ಬಿ.ವಿ. ನಾಯಕ ಗೆಲವಿಗೆ ಸಂಕಲ್ಪ: ಅನ್ವರಿ
ಕ.ಪ್ರ. ವಾರ್ತೆ, ಲಿಂಗಸ್ಗೂರು, ಏ.13
ವಿದ್ಯಮಾನಗಳ ಬೆಳವಣಿಗೆಯಿಂದ ಕಾಂಗ್ರೆಸ್ನಿಂದ ದೂರವಾಗಿ ಪುನಃ ಮಾತೃ ಪಕ್ಷಕ್ಕೆ ಸೇರ್ಪಡೆಗೊಂಡ ಎಲ್ಲ ಮುಖಂಡರು ಒಗ್ಗಟ್ಟಾಗಿ ಅಭ್ಯರ್ಥಿ ಬಿ.ವಿ.ನಾಯಕರ ಗೆಲವಿಗೆ ಸಂಕಲ್ಪ ಮಾಡಬೇಕಿದೆ ಎಂದು ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಅನ್ವರಿ ಕರೆ ನೀಡಿದರು.
ಪಟ್ಟಣದ ಗಡಿಯಾರ ಚೌಕ್ ಹತ್ತಿರ ಶನಿವಾರ ಹಮ್ಮಿಕೊಂಡಿದ್ದ ಲಿಂಗಸ್ಗೂರು ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಸಮಿತಿ ಲೋಕಸಭಾ ಚುನಾವಣೆ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
ರಾಜ್ಯದ 28 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲವು ಸಾಧಿಸುವ ನಿಟ್ಟಿನಲ್ಲಿ ಪಕ್ಷದಿಂದ ಕಳಚಿ ಹೋದ ಮುಖಂಡರನ್ನು ಒಗ್ಗೂಡಿಸಿದ್ದು, ರಾಯಚೂರು ಕ್ಷೇತ್ರದಿಂದ ಈ ಹಿಂದೆ ವೆಂಕಟೇಶ ನಾಯಕರು 4 ಬಾರಿ ಸಂಸದರಾಗಿ ಆಯ್ಕೆಗೊಂಡು ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಅವರ ಪುತ್ರ ಬಿ.ವಿ. ನಾಯಕರು ಸೌಮ್ಯ ಸ್ವಭಾವದವರಾಗಿದ್ದು, ಬೆಂಬಲಿಗ ಕಾರ್ಯಕರ್ತರು ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ನಮಗೆ ಗೌರವ ತಂದು ಕೊಡಬೇಕೆಂದು ಮನವಿ ಮಾಡಿದರು.
ಕಾಂಗ್ರೆಸಿಂದ ಅಭಿವೃದ್ಧಿ: ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ಮಾತನಾಡಿ, ಬಿಜೆಪಿಯವರು ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲವೆಂದು ಆರೋಪಿಸುತ್ತಿದ್ದಾರೆ. ನೀರಾವರಿ, ವಿದ್ಯುತ್ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಸೇರಿದಂತೆ ದೇಶದ ಸರ್ವಾಗೀಂಣ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ನೀಡಿದೆ.
ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದ್ದು, ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ. ರಾಜಕೀಯ ಇತಿಹಾಸ ಹಿನ್ನೆಲೆಯಿಂದ ಬಂದಿರುವ ಪಕ್ಷದ ಅಭ್ಯರ್ಥಿ ಬಿ.ವಿ. ನಾಯಕರ ಗೆಲವಿಗೆ ಎಲ್ಲರೂ ಕಾಂಗ್ರೆಸ್ ಬೆಂಬಲಿಸಬೇಕೆಂದು ಕರೆ ನೀಡಿದರು.
ಆಮಿಷಗಳಿಗೆ ಬಲಿಯಾಗಬೇಡಿ: ಪಕ್ಷದ ಅಭ್ಯರ್ಥಿ ಬಿ.ವಿ. ನಾಯಕ ಮಾತನಾಡಿ, ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿ ದುರಾಡಳಿತ, ಭ್ರಷ್ಟಾಚಾರ, ಸ್ವಜನ ಪಕ್ಷಪಾತಕ್ಕೆ ಬೇಸತ್ತು ಜನತೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಅದೇ ರೀತಿ ರಾಯಚೂರು ಕ್ಷೇತ್ರದಲ್ಲಿ ಪುನಃ ಇಂತಹ ದುರಾಡಳಿತ ಎದುರಾಗದಂತೆ ತಡೆಯಲು ಹಾಗೂ ಜನತೆ ಯಾವುದೇ ಆಮಿಷಗಳಿಗೆ ಒಳಗಾಗದೆ ನನಗೆ ಬೆಂಬಲಿಸುವ ಮೂಲಕ ತಮ್ಮ ಸೇವೆ ಮಾಡಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಮಾಜಿ ಸಚಿವ ರಾಜಾ ಅಮರೇಶ್ವರ ನಾಯಕ, ಪಕ್ಷದ ಜಿಲ್ಲಾಧ್ಯಕ್ಷ ಎ.ವಸಂತಕುಮಾರ, ಪುರಸಭೆ ಅಧ್ಯಕ್ಷ ಕುಮಾರಸ್ವಾಮಿ ಸಾಲ್ಮನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಕರಡಕಲ್, ಮುಖಂಡರಾದ ಅಮರಗುಂಡಪ್ಪ ಮೇಟಿ, ಲಿಂಗರಾಜ ಭೂಪಾಲ ನಾಡಗೌಡ, ಡಿ.ಎಸ್. ಹೂಲಗೇರಿ, ಬಸವಂತರಾಯ ಕುರಿ, ಲಾಲಅಹ್ಮದ್ ಸಾಬ, ಖಾದರಪಾಶಾ, ಗುಂಡಪ್ಪ ನಾಯಕ, ಹೆಚ್.ಬಿ.ಮುರಾರಿ, ಬಾಬಣ್ಣ ಆನ್ವರಿ, ಮುದುಕಪ್ಪ ವಕೀಲರು, ಹನುಮಂತಪ್ಪ ಕಂದಗಲ್, ಹನುಮಂತಪ್ಪ ಇದ್ದರು.
ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ
ದೇವದುರ್ಗ ವರದಿ: ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ ಬೆಳಗ್ಗೆ ವಾಯುವಿಹಾರಕ್ಕೆ ಆಗಮಿಸಿದ್ದವರ ಬಳಿ ಮತ ಯಾಚಿಸಿದರು. ಕಾಂಗ್ರೆಸ್ ಅಭ್ಯರ್ಥಿ ಬಿ.ವಿ. ನಾಯಕರ ಪರ ಮತಯಾಚಿಸಿದ ಕಾರ್ಯಕರ್ತರು ಕೇಂದ್ರದ ಯುಪಿಎ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮತದಾರರಿಗೆ ವಿವರಿಸಿದರು. ಪಕ್ಷದ ಎಸ್ಟಿ ಮೋರ್ಚಾ ನಗರ ಘಟಕ ಅಧ್ಯಕ್ಷ ಜಿ.ನಾಗರಾಜ ನಾಯಕ ಅಬುಮೊಹಲ್ಲಾ, ಭಾಸ್ಕರ ನಾಯಕ, ಎಂ.ಪ್ರಕಾಶ, ಮೈನುದ್ದೀನ್ ಹೌದುಡಿ ಇದ್ದರು.
ಕಾಂಗ್ರೆಸ್ಗೆ ಸೇರ್ಪಡೆ
ದೇವದುರ್ಗ ವರದಿ: ತಾಲೂಕಿನ ಮುಷ್ಟೂರು ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಭಾನುವಾರ ಕಾಂಗ್ರೆಸ್ ಪಕ್ಷ ಸೇರಿದರು. ಪಟ್ಟಣದಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ಮುಷ್ಟೂರು ಗ್ರಾಪಂ ಮಾಜಿ ಸದಸ್ಯ ಯಲ್ಲಪ್ಪ ಶಾಖಾಪುರ ನೇತೃತ್ವದಲ್ಲಿ ಶಾಖಾಪುರ ಸೇರಿ ವಿವಿಧ ಗ್ರಾಮಗಳ ಅನೇಕ ಕಾರ್ಯಕರ್ತರು ಪಕ್ಷ ಸೇರಿದರು. ಆರ್ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎ.ರಾಜಶೇಖರ ನಾಯಕ ಮತ್ತು ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕರಿಯಮ್ಮ ಗೋಪಾಲಕೃಷ್ಣ ಸಮ್ಮುಖದಲ್ಲಿ ಪಕ್ಷ ಸೇರಿದರು. ಮಾಜಿ ಸಚಿವೆ ಡಾ. ಎ. ಪುಷ್ಪಾವತಿ, ಬಾಪೂಗೌಡ ಚಿಕ್ಕಹೊನ್ನಕುಣಿ, ಶಿವನಗೌಡ ಕುಪ್ಪಿ, ಲಕ್ಷ್ಮಣ ಇದ್ದರು.