ಕರ್ತವ್ಯಕ್ಕೆ ಗೈರಾದರೆ ಕ್ರಿಮಿನಲ್ ಕೇಸ್
ರಾಯಚೂರು: ಚುನಾವಣೆಯಲ್ಲಿ ಮತದಾನ ಕಾರ್ಯಕ್ಕೆ ನೇಮಕಗೊಂಡ ಸಿಬ್ಬಂದಿ ಕರ್ತವ್ಯಕ್ಕೆ ಗೈರು ಹಾಜರಾದರೆ ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಜಿಲ್ಲಾಡಳಿತ ಸೂಚಿಸಿದೆ. ನಗರದ ಎಲ್ವಿಡಿ ಕಾಲೇಜಿನಲ್ಲಿ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಈ ವಿಷಯ ತಿಳಿಸಿ, ಜಿಲ್ಲಾಡಳಿತವು 9012 ಸಿಬ್ಬಂದಿಯನ್ನು ಚುನಾವಣೆ ಕಾರ್ಯಕ್ಕೆ ನಿಯೋಜಿಸಿದೆ. ಈ ಪೈಕಿ ಸೂಕ್ತ ಕಾರಣವಿಲ್ಲದೇ ಚುನಾವಣೆ ಕಾರ್ಯದಿಂದ ತಪ್ಪಿಸಿಕೊಳ್ಳಲು ಯತ್ನಿಸಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ ಎಂದು ಎಚ್ಚರಿಸಿದರು. ಈಗಾಗಲೇ ಎಲ್ಲ ವಿಧಾನಸಕ್ಷೆ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳಿಗೆ ಈ ಕುರಿತು ಸಂದೇಶ ರವಾನಿಸಿದ್ದು, ಮತಗಟ್ಟೆಗಳಿಗೆ ತೆರಳಲು ನಿರಾಸಕ್ತಿ ತೋರುವ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ ಎಂದು ತಿಳಿಸಿದರು.