ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಸ್ಪೃಶ್ಯತೆ ನಿವಾರಣೆಗೆ ದೇಶದ ಸಂವಿಧಾನ ಪೂರಕ: ಡಿಸಿ

Lingaraj Badiger
Updated On : 15 Apr 2014, 10:59 am

ರಾಯಚೂರು: ದೇಶದ ಸಂವಿಧಾನದಲ್ಲಿ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಆಚರಣೆ ವಿರುದ್ಧ ಹೋರಾಡಲು ಮಾರ್ಗದರ್ಶಿ ಸೂತ್ರಗಳಿದ್ದು, ಅಂಥ ಸಂವಿಧಾನವನ್ನು ರಚಿಸಿರುವ ಡಾ. ಅಂಬೇಡ್ಕರ್ ಎಲ್ಲ ಜಾತಿ ಜನಾಂಗದವರ ಆದರ್ಶ ಪುರುಷರಾಗಿದ್ದಾರೆಂದು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಹೇಳಿದರು.
ನಗರದ ರಂಗಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಡಾ. ಅಂಬೇಡ್ಕರ್ 123ನೇ ಜಯಂತಿ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಅಂಬೇಡ್ಕರ್ ಅನುಭವಿಸಿದ ಶೋಷಣೆ, ಅಸ್ಪ ೃಶ್ಯತೆ, ಅಸಮಾನತೆ ಹೋಗಲಾಡಿಸುವ ನಿಟ್ಟಿನಲ್ಲಿ ದೇಶದ ಎಲ್ಲ ಜಾತಿಯವರಿಗೆ ಸಮಾನತೆಯಿಂದ ಕಾಣುವಂತೆ ಮಾಡುವಂಥ ಸಂವಿಧಾನ ರಚಿಸಿದ್ದಾರೆಂದು ಹೇಳಿದರು.
ಆದರ್ಶ ವ್ಯಕ್ತಿ: ಪ್ರೊ. ಪಾಂಡುರಂಗ ಮಾತನಾಡಿ, ಅಂಬೇಡ್ಕರ್ ತಮ್ಮ ವಿರಳ ವ್ಯಕ್ತಿತ್ವದ ಮೂಲಕ ಎಲ್ಲರು ಮೆಚ್ಚುವಂತಹ ಸಾಧಕರಾಗಿ ಹೊರಹೊಮ್ಮಿದವರು. ಅವರ ಜೀವನದುದ್ದಕ್ಕೂ ಶೋಷಣೆ ಅನುಭವಿಸಿ ಪರಿಶ್ರಮದಿಂದ ಶೋಷಣೆ ಮೆಟ್ಟಿ ನಿಂತು ಆದರ್ಶ ವ್ಯಕ್ತಿಯಾದರೆಂದು ಹೇಳಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮೆರೆದವರಿಗೆ ಜಿಲ್ಲಾಡಳಿತದಿಂದ ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಜಿಪಂ ಸಿಇಒ ವಿಜಯ ಜ್ಯೋತ್ಸ್ನಾ ವಹಿಸಿದ್ದರು. ಬೌದ್ಧ ಧರ್ಮಗುರು ಸಂಗಪಾಲ ಬಂತೇಜಿ ಸಾನಿಧ್ಯವಹಿಸಿದ್ದರು. ಜಿಪಂ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್, ಯೋಜನಾಧಿಕಾರಿ ಡಾ.ಟಿ.ರೋಣಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವೈ.ಎ.ಕಾಳೆ, ನಗರಸಭೆ ಪೌರಾಯುಕ್ತ ವೆಂಕಟೇಶ ಸೇರಿ ಅನೇಕರಿದ್ದರು.
ಮೆರವಣಿಗೆ: ಇದಕ್ಕೂ ಮುನ್ನ ನಗರದ ಅಂಬೇಡ್ಕರ್ ನೇತೃತ್ವದಲ್ಲಿ ಡಾ. ಅಂಬೇಡ್ಕರ್ ಪುತ್ಥಳಿಗೆ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಸೇರಿದಂತೆ ಜಿಲ್ಲಾಡಳಿತದ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು ಮತ್ತು ಗಣ್ಯರು ಮಾರ್ಲಾಪಣೆ ಮಾಡಿ ಗೌರವ ಸಲ್ಲಿಸಿದರು. ನಂತರ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ನಗರದ ಪ್ರಮುಖ ರಸ್ತೆಯಲ್ಲಿ ಸಾಗಿ ರಂಗಮಂದಿರ ತಲುಪಿತು. ಮೆರವಣಿಗೆಯಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು, ಕಲಾತಂಡಗಳು ಪಾಲ್ಗೊಂಡಿದ್ದವು.
ಹಳೆ ಬಸ್ ನಿಲ್ದಾಣದ ಬಳಿ(ಮಸ್ಕಿ ವರದಿ): ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿ ಅಂಬೇಡ್ಕರ್ ಪ್ರತಿಮೆಗೆ ಶಾಸಕ ಪ್ರತಾಪಗೌಡ ಪಾಟೀಲ್ ಸೋಮವಾರ ಅಂಬೇಡ್ಕರ್ ಜಯಂತಿ ಸಂದರ್ಭ ಗೌರವ ಸಮರ್ಪಿಸಿದರು.ದಲಿತ ಮುಖಂಡರಾದ ಸಿ.ದಾನಪ್ಪ, ಹನುಮಂತಪ್ಪ ವೆಂಕಟಾಪುರ, ಮಲ್ಲಯ್ಯ ಬಳ್ಳಾ, ತಾಪಂ ಸದಸ್ಯ ಹನುಮಂತಪ್ಪ ಮೋಚಿ, ಗ್ರಾಪಂ ಅಧ್ಯಕ್ಷ ಎಂ.ಅಮರೇಶ, ಉಪಾಧ್ಯೆಕ್ಷೆ ನಾಗಮ್ಮ ಚಿಗರಿ ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಂದಾನಪ್ಪ ಗುಂಡಳ್ಳಿ, ಯಮನೂರ ಒಡೆಯ, ಅಶೋಕ ಮುರಾರಿ ಇದ್ದರು.
ವಿವಿಧೆಡೆ ಆಚರಣೆ: ಗ್ರಾಪಂ ಕಾರ್ಯಾಲಯ, ರೈತರ ಸೇವಾ ಸಹಕಾರಿ ಸಂಘ, ವಿದ್ಯಾನಿಕೇತನ ಪಪೂ ಕಾಲೇಜು, ಬಾಲಕಿಯರ ಹಾಗೂ ಬಾಲಕರ ಪಪೂ ಕಾಲೇಜು, ವಿವಿಧ ಶಾಲಾ ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಜನ್ಮದಿನಾಚರಿಸಲಾಯಿತು.
ಬಳಗಾನೂರು ಗ್ರಾಮದಲ್ಲಿ(ಸಿಂಧನೂರು ವರದಿ): ತಾಲೂಕಿನ ಬಳಗಾನೂರು ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ಎಬಿವಿಪಿ ಪದಾಧಿಕಾರಿಗಳಿಂದ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ 123ನೇ ಜಯಂತಿ ಆಚರಿಸಲಾಯಿತು. ಎಬಿವಿಪಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಹನುಮಂತ ಪೂಜಾರ, ವಿದ್ಯಾರ್ಥಿ ಯುವ ಮುಖಂಡ ರಾಜು ಗಾಳಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಬ್ದುಲ್ ರಹೀಮ್, ಸಂದೀಪ ಕುಮಾರ, ದೇವರಾಜ, ಸಂತೋಷ ಕುಮಾರ, ಮಹಾಂತೇಶ ಮತ್ತಿತರರು ಇದ್ದರು.
ಪಿಡಬ್ಲ್ಯೂಡಿ ಕ್ಯಾಂಪ್‌ನಲ್ಲಿ(ಸಿಂಧನೂರು ವರದಿ): ನಗರದ ಪಿಡಬ್ಲ್ಯೂಡಿ ಕ್ಯಾಂಪ್‌ನಲ್ಲಿರುವ ಡಾ. ಅಂಬೇಡ್ಕರ್ ಸೇವಾ ಸಮಿತಿಯಿಂದ 123ನೇ ಜನ್ಮ ದಿನವನ್ನು ಸೋಮವಾರ ಆಚರಿಸಲಾಯಿತು. ಅಂಬೇಡ್ಕರ್ ನಾಮಫಲಕಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಶಾಸಕ ಹಂಪನಗೌಡ ಬಾದರ್ಲಿ, ತಹಸೀಲ್ದಾರ್ ಜಗನ್ನಾಥರೆಡ್ಡಿ, ನಗರಸಭೆ ಪೌರಾಯುಕ್ತ ಪ್ರಹ್ಲಾದ, ನಗರಠಾಣೆ ಪಿಎಸ್‌ಐ ಬಾಳನಗೌಡ, ಶೇಖರಪ್ಪ ಗಿಣಿವಾರ, ಅಲ್ಲಮಪ್ರಭು ಪೂಜಾರಿ, ಕೆ. ಮರಿಯಪ್ಪ, ಚೌರಪ್ಪ ಜವಳಗೇರಿ, ಮಹಾದೇವ ಧುಮುತಿ, ಆನಂದ ಬೂದಿವಾಳ ಕ್ಯಾಂಪ್, ವೆಂಕಟೇಶ ಇದ್ದರು.
ಪಟ್ಟಣ ಪಂಚಾಯ್ತಿಯಲ್ಲಿ(ಮುದಗಲ್ ವರದಿ): ಸ್ಥಳೀಯ ಪಟ್ಟಣ ಪಂಚಾಯ್ತಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಪೂಜೆ ಸಲ್ಲಿಸುವ ಮೂಲಕ ಜಯಂತಿಗೆ ಚಾಲನೆ ನೀಡಿದರು. ಪಪಂ ಆವರಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮುಖ್ಯಾಧಿಕಾರಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಪಣೆಗೈದರು. ಪಪಂ ಸದಸ್ಯ ಶಿವರಾಜ ತಳವಾರ, ಶರಣಪ್ಪ ಕಟ್ಟಿಮನಿ, ಬಸವರಾಜ ಬಂಕದಮನಿ, ಕೃಷ್ಣಾ ಚಲವಾದಿ, ಪೌರ ಕಾರ್ಮಿಕ ಚೆನ್ನಪ್ಪ ಸೇರಿದಂತೆ ಪೌರ ಕಾರ್ಮಿಕರು, ನೌಕರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement