ಮತಯಂತ್ರದಲ್ಲಿ ಅಭ್ಯರ್ಥಿ ಫೋಟೋನೇ ಇಲ್ವಲ್ಲ...!
ರಾಯಚೂರು: ಮತದಾನದ ವೇಳೆ ಮತದಾರರು ತಮ್ಮ ಚಿಹ್ನೆ ಗುರುತಿಸಿ ಅನುಕೂಲವಾಗಲೆಂದು ಅಭ್ಯರ್ಥಿಗಳು ಮತಪತ್ರದಲ್ಲಿ ತಮ್ಮ ಭಾವಚಿತ್ರ ಮುದ್ರಿಸಿ ಹಂಚಿದ್ದು, ಪ್ರಸಕ್ತ ಚುನಾವಣೆಯಲ್ಲಿ ಮತದಾರರಲ್ಲಿ ಗೊಂದಲಕ್ಕೆ ದಾರಿ ಮಾಡಿದ ಪ್ರಸಂಗ ಗುರುವಾರ ನಡೆದಿದೆ.
ದೇವದುರ್ಗ ತಾಲೂಕಿನ ಅರಕೇರಾ ಮತ್ತಿತರೆಡೆ ಇಂಥ ಪ್ರಸಂಗ ನಡೆದಿದ್ದು, ಮತಗಟ್ಟೆಗೆ ಮತದಾನಕ್ಕೆಂದು ಆಗಮಿಸಿದ ಅನೇಕರು ಮತಯಂತ್ರದಲ್ಲಿ ಕೇವಲ ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆ ಕಂಡು ಗಲಿಬಿಲಿಗೊಂಡಿದ್ದಾರೆ. ಅಭ್ಯರ್ಥಿಯ ಹೆಸರಿನ ಮುಂದೆ ಭಾವಚಿತ್ರವಿಲ್ಲದ್ದು ಕಂಡು ಗೊಂದಲಕ್ಕೆ ಬಿದ್ದು ಯಾವುದೋ ಪಕ್ಷಕ್ಕೆ ಮತದಾನ ಮಾಡಿ ಹೊರಬರುತ್ತಿದ್ದಂತೆಯೇ ಇನ್ನುಳಿದವರಿಗೆ ಈ ವಿಷಯ ತಿಳಿಸಿದ್ದಾರೆ. ಅದರಿಂದ ಎಚ್ಚೆತ್ತ 20ಕ್ಕೂ ಹೆಚ್ಚಿನ ಮತದಾರರು ಮತಯಂತ್ರದಲ್ಲಿ ಅಭ್ಯರ್ಥಿಗಳ ಭಾವಚಿತ್ರವಿಲ್ಲದಿರುವುದನ್ನು ಅಸಮಾಧಾನದಿಂದ ಹೇಳಿಕೊಳ್ಳುತ್ತ, 'ಮನೆಯಲ್ಲಿ ಒತ್ತಾಯ ಮಾಡುತ್ತಾರಂತ ಬಂದ್ರೆ ಇಲ್ಲಿ ನೋಡಿದ್ರೆ ಕ್ಯಾಂಡೇಟು ಫೋಟೋನೇ ಇಲ್ಲಾ' ಎಂದು ಗೊಣಗುತ್ತಾ ಮತಗಟ್ಟೆಯಿಂದ ಹೊರನಡೆದಿದ್ದು ಕಂಡುಬಂದಿತು.
ಆಗಿದ್ದಿಷ್ಟು: ಅಭ್ಯರ್ಥಿಗಳು ಮತಯಂತ್ರದಲ್ಲಿ ತಮ್ಮ ಹೆಸರು ಎಷ್ಟನೇಯದ್ದು, ಅದರ ಮುಂದಿನ ಚಿಹ್ನೆ ಯಾವುದು ಎಂದು ಗುರುತಿಸಲು ನೆರವಾಗುವಂತೆ ತಮ್ಮ ಹೆಸರಿನ ಮುಂದೆ ಚಿಹ್ನೆ ನಂತರದಲ್ಲಿ ತಮ್ಮ ಭಾವಚಿತ್ರವಿರುವ ಮತಪತ್ರ ಹೋಲುವ ಪ್ರತಿಯನ್ನು ಮತದಾರರ ಮನೆಮನೆಗೆ ತಲುಪಿಸಿ ಮತ ಯಾಚಿಸಿದ್ದರು. ಗ್ರಾಮೀಣ ಭಾಗದ ಮತದಾರರು ಅದೇ ಮಾದರಿಯಲ್ಲಿ ಮತಯಂತ್ರದಲ್ಲಿಯೂ ಮತಪತ್ರ ಇರುವುದೆಂದು ನಂಬಿ ಮತಗಟ್ಟೆಗೆ ಆಗಮಿಸಿದ್ದರಿಂದಲೇ ಗೊಂದಲಕ್ಕೆ ದಾರಿ ಮಾಡಿತ್ತು.