ಸಿಂಧನೂರಿನಲ್ಲಿ 237 ಮತಗಟ್ಟೆ: ಮೋಮಿನ್
ಸಿಂಧನೂರು: ಲೋಕಸಭೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಮೋಮಿನ್ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸ್ಥಳೀಯ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,60,867 ಮತದಾರರಿದ್ದು, ಅದರಲ್ಲಿ 1,03,498 ಸ್ತ್ರೀಯರು, 1,03,349 ಪುರುಷ ಮತದಾರರಿದ್ದಾರೆ. ಒಟ್ಟು 237 ಮತಗಟ್ಟೆಗಳಿವೆ. ಅದರಲ್ಲಿ 82 ಸೂಕ್ಷ್ಮ, 48 ಅತಿ ಸೂಕ್ಷ್ಮ, 107 ಸಾಮಾನ್ಯ ಮತಗಟ್ಟೆಗಳಿವೆ.
ನಗರದಲ್ಲೇ 58 ಮತಗಟ್ಟೆಗಳಿದ್ದು ಕರ್ತವ್ಯಕ್ಕೆ ಸರ್ಕಾರಿ, ಅರೆ ಸರ್ಕಾರಿ ನೌಕರರನ್ನು ಒಳಗೊಂಡು 1072 ಸಿಬ್ಬಂದಿ ನಿಯೋಜಿಸಲಾಗಿದೆ. ವಿವಿಧ ತಾಲೂಕಿನಿಂದ ಬಂದ ಚುನಾವಣಾ ಸಿಬ್ಬಂದಿಗೆ 2ನೇ ಹಂತದ ತರಬೇತಿ ನೀಡಲಾಗಿದ್ದು ಏ.16ರಂದು 3ನೇ ಹಂತದ ತರಬೇತಿ ನೀಡಿ ಮತಗಟ್ಟೆಗಳಿಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.
ಬಿಗಿ ಭದ್ರತೆ: ಮತದಾನ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಿಪಿಐ ಶೇಖರಪ್ಪ ತಿಳಿಸಿದ್ದಾರೆ. ಸಿಂಧನೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಬ್ಬರು ಎಸ್ಪಿ, ಒಬ್ಬರು ಡಿವೈಎಸ್ಪಿ, 3 ಜನ ಸಿಪಿಐ, 4 ಪಿಎಸ್ಐ, 20 ಎಎಸ್ಐ, 125 ಸಿಬ್ಬಂದಿ, 160 ಜನ ಹೋಂಗಾರ್ಡ್ಸ್, 90 ಜನ ಕೆಎಸ್ಆರ್ಪಿ, 20 ಜನ ಡಿಆರ್ ಜೊತೆಗೆ 30 ಜನ ಮೀಸಲು ಪಡೆಯ ಸಶಸ್ತ್ರ ಮೀಸಲು ಪಡೆ ಇದೆ. ಮತದಾನ ಕೇಂದ್ರದ ಸುತ್ತ 200 ಮೀಟರ್ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆ ತಹಸೀಲ್ದಾರ್ ಜಗನ್ನಾಥರೆಡ್ಡಿ, ನಗರಸಭೆ ಪೌರಾಯುಕ್ತ ಪ್ರಹ್ಲಾದ್ ಮತ್ತಿತರರು ಇದ್ದರು.