ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ರೈತರ ಪ್ರತಿಭಟನೆ 21ಕ್ಕೆ: ಗುಡಿಹಾಳ
ಕ.ಪ್ರ. ವಾರ್ತೆ, ರಾಯಚೂರು, ಏ.13
ತುಂಗಭದ್ರಾ ಎಡದಂಡೆಯಿಂದ ಅಕ್ರಮ ನೀರು ಬಳಕೆ ತಡೆಗೆ ಒತ್ತಾಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ರಾಜ್ಯ ರೈತಸಂಘದಿಂದ ಏ.21 ರಂದು ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ರಾಜ್ಯ ರೈತಸಂಘದ ಮುಖಂಡ ಅಮರಣ್ಣ ಗುಡಿಹಾಳ ಹೇಳಿದರು.
ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಡದಂಡೆ ಕಾಲುವೆಯಿಂದ ಅಕ್ರಮವಾಗಿ ನೀರು ಕಬಳಿಕೆ ತಡೆಗೆ ಆಡಳಿತ ಕ್ರಮ ಕೈಗೊಂಡಿಲ್ಲ. ಆದರಿಂದ ಕಾಲುವೆಯ ಕಡೆಯ ಭಾಗದ ರೈತರಿಗೆ ಸಮರ್ಪಕ ನೀರು ದೊರೆಯುತ್ತಿಲ್ಲ ಎಂದು ಆರೋಪಿಸಿದರು.
ಎತ್ತಂಗಡಿ ಕಾರ್ಯ: ಜಿಲ್ಲೆಯಲ್ಲಿ ಬಗರ್ ಹುಕುಂ ಸಾಗುವಳಿದಾರರನ್ನು ಒತ್ತಾಯ ಪೂರ್ವಕವಾಗಿ ಎತ್ತಂಗಡಿ ಮಾಡುವ ಕಾರ್ಯ ಅಧಿಕಾರಿಗಳು ಮಾಡುತ್ತಿದ್ದಾರೆ. ಲಿಂಗಸ್ಗೂರು ತಾಲೂಕಿನ ಪೂಲಭಾವಿ, ಗೋನವಾಟ್ಲ ಮತ್ತಿತರೆಡೆ ಅರಣ್ಯ ಪ್ರದೇಶದಲ್ಲಿ ಕಳೆದ ಅನೇಕ ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ರೈತರನ್ನು ಒಕ್ಕಲೆಬ್ಬಿಸುವ ಕಾರ್ಯ ತೀವ್ರಗೊಂಡಿದ್ದು, ಕೂಡಲೇ ಪ್ರಕ್ರಿಯೆ ನಿಲುಗಡೆಗೊಳಿಸುವಂತೆ ಹೋರಾಟದ ಮೂಲಕ ಒತ್ತಾಯಿಸಲಾಗುತ್ತದೆ ಎಂದರು.
ಬ್ಯಾಂಕಿನಿಂದ ಸಿಗದ ಸಾಲ: ಅಕ್ರಮ ಮರಳು ಸಾಗಣೆ ದಂಧೆಗೆ ಕಡಿವಾಣ ಹಾಕುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ದೂರಿದ ಅವರು, ರೈತರನ್ನು ಋಣ ಮುಕ್ತರನ್ನಾಗಿ ಮಾಡುವ ಭರವಸೆ ವಿವಿಧ ರಾಜಕೀಯ ಪಕ್ಷಗಳು ಪ್ರಸಕ್ತ ಚುನಾವಣೆಯಲ್ಲಿ ನೀಡುತ್ತಿವೆ. ರೈತರ ಸಾಲ ಮನ್ನಾ ಮಾಡಿರುವುದಾಗಿ ಕಾಂಗ್ರೆಸ್ ಹೇಳುತ್ತಿದೆ. ಆದರೆ ವಾಸ್ತವದಲ್ಲಿ ಬಡ ರೈತರಿಗೆ ಸೇವಾ ಸಹಕಾರ ಸಂಘದಿಂದ, ರಾಷ್ಟ್ರೀಕೃತ ಬ್ಯಾಂಕಿನಿಂದ ಸಾಲ ಸಿಗುತ್ತಿಲ್ಲ ಎಂದು ಟೀಕಿಸಿದರು.
ಗುಡಿಸಲು ಮುಕ್ತ ರಾಜ್ಯ ನಿರ್ಮಾಣದ ಕನಸು ತುಂಬಲಾಗುತ್ತಿದೆ. ಆದರೆ ಜಾರಿ ಮಾತ್ರ ಆಗುತ್ತಿಲ್ಲ. ವಸತಿ ಯೋಜನೆ ಅಡಿ ಮಂಜೂರಾದ ಬಹುತೇಕ ಮನೆಗಳು ಉಳ್ಳವರ ಪಾಲಾಗಿವೆ. ಶ್ರೀಮಂತರಿಗೆ ಇಂಥ ಮನೆಗಳು ಮಂಜೂರಾಗುತ್ತಿದ್ದು, ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿದರು.
ಸೂಕ್ತ ಬೆಲೆ ಇಲ್ಲ: ಬಿಪಿಎಲ್ ಕಾರ್ಡ್ ರೈತರಿಗೆ ಇದುವರೆಗೆ ವಿತರಣೆಯಾಗಿಲ್ಲ. ಆಹಾರ ಭದ್ರತೆ ಯೋಜನೆಯ ಜಾರಿಯಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆಂದು ಆರೋಪಿಸಿದ ಅವರು, ರೈತರ ಕೃಷಿ ಉತ್ಪನ್ನಕ್ಕೆ ಸೂಕ್ತ ಬೆಲೆ ಸಿಗುತ್ತಿಲ್ಲ. ಆದ್ದರಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಂದು ದೂರಿದರು.
ಜಿಲ್ಲೆಯಲ್ಲಿ ನೀರಾವರಿ ವಿದ್ಯುತ್ ಪಂಪಸೆಟ್ಗಳಿಗೆ ನಿರಂತರ ಜ್ಯೋತಿಯಡಿ ಒದಗಿಸುತ್ತಿರುವ ವಿದ್ಯುತ್ನಿಂದ ರೈತರಿಗೆ ಪ್ರಯೋಜನವಾಗುತ್ತಿಲ್ಲ. ವಿದ್ಯುತ್ ಕಡಿತದಿಂದ ರೈತರು ಕೃಷಿಯಲ್ಲಿ ಹಾನಿ ಅನುಭವಿಸುವಂತಾಗಿದೆ. ರೈತರ ಬೆಳೆಗೆ ಸೂಕ್ತ ಬೆಂಬಲ ಬೆಲೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಏ.21 ರಂದು ಹೋರಾಟ ಆಯೋಜಿಸಲಾಗಿದೆ ಎಂದು ತಿಳಿಸಿದರು.
ತಟಸ್ಥ: ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ರಾಜ್ಯ ರೈತಸಂಘದ ಜಿಲ್ಲಾ ಘಟಕವು ಯಾವುದೇ ಪಕ್ಷವನ್ನು ಬೆಂಬಲಿಸದಿರಲು ನಿರ್ಧರಿಸಿದ್ದು, ಯಾರಿಗೆ ಬೆಂಬಲಿಸಿದರೂ ರೈತರ ಸಮಸ್ಯೆಗಳಿಗೆ ಸ್ಪಂದನೆ ದೊರೆಯುವ ಸಾಧ್ಯತೆಯಿಲ್ಲದ್ದರಿಂದ ಈ ತೀರ್ಮಾನಕ್ಕೆ ಬರಲಾಗಿದೆ. ಆದರೆ ರೈತರು ತಮ್ಮ ನಿರ್ಧಾರದಂತೆ ಮತ ಚಲಾಯಿಸಲು ಸ್ವತಂತ್ರರಾಗಿದ್ದಾರೆಂದು ಹೇಳಿದರು.
ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಮಲ್ಲಣ್ಣ ದಿನ್ನಿ, ನರಸಿಂಗರಾವ್ ಕುಲ್ಕರ್ಣಿ ಚಂದ್ರಬಂಡಾ, ಕೆ. ವೀರೇಶಗೌಡ, ಸಿದ್ದಲಿಂಗೇಗೌಡ, ಚಾಂದಸಾಬ್, ನರಸಪ್ಪ ಯಾದವ್ ಸೇರಿ ಅನೇಕರಿದ್ದರು.
--