ಸನ್ಮಾರ್ಗಕ್ಕೆ ಭಗವಂತನ ಸ್ಮರಿಸಿ
ಲಿಂಗಸ್ಗೂರು: ಭಗವಂತನ ನಾಮಸ್ಮರಣೆಯಿಂದ ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯಲು ಸಾಧ್ಯವಾಗಲಿದೆ ಎಂದು ಪಂಡಿತ್ ಶೇಷಾಚಾರ್ಯ ರಾಜಪುರೋಹಿತ್ ಅಭಿಪ್ರಾಯಪಟ್ಟರು.
ಪಟ್ಟಣದ ರಾಘವೇಂದ್ರಸ್ವಾಮಿ ಮಠದಲ್ಲಿ ತಾಲೂಕು ಬ್ರಾಹ್ಮಣ ಸಂಘದಿಂದ ಹಮ್ಮಿಕೊಂಡಿದ್ದ ಉಚಿತ ಬೇಸಿಗೆ ಧಾರ್ಮಿಕ ಶಿಬಿರ ಉದ್ಘಾಟಿಸಿ ಮಾತನಾಡಿ, ಬ್ರಹ್ಮ ಜ್ಞಾನ ಹೊಂದಿದವರಾಗಿದ್ದು, ಭಗವಂತನ ನಾಮಸ್ಮರಣೆ ಮಾಡುವ ಮೂಲಕ ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯುವುದು ಬ್ರಾಹ್ಮಣರ ಕರ್ತವ್ಯವಾಗಿದೆ ಎಂದರು.
ಮಕ್ಕಳಿಗೆ ಧಾರ್ಮಿಕ ಪ್ರಜ್ಞೆ ಬೆಳೆಸಿ: ಜೀವನದಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಯಲು ಗುರುವಿನ ಅವಶ್ಯಕತೆಯಿದ್ದು, ಮನುಷ್ಯನಲ್ಲಿಯ ಅಂಧಕಾರ ತೊಲಗಿಸಿ ಜ್ಞಾನಾರ್ಜನೆ ನೀಡುವ ಗುರುವಾಗಿರಬೇಕು. ರಾಯಚೂರು ಜಿಲ್ಲೆ ದಾಸರು, ಶರಣರ ನಾಡಾಗಿದ್ದು, ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವಲ್ಲಿ ಬ್ರಾಹ್ಮಣರ ಸಂಘ ಉತ್ತಮ ಕಾರ್ಯ ಮಾಡುತ್ತಿದೆ ಎಂದರು. ಸಮಾಜದ ಹಿರಿಯ ಮುಖಂಡ ಶ್ಯಾಮಸುಂದರ ಮುತಾಲಿಕ್ ಮಾತನಾಡಿ, ಮಕ್ಕಳಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವಲ್ಲಿ ಇಂತಹ ಶಿಬಿರಗಳು ಸಹಕಾರಿಯಾಗಲಿದ್ದು, ಬರುವ ದಿನಗಳಲ್ಲಿ ರಾಘವೇಂದ್ರಸ್ವಾಮಿ ಮಠ ಹಾಗೂ ಬ್ರಾಹ್ಮಣ ಸಮಾಜದಿಂದ ಸಾಮೂಹಿಕ ಉಪನಯನ ಕಾರ್ಯಕ್ರಮ ಆಯೋಜಿಸಲು ಸಹಕಾರ ನೀಡುವುದಾಗಿ ತಿಳಿಸಿದರು.
ಶಿಬಿರದಲ್ಲಿ ಮುಖಂಡರಾದ ವಂದಾಲಿ ಪ್ರಾಣೇಶ ಆಚಾರ್ಯ, ಮುಖ್ಯ ಅರ್ಚಕ ಕೃಷ್ಣಾಚಾರ ಗೋತಗಿ, ವ್ಯವಸ್ಥಾಪಕ ಧೀರೇಂದ್ರಚಾರ್ಯ, ಸಂಘದ ಅಧ್ಯಕ್ಷ ವೆಂಕಟೇಶ ಮುತಾಲಿಕ್, ಕಾರ್ಯದರ್ಶಿ ಪ್ರಾಣೇಶ ಜೋಷಿ, ಮುರಳೀಧರ ಕುಲ್ಕರ್ಣಿ, ರವಿಕುಮಾರ ಕೋಠಾ ಸೇರಿದಂತೆ ಇದ್ದರು.