20 ನಿಮಿಷ 20 ಸುದ್ದಿ
ರಾಜ್ಯ ರೈತ ಸಂಘದಿಂದ ಪ್ರತಿಭಟನೆ ನಾಳೆ
ರಾಯಚೂರು: ಜಿಲ್ಲೆಯಲ್ಲಿ ಬಗರ್ಹುಕುಂ ಸಾಗುವಳಿ ಮಾಡುವ ರೈತರಿಗೆ ಹಕ್ಕುಪತ್ರ ನೀಡಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಏ.21ರಂದು ರಾಜ್ಯ ರೈತ ಸಂಘದಿಂದ ಪ್ರತಿಭಟನೆ ಆಯೋಜಿಸಲಾಗಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಜಿಲ್ಲೆಯ ವಿವಿಧೆಡೆ ಬಗರ್ಹುಕುಂ ಸಾಗುವಳಿದಾರರಿಗೆ ಸರ್ಕಾರ ಹಕ್ಕುಪತ್ರ ನೀಡಬೇಕು. ಈಚೆಗೆ ಸುರಿದ ಧಾರಾಕಾರ ಆಲಿಕಲ್ಲು ಮಳೆಗೆ ಬೆಳೆ ಹಾನಿ ಅನುಭವಿಸಿರುವ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಬೇಕೆಂದು ಹೋರಾಟದ ಮೂಲಕ ಒತ್ತಾಯಿಸಲಾಗುತ್ತದೆಂದು ತಿಳಿಸಿದ್ದಾರೆ. ಸಿಡಿಲು ಬಡಿದು ಸಾವಿಗೀಡಾದವರ ಕುಟುಂಬದವರಿಗೆ ಪರಿಹಾರ ನೀಡಬೇಕು. ಜಾನುವಾರು ಹಾನಿಗೆ ಜಿಲ್ಲಾಡಳಿತ ಕೂಡಲೇ ಪರಿಹಾರ ನೀಡಬೇಕು. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ನೀಡಬೇಕೆಂದು ಆಗ್ರಹಿಸಲಾಗುತ್ತದೆ ಎಂದು ತಿಳಿಸಿದ್ದು, ಏ.21ರಂದು ಬೆ.11ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಚಿಹ್ನೆ ಗಾತ್ರಕ್ಕೆ ಆಕ್ಷೇಪ; ಹೋರಾಟದ ಎಚ್ಚರಿಕೆ
ರಾಯಚೂರು: ಲೋಕಸಭೆ ಚುನಾವಣೆಯ ಮತಯಂತ್ರದಲ್ಲಿ ಅಳವಡಿಸಿದ್ದ ಮತಪತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಹೊರತುಪಡಿಸಿ ಇನ್ನುಳಿದ ಪಕ್ಷಗಳ ಚಿಹ್ನೆಗಳ ಗಾತ್ರ ತೀರಾ ಚಿಕ್ಕದಾಗಿದ್ದರಿಂದ ಮತದಾರರು ಮತದಾನ ಮಾಡಲು ಪ್ರಯಾಸಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ ಲೋಕಸತ್ತಾ ಪಾರ್ಟಿಯ ಅಧ್ಯಕ್ಷ ರಾಮಣ್ಣ ಆರ್ಎಚ್ಜೆ ಎಚ್ಚರಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಚುನಾವಣೆಯಲ್ಲಿ ಬಳಸಿದ ಮತಪತ್ರದಲ್ಲಿ ಚಿಹ್ನೆಗಳು ಮಸುಕು ಮಸುಕಾಗಿ ಮುದ್ರಿಸಲಾಗಿತ್ತು. ಅಷ್ಟೇ ಅಲ್ಲ, ಚಿಹ್ನೆಯ ಗಾತ್ರವೂ ತೀರಾ ಚಿಕ್ಕದಾಗಿತ್ತು. ಅದರಿಂದ ವಯೋವೃದ್ಧರು ಮತದಾನ ಮಾಡಲು ತೊಂದರೆ ಎದುರಿಸಿದ್ದಾರೆಂದು ದೂರಿದ್ದಾರೆ. ಈ ಕುರಿತು ಶೀಘ್ರವೇ ಲೋಕಸತ್ತಾ ಪಾರ್ಟಿ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿ ಚರ್ಚಿಸಿ ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಚುನಾವಣೆ ಆಯೋಗ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಮತ ಎಣಿಕೆ ಕಾರ್ಯ ಸ್ಥಗಿತಗೊಳಿಸುವಂತೆ ಹೈಕೋರ್ಟ್ ಮೊರೆ ಹೋಗುವುದಾಗಿಯೂ ಅವರು ಎಚ್ಚರಿಸಿದ್ದಾರೆ.
ಮದ್ಯದ ಅಂಗಡಿ ಮುಚ್ಚಲು ಒತ್ತಾಯಿಸಿ ಮನವಿ
ರಾಯಚೂರು: ನಗರದ ಶೆಟ್ಟಿಭಾವಿ ವೃತ್ತದಲ್ಲಿರುವ ಲಕ್ಷ್ಮಿ ಬಾರ್ಶಾಪ್ ಮುಚ್ಚಿಸುವಂತೆ ನೇತಾಜಿ ನಗರ ಸಾರ್ವಜನಿಕ ಸಮಸ್ಯೆಗಳ ಪರಿಹಾರ ಹೋರಾಟ ಸಮಿತಿ ಒತ್ತಾಯಿಸಿದೆ. ಈ ಕುರಿತು ಇತ್ತೀಚೆಗೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿರುವ ಸಮಿತಿಯ ಪ್ರಮುಖರು, ಶೆಟ್ಟಿಭಾವಿ ಚೌಕಿನಲ್ಲಿ ವೀರಭದ್ರೇಶ್ವರ ದೇವಸ್ಥಾನ ಹಾಗೂ ಮುಸ್ಲಿಂ ಸಮಾಜದ ಧಾರ್ಮಿಕ ಕೇಂದ್ರದ ಬಳಿಯೇ ಲಕ್ಷ್ಮೀ ಬಾರ್ ಆರಂಭಿಸಿದ್ದು ಅದರಿಂದ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳಿಗೆ ತೊಂದರೆಯಾಗಿದೆ. ಮದ್ಯದ ಮಾರಾಟ ಮಳಿಗೆಯಿಂದ ಕೇವಲ 40ರಿಂದ 50 ಅಡಿ ದೂರದಲ್ಲಿಯೇ ಪ್ರಾರ್ಥನಾ ಮಂದಿರಗಳಿವೆ. ಮದ್ಯ ವ್ಯಸನಿಗಳು ದಾರಿಹೋಕರಿಗೆ ಕಿರುಕುಳ ನೀಡುತ್ತಿದ್ದು, ಮಹಿಳೆಯರು ಈ ಮಾರ್ಗದಲ್ಲಿ ಸಂಚರಿಸದಂಥ ಸ್ಥಿತಿಯಿದೆ ಎಂದು ಆರೋಪಿಸಿದ್ದಾರೆ. ಈಗಾಗಲೇ ನೇತಾಜಿ ನಗರ ನಿವಾಸಿಗಳು ಏ.3ರಂದು ಬೃಹತ್ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದರೂ ಬಾರ್ ಮುಚ್ಚುವ ನಿಟ್ಟಿನಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದೆ ಎಂದು ದೂರಿ, ಕಾರಣ ಕೂಡಲೇ ಮದ್ಯದ ಅಂಗಡಿ ಮುಚ್ಚಲು ಕ್ರಮ ಕೈಗೊಳ್ಳುವಂತೆ ಸಮಿತಿಯ ಅಧ್ಯಕ್ಷ ಎಂ.ಕೆ.ಬಾಬರ್ ಒತ್ತಾಯಿಸಿದ್ದಾರೆ.
'ಭೂ ಸಂರಕ್ಷಣೆ ಮಾಡದಿದ್ರೆ ಜೀವಸಂಕುಲ ನಾಶ ತಪ್ಪಿದ್ದಲ್ಲ'
ರಾಯಚೂರು: ಭೂಮಿಯ ಮೇಲೆ ಆಮ್ಲಜನಕಕ್ಕಾಗಿ ಪರಿಸರ ಸಂರಕ್ಷಣೆ ಅವಶ್ಯಕ. ಭೂಮಿಯ ಉಳಿವಿಗೆ ಹೋರಾಟ ಮಾಡದಿದ್ದರೆ ಮುಂದೊಂದು ದಿನ ಜೀವರಾಶಿಯೇ ನಾಶವಾಗುವ ಸಾಧ್ಯತೆಯಿದೆ ಎಂದು ಕ್ಯಾಷುಟೆಕ್ ಸಂಸ್ಥೆಯ ತರಬೇತಿ ಸಂಯೋಜಕ ಜಾಬಶೆಟ್ಟಿ ಎಚ್ಚರಿಸಿದರು. ಜಿಲ್ಲಾಡಳಿತ, ಜಿಪಂ, ಕ್ಯಾಷುಟೆಕ್ ಸಂಸ್ಥೆ ಸೇರಿದಂತೆ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ನಗರದ ನವೋದಯ ಶಿಕ್ಷಣ ಸಂಸ್ಥೆಯ ಬಿಎಡ್ ಕಾಲೇಜಿನಲ್ಲಿ ವಿಶ್ವಭೂಮಿ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತ ಜ್ಞಾನ ವಿಜ್ಞಾನ ಸಮಿತಿಯ ಸಂಚಾಲಕ ಸೈಯದ್ ಹಫೀಜುಲ್ಲಾ ಮಾತನಾಡಿ, ಭೂಮಿಯ ಮಹತ್ವ ಮತ್ತು ಅದರಿಂದಾಗುವ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವಭೂಮಿ ದಿನಾಚರಣೆ ಆಯೋಜಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಪ್ರಾಣೇಶ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ರಾಜಾಶಂಕರ್, ಚಂದ್ರಕಾಂತ ಹಾಗೂ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಆಶ್ರಯ ಮನೆ: ಹಕ್ಕುಪತ್ರ ನೀಡಿಕೆಗೆ ಆಗ್ರಹ
ರಾಯಚೂರು: 2002ರಲ್ಲಿ ಪರಿಶಿಷ್ಟ ಜಾತಿಯ ಮಾದಿಗ ಜನಾಂಗದವರಿಗೆ ಆಶ್ರಯ ಕಾಲನಿಯಲ್ಲಿ ಮನೆ ನಿರ್ಮಿಸಿದ್ದರೂ ರಾಜಕೀಯ ಕುತಂತ್ರದಿಂದ ಹಕ್ಕು ಪತ್ರ ನೀಡದಿರುವುದನ್ನು ಮಾದಿಗ ದಂಡೋರಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ಆರೋಪಿಸಿದೆ. ಈ ಕುರಿತು ಇತ್ತೀಚೆಗೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿರುವ ಸಂಘಟನೆಯವರು, ಸರ್ಕಾರದಿಂದ ಆಶ್ರಯ ಕಾಲನಿಯಲ್ಲಿ ವಿವಿಧೆಡೆ ಮಾದಿಗ ಜನಾಂಗದವರಿಗೆ ಮನೆಗಳನ್ನು ನಿರ್ಮಿಸಿದ್ದು ಅವರಿಗೆ ರಾಜಕೀಯ ಕುತಂತ್ರದಿಂದಾಗಿ 12 ವರ್ಷಗಳೇ ಕಳೆದರೂ ಹಕ್ಕುಪತ್ರ ನೀಡಿಲ್ಲ ಎಂದು ದೂರಿದ್ದಾರೆ. ದೇವನಪಲ್ಲಿಯ ಬಡ ಕೂಲಿಕಾರ್ಮಿಕರಿಗೆ ಉದ್ಯೋಗ ಖಾತ್ರಿ ಕೆಲಸ ನೀಡಿಲ್ಲ. ಆಶ್ರಯ ಕಾಲನಿಯಲ್ಲಿ ಕುಡಿವ ನೀರಿನ ಸಮಸ್ಯೆಯಿದ್ದರೂ ಪರಿಹರಿಸಿಲ್ಲ. ದಲಿತರ ಕಾಲನಿಗೆ ಸಂಪರ್ಕ ರಸ್ತೆಗೆ ಅಡ್ಡಲಾಗಿ ಸರ್ವಣೀಯರೊಬ್ಬರು ಮನೆ ಕಟ್ಟಿಕೊಂಡಿದ್ದು ಕೂಡಲೇ ಆ ಮನೆಯನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಸಂದರ್ಭ ಸಂಘಟನೆಯ ಜಿಲ್ಲಾಧ್ಯಕ್ಷ ನರಸಪ್ಪ ದಂಡೋರಾ, ಪ್ರಭುರಾಜ್ ಮರ್ಚಟ್ಹಾಳ್, ವಿಜಯರಾಣಿ ಸಿರವಾರ, ನರಸಿಂಹಲು ಮರ್ಚಟ್ಹಾಳ್, ಆನಂದ ಏಗನೂರು, ರಾಜಲಬಂಡಾ ಈರಪ್ಪ ಸೇರಿದಂತೆ ಅನೇಕರಿದ್ದರು.
'ಯಾಂತ್ರಿಕ ಬದುಕಿಗೆ ವೇದಾಧ್ಯಯನ ಅಗತ್ಯ'
ರಾಯಚೂರು: ನಗರದಲ್ಲಿ ಈಚೆಗೆ ಮಹಾನಂದೀಶ್ವರ ದೇವಸ್ಥಾನದಲ್ಲಿ ಪಂಚಾಚಾರ್ಯ ಯುವ ಸೇವಾ ಸಮಿತಿ ವತಿಯಿಂದ ವೇದಾಧ್ಯಯನ ಶಿಬಿರ ಆಯೋಜಿಸಲಾಗಿತ್ತು. ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ನಗರದ ಸಾವಿರ ದೇವರ ಸಂಸ್ಥಾನ ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯರು, ವೇದಗಳ ಅಧ್ಯಯನದ ಮೂಲಕ ಅವುಗಳ ಸಾರವನ್ನು ಬದುಕಿನಲ್ಲಿ ರೂಢಿಸಿಕೊಂಡು ಮುನ್ನಡೆಯುವುದು ಅವಶ್ಯಕ. ಸ್ತ್ರೀ-ಪುರುಷ ಭೇದ ಭಾವ ಇಲ್ಲದೆ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದ ಹಾಗೂ ಸ್ಮೃತಿ ಇತಿಹಾಸಗಳ ಅಧ್ಯಯನ ಮಾಡಿದಾಗ, ನಿತ್ಯ ಜೀವನದ ಯಾಂತ್ರಿಕ ಬದುಕಿಗೆ ಸ್ವಲ್ಪವಾದರೂ ಸುಖ-ಶಾಂತಿ-ಸಮೃದ್ಧಿ ಹಾಗೂ ಆತ್ಮಾನುಭೂತಿ ಆನಂದ ಪ್ರಾಪ್ತಿಯಾಗಲು ಸಾಧ್ಯ ಎಂದರು. ಹಿರೇಮಠದ ಅಭಿನವ ರಾಚೋಟಿ ವೀರ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಾನಂದೀಶ್ವರ ದೇವಸ್ಥಾನದ ಪಂಡಿತೋತ್ತಮರಾದ ಬಾಲಾಜಿ ಮಲ್ಕಾರಿಯವರು ವೇದಶಿಬಿರ ಕಾರ್ಯಕ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎ.ಎಸ್. ಪಾಟೀಲ್, ಸಿದ್ದನಗೌಡ ಮನ್ಸಲಾಪೂರು, ದೇವಸ್ಥಾನದ ಸಮಸ್ತ ಅರ್ಚಕರು ಇದ್ದರು.
ಹಲವೆಡೆ ವಿದ್ಯುತ್ ವ್ಯತ್ಯಯ
ರಾಯಚೂರು: ತಾಲೂಕಿನ ಮಟಮಾರಿಯ ನೂತನ 110 ಕೆವಿ ವಿದ್ಯುತ್ ಮಾರ್ಗದಲ್ಲಿ ಕಾಮಗಾರಿ ನಿರ್ವಹಿಸುವ ಹಿನ್ನೆಲೆ ಏ.21 ರಂದು ತಾಲೂಕಿನ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂ ತಿಳಿಸಿದೆ. ಅಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ತಾಲೂಕಿನ ವಡವಟ್ಟಿ, ಮಲಿಯಾಬಾದ್, ಮಟಮಾರಿ, ಗಿಲ್ಲೆಸ್ಗೂರು, ಯರಗೇರಾ, ಕಲ್ಮಲಾ, ಯಾಪಲದಿನ್ನಿ ಹಾಗೂ ಸುತ್ತಮುತ್ತಲಿನ ಪ್ರದೇಶ ಹಾಗೂ ದೇವದುರ್ಗ ತಾಲೂಕಿನ ಆಲ್ಕೋಡ ಹಾಗೂ ಸುತ್ತಮುತ್ತಲಿನ ಪ್ರದೇಶ, ಮಾನವಿ ತಾಲೂಕಿನ ಸಿರವಾರ, ಬ್ಯಾಗವಾಟ್ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ ಎಂದು ತಿಳಿಸಿದೆ. ಏ.21ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 3ರವರೆಗೆ ನಗರದ ಗಂಜ್ ವೃತ್ತ, ಗೋಶಾಲ ರಸ್ತೆ, ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ, ಚಂದ್ರಮೌಳೇಶ್ವರ ವೃತ್ತ, ತೀನ್ ಕಂದೀಲ್, ಅರಬ್ ಮೊಹಲ್ಲಾ, ಅಂದ್ರೂನ್ ಖಿಲ್ಲಾ, ಮಡ್ಡಿಪೇಟೆ, ಮಂಗಳವಾರ ಪೇಟೆ, ಸತ್ಯನಾಥ ಕಾಲನಿ, ಅಮರಖೇಡ್ ಲೇಔಟ್, ಮಾಣಿಕ್ ನಗರ, ನವೋದಯ ಆಸ್ಪತ್ರೆ, ನಿಜಲಿಂಗಪ್ಪ ಕಾಲನಿ, ವೆಂಕಟೇಶ್ವರ ಕಾಲನಿ, ಬಸವೇಶ್ವರ ಕಾಲನಿ, ಐಡಿಎಸ್ ಎಂಟಿ ಲೇಔಟ್ ಸೇರಿ ಅಸ್ಕಿಹಾಳ, ಯಕ್ಲಾಸಪುರ, ರಾಂಪೂರ, ಹೊಸೂರು ಹಾಗೂ ಸುತ್ತ ಮುತ್ತ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂ ಮಾಡಿದೆ.
ಭೂ, ಜಲ ಸಂರಕ್ಷಣೆ ಮಾಡದಿದ್ರೆ ಕಂಟಕ: ಜಾಬಶೆಟ್ಟಿ
ರಾಯಚೂರು: ನಗರದ ಸೇಂಟ್ ಥಾಮಸ್ ಪದವಿ ಮಹಾವಿದ್ಯಾಲಯದಲ್ಲಿ ಈಚೆಗೆ ಭಾರತ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ವಿಶ್ವಭೂಮಿ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಷಣಕಾರ ಬಾಲಚಂದ್ರ ಜಾಬಶೆಟ್ಟಿ, ಭೂಮಿ ಮತ್ತು ಜಲಸಂರಕ್ಷಣೆಗೆ ಎಲ್ಲರೂ ಹೆಚ್ಚಿನ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ತೋರುವ ನಿರ್ಲಕ್ಷ್ಯ ಮುಂದಿನ ಪೀಳಿಗೆಗೆ ಮಾರಕವಾಗಿ ಪರಿಣಮಿಸಲಿದೆ ಎಂದು ಎಚ್ಚರಿಸಿದರು. ಭಾರತ ಜ್ಞಾನ ವಿಜ್ಞಾನ ಸಮಿತಿ ಸಂಚಾಲಕ ಸೈಯದ್ ಹಫೀಜುಲ್ಲಾ ಮಾತನಾಡಿ, ಪರಿಸರ ಸಂರಕ್ಷಣೆ ಎಲ್ಲರ ಹೊಣೆಯಾಗಿದೆ ಎಂದು ಹೇಳಿದರು. ಸೇಂಟ್ ಥಾಮಸ್ ಪದವಿ ಕಾಲೇಜಿನ ಕಾರ್ಯದರ್ಶಿ ಥಾಮಸ್ ಬೆಂಜಾಮಿನ್, ನಗರಗಳಲ್ಲಿ ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಯುವಕರು ಮಹತ್ವದ ಪಾತ್ರವಹಿಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ದೇವದಾಸ್ ಹೊಸೂರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ವರ್ಗ ಮತ್ತು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ರಾಮಲಿಂಗೇಶ್ವರ ಅದ್ಧೂರಿ ಜಾತ್ರಾ ಮಹೋತ್ಸವ
ರಾಯಚೂರು: ನಗರದ ಸ್ಟೇಷನ್ ಏರಿಯಾದಲ್ಲಿರುವ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು. ವೀರಶೈವ ಸಮಾಜದ ವತಿಯಿಂದ ನಡೆದ ಜಾತ್ರಾ ಮಹೋತ್ಸವವನ್ನು ಕಿಲ್ಲೆ ಬ್ರಹನ್ಮಠದ ಶ್ರೀಶಾಂತಮಲ್ಲ ಶಿವಾಚಾರ್ಯರು ಹಾಗೂ ಸದಾನಂದ ಶ್ರೀಗಳವರ ಸಾನ್ನಿಧ್ಯದಲ್ಲಿ ವಿಜೃಂಭಣೆಯಿಂದ ನಡೆಸಲಾಯಿತು. ಡಾ. ಎಸ್.ಬಿ. ಅಮರಖೇಡ್, ಗಿರಿಜಾ ಶಂಕರ್, ಹರವಿ ನಾಗನಗೌಡ, ಸಕ್ರಿ ಬಸವರಾಜ್, ಷಣ್ಮುಖಪ್ಪ ವೆಂಕಟಾಪುರ, ರಾಜೇಂದ್ರ ಪಾಟೀಲ್ ರೇವೂರ, ಮಲ್ಲಿಕಾರ್ಜುನ ಧೋತರಬಂಡಿ ಅನೇಕರಿದ್ದರು.
ಸಿಂಧನೂರು: ಭದ್ರತೆ ಇಲ್ಲದ ಎಟಿಎಂ ಕೇಂದ್ರಗಳು
ಸಿಂಧನೂರು: ನಗರದಲ್ಲಿರುವ ವಿವಿಧ ಬ್ಯಾಂಕುಗಳ ಬಹುತೇಕ ಎಟಿಎಂಗಳು ಗ್ರಾಹಕರಿಗೆ ಸುರಕ್ಷತೆಯನ್ನು ಒದಗಿಸುತ್ತಿಲ್ಲದಿರುವುದು ಎಲ್ಲೆಡೆ ಕುಂಡುಬರುತ್ತಿದೆ. ಕುಷ್ಟಗಿ ರಸ್ತೆಯಲ್ಲಿರುವ ಐಸಿಐಸಿಐ ಹಾಗೂ ಸಿಂಡಿಕೇಟ್ ಬ್ಯಾಂಕಿನ ಎಟಿಎಂ ಸೇರಿ ಅನೇಕ ಕಡೆಗಳಲ್ಲಿ ಭದ್ರತೆಗಳಿಲ್ಲದೆ ಎಟಿಎಂನ ಒಳಹೋಗಲು ಗ್ರಾಹಕರು ಭಯಪಡುತ್ತಿದ್ದಾರೆ. ರಾಜ್ಯದ ಕೆಲ ಎಟಿಎಂಗಳಲ್ಲಿ ಗ್ರಾಹಕರ ಮೇಲೆ ಹಣದ ಆಸೆಗಾಗಿ ಕಳ್ಳರು ದಾಳಿ ನಡೆಸಿದ ಘಟನೆಗಳಿವೆ. ಸರ್ಕಾರವು ಪ್ರತಿಯೊಂದು ಎಟಿಎಂ ಕೇಂದ್ರಗಳಲ್ಲೂ 24 ಗಂಟೆ ಸಿಸಿ ಟಿವಿ, ಭದ್ರತಾ ಸಿಬ್ಬಂದಿ ಇರಬೇಕೆಂದು ಆದೇಶ ಹೊರಡಿಸಿದೆ. ಆದರೆ ಇಲ್ಲಿನ ಕೆಲ ಸಿಬ್ಬಂದಿ ರಾತ್ರಿ 11 ಗಂಟೆಗೆ ನಿದ್ರೆಗೆ ಜಾರುತ್ತಿದ್ದಾರೆ. ಎಟಿಎಂ ಅಂದ್ರೆ 'ಎನಿ ಟೈಮ್ ಮರ್ಡರ್' ಎನ್ನುವಂತಾಗುವ ಮುನ್ನ ಹಣ ನೀಡುವ ಕೇಂದ್ರವಾಗುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಿ ಎಟಿಎಂಗಳಿಗೆ ಭದ್ರತೆ ನೀಡುತ್ತಾ ಗ್ರಾಹಕರ ಜೀವಕ್ಕೂ ಭದ್ರತೆ ಒದಗಿಸಬೇಕೆನ್ನುವುದು ಪ್ರಜ್ಞಾವಂತ ನಾಗರಿಕರ ಆಶಯವಾಗಿದೆ.
ಕ್ರೀಡೆಯಿಂದ ಆರೋಗ್ಯ ಭಾಗ್ಯ: ಬೋರ್
ಸಿಂಧನೂರು: ಪ್ರತಿಯೊಬ್ಬ ಕ್ರೀಡಾಪಟು ಯಾವುದೇ ದುಶ್ಚಟ ಕಲಿಯದೇ ಕ್ರೀಡೆಗೆ ಹೆಚ್ಚಿನ ಆಸಕ್ತಿ ವಹಿಸಿದರೆ ಆರೋಗ್ಯವಂತರಾಗಲು ಸಾಧ್ಯವಾಗುತ್ತದೆ ಎಂದು ಕೆಎಸ್ಸಿಎ. ವ್ಯವಸ್ಥಾಪಕ ಸುಜೀತ್ ಬೋರ್ ಹೇಳಿದರು. ತಾಲೂಕಿನ ಹೊಸಳ್ಳಿ(ಇಜೆ) ಕ್ರಾಸ್ನಲ್ಲಿರುವ ವಿಕಾಸ ಶಾಲೆ ಮೈದಾನದಲ್ಲಿ ರುದ್ರಗೌಡ ಕ್ರಿಕೆಟ್ ಕ್ಲಬ್ ಹಾಗೂ ವಿಕಾಸ ಶಾಲೆ ಸಂಯುಕ್ತಾಶ್ರಯದಲ್ಲಿ ಕೆಎಸ್ಸಿಎ ರಾಯಚೂರು ವಲಯ ಕ್ರಿಕೆಟ್ ಕ್ರೀಡಾಪಟು ತಂಡಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅವರು ಮಾತನಾಡಿದರು. ಸಿಂಧನೂರು ಹೊರವಲಯದಲ್ಲಿ ವಿಕಾಸ ಶಾಲೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ರಾಯಚೂರು ವಿಭಾಗದಿಂದ 14 ವರ್ಷದೊಳಗಿನ ಮಕ್ಕಳನ್ನು ಕ್ರಿಕೆಟ್ ತಂಡಕ್ಕೆ ಆಯ್ಕೆ ಪ್ರಕ್ರಿಯೆ ನಡೆದಿದೆ. ಪ್ರತಿ ತಂಡಕ್ಕೆ 15 ಜನರನ್ನು ಆಯ್ಕೆ ಮಾಡಲಾಗುತ್ತಿದ್ದು, 16 ಮತ್ತು 19 ವರ್ಷ ಮೇಲ್ಪಟ್ಟ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯಲಿದೆ ತಿಳಿಸಿದರು. ಕ್ರೀಡಾಪಟು ಚಂದ್ರಶೇಖರ ಮೈಲಾರ ಮಾತನಾಡಿ. ಬೇಸಿಗೆಯಲ್ಲಿ ಉಚಿತ ಕ್ರಿಕೆಟ್ ಶಿಬಿರ ನಡೆಸುತ್ತಿರುವುದರಿಂದ ರಾಯಚೂರು ವಿಭಾಗದ ಕ್ರೀಡಾಪಟುಗಳ ಆಯ್ಕೆಯನ್ನು ನಗರದಲ್ಲೇ ಮಾಡಲಾಗುತ್ತಿದೆ. ಏ.23ರಂದು ಕ್ರಿಕೆಟ್ ಪಂದ್ಯ ನಡೆಯಲಿದೆ ಎಂದು ತಿಳಿಸಿದರು.
'ವಿಭಿನ್ನ ಚಿಂತನೆ, ಕ್ರಿಯಾಶೀಲನೆ ಬೆಳೆಸಿಕೊಳ್ಳಿ'
ಸಿಂಧನೂರು: ಇಂದು ನಾವು ಸ್ಪರ್ಧಾತ್ಮಕ ಯುಗದಲ್ಲಿ ಬೆಳೆಯುತ್ತಿರುವುದರಿಂದ ಅದರೊಂದಿಗೆ ಪೈಪೋಟಿ ಎದುರಿಸುವುದು ಅನಿವಾರ್ಯ. ವಿಭಿನ್ನ ಚಿಂತನೆ, ಕ್ರಿಯಾಶೀಲತೆ, ಸೃಜನಾತ್ಮಕತೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕೆಂದು ವಿಸ್ಡಮ್ ಸಂಸ್ಥೆಯ ಅಧ್ಯಕ್ಷ ಸಿ.ಕೆ. ರಾಜಣ್ಣ ಹೇಳಿದರು. ನಗರದ ವಿಸ್ಡಮ್ ಪದವಿ ಕಾಲೇಜಿನಲ್ಲಿ ನಕ್ಷತ್ರ- 214 ಹೆಸರಿನ ಮ್ಯಾನೇಜ್ಮೆಂಟ್ ಫೆಸ್ಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಕ್ರೀಯಾಶೀಲತೆಯನ್ನು ವೃದ್ಧಿಸುವಲ್ಲಿ ಇಂತಹ ಮ್ಯಾನೇಜ್ಮೆಂಟ್ ಫೆಸ್ಟ್ಗಳು ಅವುಗಳನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುವುದರಲ್ಲಿ ನೆರವಾಗುತ್ತವೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಅದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಸಂಸ್ಥೆಯ ಖಜಾಂಚಿ ಎಸ್.ಎ. ಖಾದ್ರಿ ಪ್ರಾಸ್ತಾವಿಕವಾಗಿ ಮಾತನಾಡಿದದರು. ಸಂಸ್ಥೆಯ ಉಪಾಧ್ಯಕ್ಷ ಶರಣಪ್ಪ ಪಾಟೀಲ್, ಕಾರ್ಯದರ್ಶಿ ಆರ್.ಸಿ. ಜಯಪ್ರಕಾಶ, ಪ್ರಾಂಶುಪಾಲ ಅನಿಲಕುಮಾರ ಆರ್. ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಮನೋರಂಜನೆಗಾಗಿ ಕಲಾ ಚಟುವಟಿಕೆಗಳನ್ನು ನಡೆಸಲಾಯಿತು.