ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ರಾಮತ್ನಾಳ- ಕಂದಗಲ್ ರಸ್ತೆ ಕಾಮಗಾರಿ ಕಳಪೆ

Lingaraj Badiger
Updated On : 15 Apr 2014, 10:59 am

ಮುದಗಲ್: ರಾಯಚೂರು ಜಿಲ್ಲೆಯಿಂದ ಬಾಗಲಕೋಟ ಜಿಲ್ಲೆಗೆ ಸಂಪರ್ಕ ಕಲ್ಪಿಸುತ್ತಿರುವ ರಾಮತ್ನಾಳ ಕಂದಗಲ್ ರಸ್ತೆಗೆ ಮಾಡಿರುವ ಡಾಂಬರೀಕರಣ ಕಾಮಗಾರಿ ತೀರಾ ಕಳಪೆಯಾಗಿದೆ ಎಂದು ತಾಪಂ ಸದಸ್ಯ ರುದ್ರಗೌಡ ತುರಡಗಿ ದೂರಿದ್ದಾರೆ.
ತಾಲೂಕಿನ ಗಡಿ ಗ್ರಾಮದ ರಾಮತ್ನಾಳದಿಂದ ಹುನಗುಂದ ತಾಲೂಕಿನ ಗಡಿ ಗ್ರಾಮ ಕಂದಗಲ್‌ಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಸುಮಾರು ರು. 50 ಲಕ್ಷ ವೆಚ್ಚದಲ್ಲಿ ಡಾಂಬರ್ ರಸ್ತೆಯನ್ನು ಸಿಂಧನೂರು ಮೂಲದ ಗುತ್ತಿಗೆದಾರರೊಬ್ಬರು ಕೆಲಸ ಮಾಡುತ್ತಿದ್ದಾರೆ.
ಕಡಿಮೆ ಗುಣಮಟ್ಟ: ರಸ್ತೆಯಲ್ಲಿ ಕೆಂಪು ಹುಡಿ ಮಣ್ಣು ಇದ್ದು ಸರಿಯಾಗಿ ಸ್ವಚ್ಛ ಮಾಡದೆ ಸ್ವಲ್ಪ ಪ್ರಮಾಣದ ಡಾಂಬರ್ ಎಣ್ಣೆಯನ್ನು ಸಿಂಪಡಿಸಿದ್ದಾರೆ. ಇದರ ಪರಿಣಾಮ ಹಾಕಿರುವ ಡಾಂಬರು ಹಿಂದೇನೇ ಕಿತ್ತಿದೆ. ಅಲ್ಲದೆ 30 ಎಂ.ಎಂ. ಡಾಂಬರ್ ಹಾಕಬೇಕಾಗಿದ್ದು, 20 ಎಂಎಂನಷ್ಟು ಮಾತ್ರ ಹಾಕಿದ್ದರಿಂದ ರಸ್ತೆ ಗುಣಮಟ್ಟದ್ದಾಗಿಲ್ಲ ಎಂದು ದೂರಿದರು.
ಈ ರಸ್ತೆ ಮಾರ್ಗವಾಗಿ ಮಾಕಾಪುರ, ಆದಾಪುರ ಗ್ರಾಮಗಳಿಂದ ದೊಡ್ಡ ದೊಡ್ಡ ಗ್ರಾನೈಟ್ ಶಿಲೆಗಳನ್ನು ಹೊತ್ತು ಲಾರಿಗಳು ಸಾಗುತ್ತಿದ್ದರಿಂದ ಈ ಡಾಂಬರ್ ರಸ್ತೆ ಒಂದು ತಿಂಗಳು ಸಹಿತ ಬಾಳಿಕೆ ಬರುವುದಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿದ್ದಾಗಿದೆ.
ಪರಿಶೀಲಿಸಿ: ಕೆಲಸ ಆರಂಭವಾಗಿದ್ದರೂ, ಸ್ಥಳಕ್ಕೆ ಇದುವರಿಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಭೇಟಿ ನೀಡಿಲ್ಲ. ಆದ್ದರಿಂದ ಡಾಂಬರ್ ಕಾಮಗಾರಿ ಕಳಪೆಯಾಗಿ ನಿರ್ಮಿಸಲಾಗಿದ್ದು, ಮೇಲಾಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ನೆಪ: ಕಾಮಗಾರಿ ಕಳಪೆಯಾಗಿದೆ ಎಂದು ಗ್ರಾಮಸ್ಥರು ಡಾಂಬರೀಕರಣ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದರು. ಆದರೆ ಅಧಿಕಾರಿಗಳು ಚುನಾವಣೆ ನೆಪ ಹೇಳಿ ಜಾರಿಕೊಳ್ಳುತ್ತಿದ್ದರಿಂದ ಗುತ್ತಿಗೆದಾರರು ಕಾಮಗಾರಿಯನ್ನು ತರಾತುರಿಯಲ್ಲಿ ಪೂರ್ಣಗೊಳಿಸಲು ಮುಂದಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement