'ಶೋಷಿತರ ಆಶಾಕಿರಣ ಅಂಬೇಡ್ಕರ್'
ಲಿಂಗಸ್ಗೂರು: ದೇಶದಲ್ಲಿ ಎಲ್ಲರೂ ಸಮಾನವಾಗಿ ಜೀವನ ಸಾಗಿಸಬೇಕೆಂಬ ಉದ್ದೇಶದಿಂದ ಡಾ. ಅಂಬೇಡ್ಕರ್ ತಮ್ಮ ಜೀವನ ಮುಡಿಪಾಗಿಡುವ ಮೂಲಕ ಶೋಷಿತ ವರ್ಗಗಳ ಆಶಾಕಿರಣವಾಗಿದ್ದಾರೆಂದು ಸಹಾಯಕ ಆಯುಕ್ತ ಟಿ. ಯೋಗೇಶ್ ಹೇಳಿದರು.
ಪಟ್ಟಣದ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ಸೋಮವಾರ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ 123ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿ, ಡಾ. ಅಂಬೇಡ್ಕರ್ ಹೋರಾಟದಿಂದ ಇಂದು ಶೋಷಿತರ ಜೀವನದಲ್ಲಿ ಆತ್ಮ ವಿಶ್ವಾಸ ಮೂಡಿಸಿದೆ. ಅಂಬೇಡ್ಕರ್‌ಗೆ ಪ್ರಮುಖ ಹುದ್ದೆಗಳು ಅರಸಿ ಬಂದರೂ ಅವುಗಳನ್ನು ತಿರಸ್ಕರಿಸಿ ಸಂವಿಧಾನದ ಹಕ್ಕು ಪ್ರತಿಯೊಬ್ಬರಿಗೂ ದೊರೆಯಬೇಕು ಹಾಗೂ ಶೋಷಿತ ವರ್ಗವನ್ನು ಮುಖ್ಯವಾಹಿನಿಗೆ ತರುವ ಸದುದ್ದೇಶದಿಂದ ಅನೇಕ ಕಷ್ಟಗಳನ್ನು ಎದುರಿಸಿದ್ದರು ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಜಿ.ಎಸ್. ಮಹಾಜನ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶರಣಬಸಪ್ಪ, ಸಿಡಿಪಿಒ ಪ್ರಭಾಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಗೌಡ ಪಾಟೀಲ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಲ್.ಬಿ. ಸಜ್ಜನ್, ಪುರಸಭೆ ಮುಖ್ಯಾಧಿಕಾರಿ ಈರಣ್ಣ ಬಿರಾದರ್, ಪಶು ಸಂಗೋಪನಾ ಇಲಾಖೆ ಅಧಿಕಾರಿ ಡಾ. ರಾಚಪ್ಪ, ಉಪನ್ಯಾಸಕ ಡಾ.ಕೆ. ಶಶಿಕಾಂತ ಸೇರಿದಂತೆ ಇದ್ದರು.