ಕಾಂಗ್ರೆಸ್ ಸರ್ಕಾರದ ಕೊಡುಗೆ ಶೂನ್ಯ: ಬಿಜೆಪಿ
ರಾಯಚೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವ ಬಗ್ಗೆಯೇ ಅನುಮಾನಗಳಿವೆ. ಜಿಲ್ಲೆಗೆ ಹಾಲಿ ಕಾಂಗ್ರೆಸ್ ಸರ್ಕಾರದ ಕೊಡುಗೆ ಶೂನ್ಯ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಪಕ್ಷದ ಅಭ್ಯರ್ಥಿಗೆ ಶ್ರೀರಕ್ಷೆ. ಕಾಂಗ್ರೆಸ್ ಮುಖಂಡರಿಂದ ಆಧಾರವಿಲ್ಲದ ಅಪಪ್ರಚಾರ ಮತ್ತು ಮುಖಂಡ ಬೋಸರಾಜು ಸಹ ಪಕ್ಷಾಂತರಿ ಎಂಬುದನ್ನು ಮರೆಯುವಂತಿಲ್ಲ ಎಂದು ಬಿಜೆಪಿ ಹೇಳಿದೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್, ತ್ರಿವಿಕ್ರಮ್ ಜೋಷಿ, ಪ್ರತಿಯೊಂದು ಪಕ್ಷದಲ್ಲಿ ಅಧಿಕಾರಕ್ಕಾಗಿ ಪಕ್ಷಾಂತರ ನಡೆಯುವುದು ಸಾಮಾನ್ಯ ಸಂಗತಿ. ಅನೇಕರು ಸದ್ಯ ಕಾಂಗ್ರೆಸ್ ಸೇರಿದ್ದಕ್ಕೆ ಅಧಿಕಾರದ ದುರಾಸೆಯೇ ಕಾರಣ ಎಂದು ಹೇಳಿದರು.
ಕಾಂಗ್ರೆಸ್ ಮುಳುಗುವ ಹಡಗು: ಕಾಂಗ್ರೆಸ್ ಮುಖಂಡ ಎನ್.ಎಸ್. ಬೋಸರಾಜು ಸೇರಿ ಕಾಂಗ್ರೆಸ್ನ ಅನೇಕರು ಬಿಜೆಪಿ ವಿರುದ್ಧ ಆಧಾರವಿಲ್ಲದ ಅನೇಕ ಆರೋಪ ಮಾಡುತ್ತಿದ್ದು, ಇಲ್ಲಸಲ್ಲದ ಆರೋಪ ಮಾಡುವುದು ಸಮಂಜಸವಲ್ಲ. ಕಾಂಗ್ರೆಸಲ್ಲಿ ಪಕ್ಷಾಂತರಿಗಳ ಸಂಖ್ಯೆ ಹೆಚ್ಚಾಗಿದ್ದು ಆ ಪಕ್ಷವು ಶೀಘ್ರವೇ ಮುಳುಗುವ ಹಡಗು ಎಂಬುದು ಸಾಬೀತಾಗಲಿದೆ ಎಂದರು.