಬಂದವರಾಗಿದ್ದೇವೆಂದು ಮಾರ್ಮಿಕವಾಗಿ ಉತ್ತರಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement