ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮತದಾನ ಶಾಂತಿಯುತ

Mainashree
Updated On : 18 Apr 2014, 10:34 am

ಕ.ಪ್ರ. ವಾರ್ತೆ ್ಣ ರಾಯಚೂರು ್ಣ ಏ.17
ಪ್ರಸಕ್ತ ಲೋಕಸಭೆ ಚುನಾವಣೆಯ ಮತದಾನ ಗುರುವಾರ ಶಾಂತಿಯುತವಾಗಿ ಪೂರ್ಣಗೊಂಡಿದೆ. ಮತದಾನದ ಆರಂಭದಲ್ಲಿ ಅಲ್ಲಲ್ಲಿ ಮತಯಂತ್ರಗಳಲ್ಲಿ ದೋಷ ಕಂಡುಬಂದಿದ್ದು ಬಿಟ್ಟರೆ, ಮೊದಲು ಮತದಾನ ಬಹಿಷ್ಕರಿಸಿದವರೂ ಆನಂತರದಲ್ಲಿ ಮತದಾನ ಮಾಡಿದರು. ಜಿಲ್ಲೆಯಲ್ಲಿ ಅಂದಾಜು ಶೇ.----ರಷ್ಟು ಮತದಾನವಾದ ಬಗ್ಗೆ ವರದಿಯಾಗಿದೆ.
ಬೆಳಗ್ಗೆಯಿಂದಲೇ ರಾಯಚೂರು ನಗರ ಸೇರಿದಂತೆ ಅನೇಕ ಪಟ್ಟಣ ಪ್ರದೇಶದಲ್ಲಿ ಮತದಾನಕ್ಕಾಗಿ ಜನತೆ ಮತಗಟ್ಟೆಗಳಿಗೆ ಧಾವಿಸಿದ್ದು ಕಂಡುಬಂದಿತು. ಅದರಲ್ಲೂ ಬೇಸಿಗೆಯ ದಿನಗಳಾಗಿದ್ದರಿಂದ ಬಿರುಬಿಸಿಲ ತಾಪ ಏರುವ ಮೊದಲೇ ಮತದಾನ ಮಾಡಿ ಮನೆ ಸೇರಿದರಾಯಿತು ಎಂಬ ಧಾವಂತ ಮತದಾರರಲ್ಲಿ ಕಂಡುಬಂದಿದ್ದು ವಿಶೇಷ.
ಗ್ರಾಮೀಣ ಪ್ರದೇಶದಲ್ಲಿ ಬೆಳಗಿನ ವೇಳೆ ಮತದಾನ ಮಂದಗತಿಯಲ್ಲಿತ್ತು. ಆದರೆ ಮಧ್ಯಾಹ್ನದ ನಂತರದಲ್ಲಿ ವೇಗ ಪಡೆದುಕೊಂಡಿತು. ಗ್ರಾಮೀಣ ಜನರು ಬಿರುಬಿಸಿಲನ್ನು ಲೆಕ್ಕಿಸದೇ ಹುಮ್ಮಸ್ಸಿನಿಂದ ಮತದಾನದಲ್ಲಿ ಪಾಲ್ಗೊಂಡಿದ್ದರು. ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಬಹುತೇಕ ಅಭ್ಯರ್ಥಿಗಳು ದೇವದುರ್ಗ ತಾಲೂಕಿನವರಾಗಿದ್ದರಿಂದ ಅಲ್ಲಿ ಮತದಾನ ಜೋರಾಗಿತ್ತು.
ಅದರಲ್ಲೂ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ ಮತ್ತು ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಅವರ ಸ್ವಗ್ರಾಮ ಅರಕೇರಾದಲ್ಲಿ ಬೆಳಗ್ಗೆಯಿಂದಲೇ ಬಿರುಸಿನ ಮತದಾನ ಕಂಡುಬಂದಿತು. ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಆಸಕ್ತಿಯಿಂದ ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಿದರು.
ಮತಯಂತ್ರ ದೋಷ: ರಾಯಚೂರು ನಗರದ ಸೇರಿದಂತೆ ವಿವಿಧೆಡೆ ಸುಮಾರು ಐದಾರು ಕಡೆ ಮತಗಟ್ಟೆಗಳಲ್ಲಿ ಬೆಳಗ್ಗೆ ಮತದಾನ ಆರಂಭವಾಗುತ್ತಿದ್ದಂತೆಯೇ ಮತಯಂತ್ರಗಳಲ್ಲಿ ದೋಷ ಕಂಡು ಬಂದಿತು. ಅದರಿಂದ ಮತದಾನಕ್ಕೆ ಅಡಚಣೆಯಾಯಿತು. ಸುದ್ದಿ ತಿಳಿಯುತ್ತಿದ್ದಂತೆಯೇ ಚುನಾವಣಾಧಿಕಾರಿಗಳು ಮತಗಟ್ಟೆಗಳಿಗೆ ದೌಡಾಯಿಸಿ ಪರ್ಯಾಯ ಮತಯಂತ್ರಗಳನ್ನು ಒದಗಿಸಿ ಮತದಾನ ಕಾರ್ಯ ಸುಗಮಗೊಳಿಸಿದರು. ಇದರಿಂದಾಗಿ ಒಂದರಿಂದ ಒಂದೂವರೆ ಗಂಟೆ ಮತದಾನ ತಡವಾಗಿ ಆರಂಭಗೊಂಡಿತು.
ದೇವದುರ್ಗ ತಾಲೂಕಿನ ಗಬ್ಬೂರು, ಕೋಳೂರು, ಯಾಟಗಲ್ ಗ್ರಾಮ ಸೇರಿ ಕೆಲ ಕೇಂದ್ರಗಳಲ್ಲಿ ಮತಯಂತ್ರ ದೋಷದಿಂದ ಕೆಲ ಹೊತ್ತು ಮತದಾನ ಸ್ಥಗಿತಗೊಂಡಿತ್ತು. ಆದರೆ ಯಂತ್ರದಲ್ಲಿನ ದೋಷ ಸರಿಪಡಿಸಿದ ನಂತರ ಮತದಾನ ಪುನಾರಂಭವಾಯಿತು.
ಪ್ರಮುಖರ ಮತದಾನ: ಲೋಕಸಭೆ ಕ್ಷೇತ್ರದ ಪ್ರಮುಖ ಅಭ್ಯರ್ಥಿಗಳು ಗುರುವಾರ ಅವರ ಸ್ವಗ್ರಾಮಗಳಲ್ಲಿ ಮತದಾನ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ ಹಾಗೂ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಅವರು ಅರಕೇರಾದಲ್ಲಿ ಮತದಾನ ಮಾಡಿದರು. ದೇವದುರ್ಗ ಶಾಸಕ ವೆಂಕಟೇಶ ನಾಯಕ ಅವರು ಅರಕೇರಾದಲ್ಲಿ ಮತದಾನ ಮಾಡಿದರು. ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಭೀಮರಾಯ ಅವರು ದೇವದುರ್ಗದ ಜರದಬಂಡಿ ಗ್ರಾಮದಲ್ಲಿ ಮತದಾನ ಮಾಡಿದರು.
ಬಿರುಬಿಸಿಲ ತಾಪ: ಏಪ್ರಿಲ್ ತಿಂಗಳಿನ ಆರಂಭದೊಂದಿಗೆ ಜಿಲ್ಲೆಯಲ್ಲಿ ಬಿರುಬಿಸಿಲ ತಾಪ 40 ಡಿಗ್ರಿಯನ್ನು ದಾಟಿದೆ. ಗುರುವಾರವೂ ತಾಪಮಾನ ತುಸು ಹೆಚ್ಚಾಗಿತ್ತು. ಪರಿಣಾಮ ಮತಗಟ್ಟೆಗಳಿಗೆ ಆಗಮಿಸಿದ ಬಹುತೇಕರು ಮೊದಲು ಬಿಸಿಲಿನಿಂದ ತುಸು ಸಾವರಿಸಿಕೊಂಡು ನಂತರದಲ್ಲಿ ಮತದಾನ ಮಾಡಲು ಮುಂದಾಗುತ್ತಿದ್ದ ದೃಶ್ಯ ಗ್ರಾಮೀಣ ಪ್ರದೇಶದಲ್ಲಿ ಕಂಡುಬಂದಿತು.
ದೇವದುರ್ಗ ತಾಲೂಕಿನ ಕೊತ್ತದೊಡ್ಡಿ, ಅರಕೇರಾ ಮತ್ತಿತರೆ ಗ್ರಾಮಗಳ ಮತಗಟ್ಟೆಗಳ ಬಳಿ ಭಾರೀ ಸಂಖ್ಯೆಯ ಮತದಾರರು ಸಾಲಿನಲ್ಲಿ ನಿಂತಿದ್ದರಿಂದ ಅದೇ ಸಾಲಿನಲ್ಲಿ ವಯೋವೃದ್ಧರು ನಿಲ್ಲಲು ಸಾಧ್ಯವಾಗದ್ದರಿಂದ ಮತಗಟ್ಟೆ ಬಳಿಯ ಮರಗಳ ನೆರಳಿನಲ್ಲಿ ಆಶ್ರಯ ಪಡೆದಿದ್ದು ಕಂಡುಬಂದಿತು.
ಮೊದಲು ಬಹಿಷ್ಕಾರ ನಂತರ ಮತದಾನ: ಕಳೆದ ಕೆಲ ದಿನಗಳಿಂದ ಜಿಲ್ಲೆಯ ವಿವಿಧೆಡೆ ಮೂಲಸೌಲಭ್ಯದ ಕೊರತೆ ಸಮಸ್ಯೆ ಮುಂದಿರಿಸಿಕೊಂಡು ಮತದಾನದ ಬಹಿಷ್ಕಾರಕ್ಕೆ ಮುಂದಾಗಿದ್ದ ಲಿಂಗಸ್ಗೂರು ತಾಲೂಕಿನ ಪೂಲಭಾವಿ, ಯರದಿಹಾಳ, ಅಂಕನಾಳ, ಉಪ್ಪನಾಳ, ಅನ್ವರಿ ಗ್ರಾಮಗಳಿಗೆ ಅಧಿಕಾರಿಗಳು ತೆರಳಿ ಮತದಾರರ ಮನವೊಲಿಸುವ ಕಾರ್ಯ ಮಾಡಿ ಸೋತಿದ್ದರು. ಹಾಗಾಗಿ ಗುರುವಾರ ಬೆಳಗ್ಗೆ ಈ ಗ್ರಾಮಗಳ ಮತದಾರರು ಮತಗಟ್ಟೆಗಳಿಂದ ದೂರವೇ ಉಳಿದರು.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಸಹಾಯಕ ಆಯುಕ್ತ ಟಿ. ಯೋಗೇಶ್ ಮತ್ತಿತರ ಅಧಿಕಾರಿಗಳು
ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ ಮತದಾನಕ್ಕೆ ಮನವೊಲಿಸಿದರು. ಆದರೆ ಆ ಹೊತ್ತಿಗೆ ಎರಡು ಗಂಟೆ ತಡವಾಗಿತ್ತು. ಮತದಾನ ನಂತರದಲ್ಲಿ ನಡೆಯಿತು.
ಅದೇ ರೀತಿ ಸಿಂಧನೂರು ತಾಲೂಕಿನ ಅಮರಾಪುರ, ತುರ್ವಿಹಾಳ ಗ್ರಾಮದ ವಾರ್ಡು ಸಂಖ್ಯೆ 6ರ ಮತಗಟ್ಟೆ, ಹಿರೇಬೇರ್ಗಿ, ಆರ್.ಎಚ್.ಕ್ಯಾಂಪ್ 3ರಲ್ಲಿ ಮತದಾನ ಬಹಿಷ್ಕರಿಸಲಾಗಿತ್ತು. ಆದರೆ ಅಧಿಕಾರಿಗಳು ಮತಗಟ್ಟೆಗಳಿಗೆ ತೆರಳಿ ಮತದಾರರ ಮನವೊಲಿಸಿ ಮತದಾನ ನಡೆಯುವಂತೆ ಮಾಡಿದರು.
ಪೆಂಡಾಲ್ ತೆರವು: ಮಾನವಿ ತಾಲೂಕಿನ ಹಿರೇಕೊಟ್ನೆಕಲ್ ಗ್ರಾಮದಲ್ಲಿ ಮತಗಟ್ಟೆಯ ಬಳಿಯ ನಿಷೇಧಿತ ಪ್ರದೇಶದಲ್ಲಿಯೇ ಮತದಾರರಿಗೆ ಮತಚೀಟಿ ನೀಡಲು ಪಕ್ಷವೊಂದರ ಕಾರ್ಯಕರ್ತರು ಪೆಂಡಾಲ್ ಅಳವಡಿಸಿದ್ದರಿಂದ ಪೊಲೀಸರು ಸ್ಥಳಕ್ಕೆ ಧಾವಿಸಿ ಅದನ್ನು ತೆರವುಗೊಳಿಸಿದರು.
ಎರಡು ಕಡೆ ಹೆಸರು: ಲಿಂಗಸ್ಗೂರು ತಾಲೂಕಿನ ಯರಜಂತಿ ಮತ್ತು ದೇವದುರ್ಗ ತಾಲೂಕಿನ ಬುಂಕಲದೊಡ್ಡಿ ಗ್ರಾಮದ ಮತದಾರರ ಪಟ್ಟಿಯಲ್ಲಿ ಎರಡೂ ಕಡೆ ಸುಮಾರು 180 ಜನ ಮತದಾರರ ಹೆಸರು ಕಂಡುಬಂದ ಹಿನ್ನೆಲೆಯಲ್ಲಿ ಮೊದಲಿಗೆ ಮತದಾನಕ್ಕೆ ಅವಕಾಶ ನಿರಾಕರಿಸಲಾಯಿತು. ಆದರೆ ಆನಂತರ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಿ ಯರಜಂತಿಯಲ್ಲಿಯೇ ಮತದಾನಕ್ಕೆ ಅವಕಾಶ ಕಲ್ಪಿಸಿಕೊಟ್ಟರು.
ಪೊಲೀಸ್ ಕಾವಲು: ಮತದಾನದ ವೇಳೆ ಅಹಿತಕರ ಘಟನೆ ನಡೆಯದಂತೆ ತಡೆಯಲು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ವಿವಿಧೆಡೆಯಿಂದ ಆಗಮಿಸಿದ್ದ 2 ಸಾವಿರಕ್ಕೂ ಹೆಚ್ಚಿನ ಪೊಲೀಸ್ ಸಿಬ್ಬಂದಿ, ಅರೆಸೇನಾ ಪಡೆ ತುಕಡಿಗಳು, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಭದ್ರತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement