ಮತಬೇಟೆಗಾಗಿ ರಸ್ತೆ ನಡಿಗೆ
ಕ.ಪ್ರ. ವಾರ್ತೆ, ರಾಯಚೂರು, ಏ.12
ಪ್ರಸಕ್ತ ಲೋಕಸಭೆ ಚುನಾವಣೆಯ ಮತದಾನದ ದಿನಾಂಕ ಸಮೀಪಿಸುತ್ತಿದ್ದಂತೆಯೇ ವಿವಿಧ ಪಕ್ಷಗಳ ಅಭ್ಯರ್ಥಿಗಳು ಪ್ರಚಾರ ಕಾರ್ಯ ಚುರುಕುಗೊಳಿಸಿದ್ದು, ನಗರದಲ್ಲಿ ಶನಿವಾರ ಜೆಡಿಎಸ್, ಸಿಪಿಎಂಎಲ್ ಮತ್ತು ಪಕ್ಷೇತರ ಅಭ್ಯರ್ಥಿ ರೋಡ್ ಶೋ ಮೂಲಕ ಮತಯಾಚಿಸಿದರೆ, ದೇವದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಮತ ಪ್ರಚಾರ ಮಾಡಿದರು.
ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಅವರು ದೇವದುರ್ಗ ಪಟ್ಟಣದಲ್ಲಿ ಶನಿವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಪ್ರಮುಖ ರಸ್ತೆಯಲ್ಲಿ ತಮ್ಮ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ರೋಡ್ ಶೋ ಮೂಲಕ ತೆರಳಿ ಮತಯಾಚಿಸಿದರು. ಈ ವೇಳೆ ಬಿಜೆಪಿ ಪ್ರಮುಖರೂ ಸೇರಿದಂತೆ ನೂರಾರು ಸಂಖ್ಯೆಯ ಕಾರ್ಯಕರ್ತರಿದ್ದರು.
ರೋಡ್ ಶೋ ಭರಾಟೆ: ಅದೇ ರೀತಿ ನಗರದ ಹನುಮಾನ್ ಚಿತ್ರಮಂದಿರದಿಂದ ಅಂಬೇಡ್ಕರ್ ವೃತ್ತದವರೆಗೆ ಜೆಡಿಎಸ್ ಅಭ್ಯರ್ಥಿ ಡಿ.ಬಿ.ನಾಯಕ ಅವರು ರೋಡ್ ಶೋ ನಡೆಸಿದರು. ನೂರಾರು ಸಂಖ್ಯೆಯ ಕಾರ್ಯಕರ್ತರೊಂದಿಗೆ ನಗರದ ತೀನ್ ಕಂದೀಲ್, ಸೂಪರ್ ಮಾರ್ಕೆಟ್ ಮೂಲಕ ಪ್ರಮುಖ ರಸ್ತೆಯಲ್ಲಿ ರೋಡ್ ಶೋ ನಡೆಸಿ ಮತ ನೀಡುವಂತೆ ಮನವಿ ಮಾಡಿದರು.
ರೋಡ್ ಶೋದಲ್ಲಿ ಜೆಡಿಎಸ್ ಪಕ್ಷದ ನಗರ ಶಾಸಕ ಡಾ. ಶಿವರಾಜ್ ಪಾಟೀಲ್, ಜಿಲ್ಲಾಧ್ಯಕ್ಷ ಮಹಾಂತೇಶ್ ಪಾಟೀಲ್ ಅತ್ತನೂರು, ಕಾರ್ಯಾಧ್ಯಕ್ಷ ಯುಸೂಫ್ ಖಾನ್, ಪ್ರಧಾನ ಕಾರ್ಯದರ್ಶಿ ಶಿವಶಂಕರ್ ವಕೀಲರು, ಎಂ. ಪವನ್‌ಕುಮಾರ್, ಜಿಪಂ ಸದಸ್ಯ ಜಾಫರ್ ಅಲಿ ಪಟೇಲ್ ಸೇರಿದಂತೆ ಅನೇಕರಿದ್ದರು.
ಸಿಪಿಎಂಎಲ್: ಅದೇ ರೀತಿ ನಗರದಲ್ಲಿ ಶನಿವಾರ ಸಿಪಿಎಂಎಲ್ ಪಕ್ಷದ ಅಭ್ಯರ್ಥಿ ಎಂ.ನಾಗರಾಜ ರೋಡ್ ಶೋ ಮಾಡುವ ಮೂಲಕ ಮತಯಾಚಿಸಿದರು. ನಗರದ ಕರ್ನಾಟಕ ಸಂಘದಿಂದ ಆರಂಭಗೊಂಡ ರೋಡ್ ಶೋ ಶೆಟ್ಟಿಭಾವಿ ವೃತ್ತ, ಸರಾಫ್ ಬಜಾರ್, ತೀನ್ ಕಂದೀಲ್, ಸೂಪರ್ ಮಾರ್ಕೆಟ್, ಏಕಮಿನಾರ್ ಮೂಲಕ ಅಂಬೇಡ್ಕರ್ ವೃತ್ತದವರೆಗೆ ಮತಯಾಚಿಸಿ, ಜನವಿರೋಧಿ ಅನುಸರಿಸುತ್ತಿರುವ ಕಾಂಗ್ರೆಸ್, ಬಿಜೆಪಿ ತಿರಸ್ಕರಿಸುವ ಮೂಲಕ ನಿರಂತರ ಹೋರಾಟದಲ್ಲಿ ನಿರತರಾದ ಸಿಪಿಎಂಎಲ್ ಪಕ್ಷದ ಅಭ್ಯರ್ಥಿಗೆ ಮತದಾರರು ಬೆಂಬಲಿಸುವಂತೆ ಮನವಿ ಮಾಡಿದರು.
ನಿರಂತರ ಹೋರಾಟ: ದೇಶದಲ್ಲಿ ಇದುವರೆಗೆ ಅಧಿಕಾರ ನಡೆಸಿದ ಎಲ್ಲ ರಾಜಕೀಯ ಪಕ್ಷಗಳು ಜನ ವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ದೇಶದ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಿವೆ. ಜನರ ನಿರಂತರ ಸಮಸ್ಯೆಗಳ ಪರಿಹಾರಕ್ಕಾಗಿ ಪಕ್ಷವು ನಿರಂತರ ಹೋರಾಟ ಮುನ್ನಡೆಸುತ್ತಿದ್ದು, ಜನತೆ ತಮಗೆ ಬೆಂಬಲಿಸುವಂತೆ ಮನವಿ ಮಾಡಿದರು.
ರೋಡ್ ಶೋನಲ್ಲಿ ಸಿಪಿಎಂಎಲ್ ಪಕ್ಷದ ತಾಲೂಕು ಕಾರ್ಯದರ್ಶಿ ಎಸ್.ರಾಜಶೇಖರ್ ಸುಲ್ತಾನ್‌ಪುರ, ಪಕ್ಷದ ಮುಖಂಡರಾದ ಮಣಿ, ಆರ್.ಹುಚ್ಚರೆಡ್ಡಿ, ನಾಗರಾಜ, ಗೌಸ್, ಬಸವರಾಜ, ರವಿ, ಮಲ್ಲೇಶ, ಚನ್ಮಮ್ಮ, ನೂರ ಜಹಾನ್, ರುಕ್ಮಿಣಿ, ಯಲ್ಲಾರೆಡ್ಡಿ, ಭೀಮಣ್ಣ ದಾದಸ್ ಸೇರಿ ಅನೇಕರಿದ್ದರು.
ದೇವದುರ್ಗ: ವಿವಿಧ ಪಕ್ಷಗಳಿಂದ ಪ್ರಚಾರ
ದೇವದುರ್ಗ: ಪಟ್ಟಣದಲ್ಲಿ ಸಂತೆ ದಿನವಾದ ಶನಿವಾರ ಮಾರುಕಟ್ಟೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರು ಮತಯಾಚಿಸಿದರು.
ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡ ನಾಯಕ ನೇತೃತ್ವದಲ್ಲಿ ವಿವಿಧ ಮುಖಂಡರು ಸೇರಿ ಸಂತೆ ಬಜಾರ್ ಸೇರಿ ಪಟ್ಟಣದ ವಿವಿಧ ವಾರ್ಡುಗಳಲ್ಲಿ ಮತಯಾಚಿಸಿದರು. ಜೆಡಿಎಸ್ ಪಕ್ಷದ ಅಭ್ಯರ್ಥಿ ಡಿ.ಬಿ. ನಾಯಕ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು, ತಾಲೂಕು ಅಧ್ಯಕ್ಷ ಶರಣಪ್ಪ ಬಳೆ, ಜಿಪಂ ಸದಸ್ಯ ದಾನಪ್ಪ ಆಲ್ಕೋಡ್ ಸೇರಿದಂತೆ ಅನೇಕರಿದ್ದರು.
ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಭೀಮರಾಯ ಜೇರಬಂಡಿ ಸಹ ಸಂತೆ ಮಾರುಕಟ್ಟೆಯಲ್ಲಿ ಮತಯಾಚಿಸಿ ನಂತರ ಪಟ್ಟಣದ ವಿವಿಧ ವಾರ್ಡುಗಳಲ್ಲಿ ಮತ್ತು ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಪಾದಯಾತ್ರೆ ನಡೆಸಿದರು. ಕಾಂಗ್ರೆಸ್ ಯುವ ಘಟಕದಿಂದ ಪಟ್ಟಣದ ಗೌರಂಪೇಟ್, ಸಿಪತ್‌ಗೇರಾ, ಆಶ್ರಯ ಕಾಲನಿ ಸೇರಿ ಸಂತೆ ಬಜಾರ್‌ನಲ್ಲಿಯೂ ಪಕ್ಷದ ಅಭ್ಯರ್ಥಿ ಬಿ.ವಿ. ನಾಯಕ ಪರ ಮತಯಾಚಿಸಿದರು.
ಯುವ ಘಟಕದ ಅಧ್ಯಕ್ಷ ಶಿವಕುಮಾರ್ ವಕೀಲರು, ಸೇವಾದಳದ ಅಧ್ಯಕ್ಷ ಫಾರೂಖ್ ಅಹ್ಮದ, ಜಿಲ್ಲಾ ಸಮಿತಿ ಉಪಾಧ್ಯಕ್ಷ ಬಾಲಪ್ಪ ನಾಯಕ ಮರಡಿ, ಯಕ್ಬಾಲಸಾಬ್ ಹೌದುಡಿ ಸೇರಿ ಅನೇಕರಿದ್ದರು.
--