ಫಲಿಸಿತು ಜಿಲ್ಲಾಡಳಿತ ಪ್ರಯತ್ನ
ಕ.ಪ್ರ. ವಾರ್ತೆರಾಯಚೂರುಏ.17
ಜಿಲ್ಲಾಡಳಿತದ ಮತದಾರರ ಜಾಗೃತಿ ಕಾರ್ಯಕ್ರಮಗಳು ಕೊನೆಗೂ ಫಲಪ್ರದವಾಗಿರುವ ಲಕ್ಷಣಗಳು ಗೋಚರಿಸಿವೆ. ಕಡ್ಡಾಯ ಮತದಾನದ ಮಹತ್ವ, ಯುವಕರಲ್ಲಿ ಮತದಾನದ ಬಗ್ಗೆ ಜಾಗೃತಿಯಂಥ ವಿವಿಧ ಕಾರ್ಯಕ್ರಮಗಳ ಮೂಲಕ ಮತದಾರರ ಜಾಗೃತಿ ಕೈಗೊಂಡಿದ್ದರ ಫಲವಾಗಿ ಮತದಾನದ ಪ್ರಮಾಣ ಶೇ.45.91 ರಿಂದ ಈ ಬಾರಿ ಶೇ.60.32ಕ್ಕೆ ಏರಿಕೆ ಕಂಡಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಕುಸಿದಿದ್ದ ಮತದಾನದ ಪ್ರಮಾಣ ಪ್ರಸಕ್ತ ಚುನಾವಣೆಯಲ್ಲಿ ಮೇಲೆತ್ತುವಲ್ಲಿ ಕೊನೆಗೂ ಜಿಲ್ಲಾಡಳಿತ ಯಶಸ್ವಿಯಾಗಿದ್ದು, ಗುರುವಾರ ನಡೆದ ಮತದಾನದ ನಂತರ ಇದು ಸಾಬೀತಾಗಿದೆ. ಅಧಿಕಾರಿಗಳು ಒಂದೆಡೆ ಚುನಾವಣೆ ಸುಸೂತ್ರ ನಡೆದ ಸಂಭ್ರಮದಲ್ಲಿದ್ದರೆ, ಮತ್ತೊಂದೆಡೆ ಮತದಾನದ ಪ್ರಮಾಣ ಹೆಚ್ಚಳವಾಗಿತ್ತು ಅವರ ಸಂತಸವನ್ನು ಇಮ್ಮಡಿಗೊಳಿಸಿದೆ.
ಆಗ ಪ್ರಮಾಣ: 2009ರಲ್ಲಿ ನಡೆದ ಲೋಕಸಭೆ ಚುನಾವಣೆಯ ಮತದಾನದ ವೇಳೆ ಜಿಲ್ಲೆಯಲ್ಲಿ ಶೇ.45.91ರಷ್ಟು ಮತದಾನವಾಗಿತ್ತು. ರಾಯಚೂರು ನಗರ ಕ್ಷೇತ್ರದಲ್ಲಿ ಸುಶಿಕ್ಷಿತ ಮತದಾರರೇ ಹೆಚ್ಚಾಗಿರುವ ವಿವಿಧ ಬಡಾವಣೆಗಳ ಮತಗಟ್ಟೆಗಳಲ್ಲಿ ಮತದಾನದ ಪ್ರಮಾಣ ಕುಸಿತ ಕಂಡಿದ್ದು, ಜಿಲ್ಲಾಡಳಿತಕ್ಕೆ ಆತಂಕ ತಂದಿತ್ತು.
ರಾಯಚೂರು ನಗರ ಕ್ಷೇತ್ರದ ನಿಜಲಿಂಗಪ್ಪ ಕಾಲನಿಯ ಮತಗಟ್ಟೆಯಲ್ಲಿ ತೀರಾ ಕಡಿಮೆ ಮತದಾನವಾಗಿದ್ದು ಆಡಳಿತಕ್ಕೆ ಚಿಂತೆಯುಂಟು ಮಾಡಿತ್ತು. ಅದರಿಂದಾಗಿ ಮತದಾನದ ದಿನಗಳು ಸಮೀಪಿಸುತ್ತಿದ್ದಂತೆಯೇ ಜಿಲ್ಲಾಡಳಿತ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಭಾರೀ ಸಂಖ್ಯೆಯಲ್ಲಿ ಆಯೋಜಿಸಿತ್ತು.
ಮಮತೆಯ ಕರೆಯೋಲೆ: 2009ರ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿದ್ದ 130 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಈ ಬಾರಿ ಜಿಲ್ಲಾಡಳಿತ ಮತದಾರರನ್ನು ಮತಗಟ್ಟೆಗಳಿಗೆ ಮತದಾನಕ್ಕೆಂದು ಏ.17ರಂದು ಆಗಮಿಸುವಂತೆ ಮಮತೆಯ ಕರೆಯೋಲೆ ಹಂಚುವ ಮೂಲಕ ಆಮಂತ್ರಣ ನೀಡಿತ್ತು.
ಸುಮಾರು 50 ಸಾವಿರ ಇಂಥ ಮತಗಟ್ಟೆಯ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಿ ಜಿಲ್ಲಾಡಳಿತ ಮತ್ತು ವಿವಿಧ ಇಲಾಖೆಗಳ ಸಿಬ್ಬಂದಿಗಳಿಂದ ಮನೆ ಮನೆಗೆ ತೆರಳಿ ಮತದಾರರಿಗೆ ಹಂಚಿಕೆ ಮಾಡುವ ಮೂಲಕ ಮತದಾನ ಕಾರ್ಯದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಗಿತ್ತು.
ಮತದಾನದ ಮಹತ್ವ: ಅಷ್ಟೇ ಅಲ್ಲ ಜಿಲ್ಲಾಡಳಿತದ ವಿವಿಧ ಇಲಾಖೆಗಳು ಜಾಗೃತಿ ಜಾಥಾ ನಡೆಸಿದ್ದವು. ಜತೆಗೆ ಗ್ರಾಮೀಣ ಪ್ರದೇಶದಲ್ಲಿ ಬೀದಿ ನಾಟಕ ಪ್ರದರ್ಶನಗಳನ್ನೂ ಆಯೋಜಿಸುವ ಮೂಲಕ ಮತದಾರರಲ್ಲಿ ಕಡ್ಡಾಯ ಮತದಾನದ ಮಹತ್ವ ತಿಳಿಸಿಕೊಡುವ ಕಾರ್ಯವನ್ನು ಭಾರೀ ಸಂಖ್ಯೆಯಲ್ಲಿ ಮಾಡಲಾಗಿತ್ತು.
ವೈದ್ಯರದ್ದೂ ಸಾಥ್: ಪ್ರಸಕ್ತ ಚುನಾವಣೆಯಲ್ಲಿ ರಾಯಚೂರಿನ ವೈದ್ಯರೂ ಮತದಾನದ ಜಾಗೃತಿಯಲ್ಲಿ ನಾನಾ ರೀತಿಯಿಂದ ಪಾಲ್ಗೊಂಡಿದ್ದರು. ಔಷಧಿಯ ಚೀಟಿಯಲ್ಲಿ ಮತದಾನದ ಬಗ್ಗೆ ಜಾಗೃತಿಯಿರುವ ಮುದ್ರೆ ಬಳಕೆ ಮಾಡಲಾಗಿತ್ತು. ಅದಕ್ಕಿಂತ ಮುಖ್ಯವಾಗಿ ಮತದಾನ ಮಾಡಿದವರು ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದಲ್ಲಿ ಅವರು ಮತದಾನ ಮಾಡಿದ ಶಾಯಿ ಪ್ರದರ್ಶಿಸಿ ವೈದ್ಯರ ಸಂದರ್ಶನ ಶುಲ್ಕದಲ್ಲಿ ಶೇ.25ರಷ್ಟು ರಿಯಾಯಿತಿ ಪಡೆಯಿರಿ ಎಂಬ ಆಫರ್ ವೈದ್ಯರು ನೀಡಿದ್ದರು.
ಇಂಥ ಎಲ್ಲ ಮತದಾರರ ಜಾಗೃತಿ ಕಾರ್ಯಕ್ರಮಗಳು ಕೊನೆಗೂ ಫಲ ನೀಡಿವೆ. ಕಳೆದ ಬಾರಿಗಿಂತ ಪ್ರಸಕ್ತ ಚುನಾವಣೆಯಲ್ಲಿ ಮತದಾನದ ಪ್ರಮಾಣ ಶೇ.10.81ರಷ್ಟು ಏರಿಕೆ ಕಾಣುವ ಮೂಲಕ ಜಿಲ್ಲಾಡಳಿತದ ಪರಿಶ್ರಮ ತಕ್ಕಮಟ್ಟಿಗೆ ಸಾರ್ಥಕತೆ ಕಂಡಿದೆ ಎಂಬುದರಲ್ಲಿ ಸಂದೇಹವಿಲ್ಲ.
ಜಗನ್ನಾಥ ಆರ್. ದೇಸಾಯಿ