ಪ್ಲೀಸ್ ವೋಟ್ ಮಾಡಿ, ಪ್ರಗತಿಗೆ ನಾಂದಿ ಹಾಡಿ
ಜಗನ್ನಾಥ ಆರ್. ದೇಸಾಯಿ
ಕ.ಪ್ರ. ವಾರ್ತೆ ರಾಯಚೂರು ಏ.16
ಚುನಾವಣೆಯ ದಿನದಂದು ರಜೆಯಿದೆ ಎಂದು ಮೋಜಿಗೆ ತೆರಳಬೇಡಿ. ವೈಯಕ್ತಿಕ ಕೆಲಸಕ್ಕೆ ಮುನ್ನ ಮತಗಟ್ಟೆಗೆ ಬಂದು ಮತದಾನ ಮಾಡುವುದು ನಿಮ್ಮ ಆದ್ಯ ಕರ್ತವ್ಯವಾಗಲಿ. ಪ್ರಜಾಪ್ರಭುತ್ವ ರಕ್ಷಿಸುವ ಕಾರ್ಯವಾಗಲಿ..
ಎಲ್ಲರೂ ತಪ್ಪದೇ ಮತದಾನ ಮಾಡಬೇಕೆಂಬ ಆಶಯದೊಂದಿಗೆ ಜಿಲ್ಲಾಡಳಿತ ಕೈಗೊಂಡ ನಾನಾ ರೀತಿಯ ಮತದಾರರ ಜಾಗೃತಿಯ ಮುಖ್ಯಾಂಶಗಳಿವು. ಅಲ್ಲದೆ ಮತದಾರರ ಜಾಗೃತಿ ಕಾರ್ಯಕ್ರಮದ ಫಲಿತಾಂಶ ಹೊರಬೀಳುವ ದಿನವೂ ಕೂಡ.
ಜಿಲ್ಲಾಡಳಿತ ಹಿಂದೆಂದಿಗಿಂತ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಿತು. ಅಂತೆಯೇ ಹತ್ತಾರು ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮತದಾರರನ್ನು ಮತಗಟ್ಟೆಗಳಿಗೆ ಸೆಳೆಯುವ ಪ್ರಯತ್ನಗಳು ನಡೆದಿದ್ದವು.
ಪ್ರಮಾಣ ಕುಸಿತ: ಕಳೆದ ಬಾರಿಯ ಲೋಕಸಭೆ ಚುನಾವಣೆ ವೇಳೆ ರಾಜ್ಯದ 10 ಕ್ಷೇತ್ರಗಳಲ್ಲಿ ಕಡಿಮೆ ಮತದಾನವಾಗಿತ್ತು. ಅದರಲ್ಲಿ ರಾಯಚೂರು ಸೇರಿತ್ತು. ಇಲ್ಲಿ ಅತೀ ಕಡಿಮೆ ಶೇ.45.91 ಮತದಾನವಾಗುವ ಮೂಲಕ ಆಯೋಗಕ್ಕೆ ಆತಂಕ ತಂದಿತ್ತು.
ಅಂತೆಯೇ ಈ ಬಾರಿಯ ಚುನಾವಣೆಯಲ್ಲಿ ಶತಾಯಗತಾಯ ಮತದಾನದ ಪ್ರಮಾಣ ಹೆಚ್ಚಾಗಲೇಬೇಕೆಂದು ಜಿಲ್ಲಾಡಳಿತ ಪಣತೊಟ್ಟಿದೆ. ಅಂತೆಯೇ ಜಿಲ್ಲಾಡಳಿತದ ವ್ಯಾಪ್ತಿಯ ಎಲ್ಲ ಇಲಾಖೆಗಳಿಗೆ ಮತದಾರರಲ್ಲಿ ಕಡ್ಡಾಯ ಮತದಾನಕ್ಕೆ ಸಂಬಂಧಿಸಿ ಜಾಗೃತಿ ಮೂಡಿಸುವ ಅನೇಕ ಜಾಥಾ ಆಯೋಜಿಸಿತು. ಎಲ್ಲ ಇಲಾಖೆಗಳ ಸಿಬ್ಬಂದಿಯನ್ನು ಗ್ರಾಮೀಣ ಭಾಗದಲ್ಲಿ ಮನೆಮನೆಗೆ ಕಳಿಸಿ ಮತದಾನದ ಮಹತ್ವ, ಆಗುವ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಯಿತು.
ಮಮತೆಯ ಕರೆಯೋಲೆ: ಸಾಮಾನ್ಯವಾಗಿ ಮದುವೆ, ಮುಂಜಿವೆ, ಆರತಕ್ಷತೆಯಂಥ ಕಾರ್ಯಕ್ರಮಗಳಿಗೆ ಮಮತೆಯ ಕರೆಯೋಲೆ ಮುದ್ರಿಸಿ ಹಂಚಿ ಸಂಭ್ರಮದಿಂದ ಆಹ್ವಾನಿಸುವುದು ರೂಢಿ. ಆದರೆ ರಾಯಚೂರು ಜಿಲ್ಲಾಡಳಿತ ಈ ತಂತ್ರವನ್ನೇ ಮತದಾರರನ್ನು ಮತಗಟ್ಟೆಗಳಿಗೆ ಸೆಳೆಯಲು ಬಳಸಿತು.
50 ಸಾವಿರ ಮತದಾರರನ್ನು ಮತಗಟ್ಟೆಗೆ ಆಹ್ವಾನಿಸುವ ಮಮತೆಯ ಕರೆಯೋಲೆಗಳನ್ನು ಮುದ್ರಿಸಿ ಸ್ವಸಹಾಯ ಸಂಘಗಳು, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಕಳೆದ ಬಾರಿ ಕಡಿಮೆ ಮತದಾನವಾಗಿದ್ದ ಪ್ರದೇಶದಲ್ಲಿ ಮನೆಮನೆಗೆ ತೆರಳಿ ಆಮಂತ್ರಣ ನೀಡಲಾಗಿದೆ. ಆ ಮೂಲಕ ಮತದಾರರಿಗೆ ಮತದಾನದ ಮಹತ್ವ ಸಾರುವ ಕಾರ್ಯವೂ ನಡೆದಿದೆ.
ಇಂದು ಫೈನಲ್ ಡೇ: ಮತದಾನದ ದಿನವಾದ ಏ.17ರಂದು ಮತದಾರರ ಜಾಗೃತಿ ಕಾರ್ಯ ನಡೆಯಲಿದೆ. ಮತದಾನದ ಪ್ರಮಾಣ ಹೆಚ್ಚಳದ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಸುಧಾರಣೆ ಸಾಧ್ಯ ಎಂಬ ಸಂದೇಶ ಸಾರುವ ಕಾರ್ಯ ಜಾರಿಯಲ್ಲಿದೆ. ನಗರ ಸೇರಿದಂತೆ ಕ್ಷೇತ್ರದಾದ್ಯಂತ ಸಾವಿರಾರು ಸಂಖ್ಯೆಯ ಗೋಡೆಬರೆಹ, ಬ್ಯಾನರ್ಗಳ ಅಳವಡಿಕೆ, ವೈದ್ಯರು ಬರೆದುಕೊಡುವ ಔಷಧಿ ಚೀಟಿ ಮೇಲೆ ಕಡ್ಡಾಯ ಮತದಾನ ಮಾಡುವಂತೆ ಒತ್ತಾಯಿಸುವ ಮುದ್ರೆ ಒತ್ತುವುದು ಸೇರಿದಂತೆ ವಿವಿಧ ರೀತಿಯಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದೆ.
ಫಲಿತಾಂಶ: ಅಭ್ಯರ್ಥಿಗಳ ಭವಿಷ್ಯವು ಮೇ 16ರಂದು ಮತಎಣಿಕೆ ನಂತರ ಗೊತ್ತಾಗಲಿದೆ. ಹಾಗೆಯೇ ಜಿಲ್ಲಾಡಳಿತ ನಡೆಸಿದ ಮತದಾರರ ಜಾಗೃತಿ ಕಾರ್ಯಕ್ರಮಗಳ ಫಲಿತಾಂಶಕ್ಕೆ ಮೇ 16ರವರೆಗೆ ಕಾಯಬೇಕಿಲ್ಲ. ಮತದಾನದ ದಿನವಾದ ಏ.17ರಂದು ಸಂಜೆ ಹೊತ್ತಿಗೆ ಮತದಾನದ ಪ್ರಮಾಣ ಬಯಲಾಗುವ ಮೂಲಕ ಫಲಿತಾಂಶ ಹೊರಬೀಳಲಿದೆ. ಎಲ್ಲರ ಪ್ರಯತ್ನ ಸಾರ್ಥಕತೆ ಕಾಣಲಿದೆ. ಮತದಾನದ ಪ್ರಮಾಣ ನಿರೀಕ್ಷೆಗೂ ಮೀರಿ ಏರಿಕೆಯಾಗಲಿ ಎಂಬುದು ನಮ್ಮೆಲ್ಲರ ಆಶಯವೂ ಹೌದು.