ಚುನಾವಣೆಗೂ ತಟ್ಟಿದ ಗುಳೆ ಬಿಸಿ
ಕ.ಪ್ರ. ವಾರ್ತೆ, ಮುದಗಲ್, ಏ.14
ಒಂದೆಡೆ ಚುನಾವಣಾ ಆಯೋಗ ಶೇ.100 ಮತದಾನಕ್ಕಾಗಿ ಜಾಗೃತಿ ಮೂಡಿಸಲು ಕೋಟ್ಯಂತರ ರುಪಾಯಿ ಖರ್ಚು ಮಾಡುತ್ತಿದ್ದರೆ, ಇನ್ನೊಂದೆಡೆ ಗ್ರಾಮೀಣ ಪ್ರದೇಶದ ಜನರು ಹೊಟ್ಟೆಪಾಡಿಗಾಗಿ ಗುಳೆ ಹೋಗುವುದರಲ್ಲಿ ನಿರತರಾಗಿದ್ದಾರೆ!
ಏ.17ರಂದು ಲೋಕಸಭಾ ಚುನಾವಣಾ ಮತದಾನವಿದ್ದರೂ ಗ್ರಾಮೀಣ ಪ್ರದೇಶದಿಂದ ಪ್ರತಿನಿತ್ಯ ನೂರಾರು ಜನರು ಕೂಲಿ ಅರಸಿ ನಗರ, ಮಹಾನಗರಗಳಿಗೆ ಗುಳೆ ಹೋಗುತ್ತಿದ್ದಾರೆ.
ಮತ ಸಮರಕ್ಕೆ ದಿನಗಣನೆ ನಡೆದು ಸ್ಪರ್ಧಾಳುಗಳು ಮತದಾನ ಕಡಿಮೆಯಾಗುತ್ತದೆ ಎನ್ನುವ ಭೀತಿಯಲ್ಲಿದ್ದರೆ, ಇತ್ತ ತಾಲೂಕು, ಜಿಲ್ಲಾಡಳಿತ ಮತದಾನ ಹೆಚ್ಚಿಸಲು ರಂಗೋಲಿ, ಕರೆಯೋಲೆ, ಕರಪತ್ರಗಳನ್ನು ಹಿಡಿದು ಮತದಾನ ಜಾಗೃತಿ ಮೂಡಿಸುವಲ್ಲಿ ನಿರತವಾಗಿದೆ. ಆದರೆ ಇದು ಗ್ರಾಮೀಣ ಬಡ ಕುಟುಂಬಗಳ ಹೊಟ್ಟೆಪಾಡಿನ ಮುಂದೆ ಕೆಲಸ ಮಾಡುತ್ತಿಲ್ಲ ಎಂಬುದು ವಾಸ್ತವ.
ಮನವೊಲಿಕೆಯೇ ತಲೆನೋವು: ಗ್ರಾಮೀಣ ಪ್ರದೇಶಗಳಲ್ಲಿ ಮೂಲ ಸೌಲಭ್ಯಗಳಿಂದ ವಂಚಿತವಾಗಿರುವ ತಾಲೂಕಿನ ಹಲ್ಕಾವಟಗಿ, ತೊಂಡಿಹಾಳ, ಅಂಕನಾಳ, ಉಪನಾಳ, ಪಲಗಲದಿನ್ನಿ, ಯರದಿಹಾಳ, ಚಿಕ್ಕಯರದಿಹಾಳ ಗ್ರಾಮಸ್ಥರು ಮತದಾನ ಬಹಿಷ್ಕಾರ ಹಾಕುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರಿಂದ ತಾಲೂಕು ಆಡಳಿತ ಗ್ರಾಮಗಳಿಗೆ ಭೇಟಿ ನೀಡಿ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಭರವಸೆ ನೀಡಿ ಮತದಾನ ಮಾಡುವಂತೆ ಮನವೊಲಿಸುವಷ್ಟರಲ್ಲಿ ಹಣ್ಣುಗಾಯಿ ನೀರುಗಾಯಿ ಆಗಿದೆ.
ಇತ್ತ ಲಂಬಾಣಿ ತಾಂಡಾ, ಗ್ರಾಮೀಣ ಪ್ರದೇಶಗಳ ನೂರಾರು ಜನರು ಪ್ರತಿ ದಿನಾಲು ಕೂಲಿ ಅರಸಿ ಬೆಂಗಳೂರು, ಮಂಗಳೂರು, ಬೆಳಗಾವಿ, ಗೋವಾ, ಮುಂಬೈನಂತಹ ನಗರಳಿಗೆ ಗುಳೆ ಹೋಗುತ್ತಿದ್ದಾರೆ.
ರಾಜಕಾರಣಿಗಳು ಸಾಲ ಕೊಡುವರೇ?: ಲೋಕಸಭೆ ಚುನಾವಣೆ ಬಂದಿದೆ ಮತದಾನಕ್ಕೆ ಇನ್ನೆರಡು ದಿನ ಮಾತ್ರ ಬಾಕಿ ಇದೆ. ನೀವು ಮತದಾನ ಮಾಡದೆ ಗುಳೆ ಹೋಗುತ್ತಿರಲ್ಲ. ನಿಮಗೆ ಮತ ಹಾಕುವಂತೆ ರಾಜಕೀಯ ಮುಖಂಡರು ಕೇಳಿಕೊಂಡಿಲ್ಲವೇ ಎಂದು ಪ್ರಶ್ನಿಸಿದರೆ- 'ನಾವು ಕಬ್ಬಿನ ಗದ್ದೆ ಮಾಲೀಕರೊಂದಿಗೆ ಮುಂಗಡವಾಗಿ ಲಕ್ಷಾಂತರ ರು. ಪಡೆದಿದ್ದೇವೆ. ಅವರ ಸಾಲ ತೀರಿಸಲು ಹೋಗುತ್ತಿದ್ದೇವೆ. ರಾಜಕಾರಣಿಗಳು ನಮಗೆ ಕೆಲಸ ಕೋಡುವರೇ' ಎಂದು ಗ್ರಾಮೀಣ ಮಹಿಳೆಯರು ಪ್ರಶ್ನಿಸಿದರು.
'ರಾಜಕಾರಣಿಗಳು ಎಲೆಕ್ಸನ್ನು ಬಂದಾಗ ಮಾತ್ರ ವೋಟ್ ಕೇಳಾಕ್ ಬರ್ತಾರ, ನಮ್ಮ ಕಷ್ಟ ಏನೈತಿ ಅಂತ ಯಾರೂ ಕೇಳಾಕ್ ಬರಾಂಗಿಲ್ಲ, ಹೊಟ್ಟಿಗೆ ಹಿಟ್ಟಿಲ್ಲ, ದುಡ್ಯಾಕ್ ಕೆಲಸ ಇಲ್ಲ, ಇಲ್ಲಿದ್ದು ಮಾಡೂದಾದ್ರೂ ಏನು ಎಂದು ಕಬ್ಬ ಕಡ್ಯಾಕ್ ಹೊರಟೀವಿ' ಎಂದು ಹೇಳಿದರು.
ಮತದಾನದಿಂದ ವಂಚಿತ: ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಹಳ್ಳಿಯಿಂದಲೂ ಜನರು ಕೂಲಿ ಹುಡುಕಿಕೊಂಡು ಹೋಗಿದ್ದರಿಂದ ಮತದಾನದಿಂದ ವಂಚಿತರಾಗುತ್ತಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಿದವರು ಅವರನ್ನು ಮತದಾನಕ್ಕೆ ಕರೆಸುವ ಗೋಜಿಗೆ ಹೋಗಿಲ್ಲ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮತದಾನ ಕುಸಿಯುವ ಸಂಭವವಿದೆ.
-ಪಂಪಯ್ಯ ಮಠ