ಉನ್ನತ ಸ್ಥಾನ ತಲುಪಲು ಉದ್ಯೋಗ ಮೇಳ ಸಹಕಾರಿ: ಶಾಸಕ
ಕ.ಪ್ರ. ವಾರ್ತೆ ್ಣ ರಾಯಚೂರು ್ಣ ಏ.19
ಶೈಕ್ಷಣಿಕ ಬದುಕಿನಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಜೀವನದಲ್ಲಿ ಉನ್ನತ ಸ್ಥಾನ ತಲುಪುವ ನಿಟ್ಟಿನಲ್ಲಿ ಉದ್ಯೋಗ ಮೇಳಗಳು ಸಹಕಾರಿ ಎಂದು ಶಾಸಕ ಡಾ. ಶಿವರಾಜ್ ಪಾಟೀಲ್ ಹೇಳಿದರು.
ನಗರದಲ್ಲಿ ಶನಿವಾರ ಆಪ್ಟೈಮ್ ಸರ್ವೀಸಸ್ ಸಂಸ್ಥೆಯು ಇನ್ನಿತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋ ಜಿಸಿದ್ದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ನಗರದಲ್ಲಿ ಉದ್ಯೋಗ ಮೇಳ ಆಯೋಜಿಸುವ ಮೂಲಕ ನಿರುದ್ಯೋಗಿ ಯುವಕ ಯುವತಿಯರಿಗೆ ಅನುಕೂಲ ಕಲ್ಪಿಸಿದ ಸಂಸ್ಥೆಯ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪೂರ್ವಸಿದ್ಧತೆ ಕೊರತೆ: ಹೈ.ಕ. ಭಾಗದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವ ಮೂಲಕ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಮುಂದಾಗಬೇಕು ಎಂದ ಅವರು, ಸಂದರ್ಶನಕ್ಕೆ ಹಾಜರಾಗುವವರು ಪೂರ್ವಸಿದ್ಧತೆಯ ಕೊರತೆಯಿಂದಲೇ ಉನ್ನತ ಹುದ್ದೆಗಳಿಂದ ವಂಚಿತರಾಗುತ್ತಿದ್ದಾರೆಂದು ಎಚ್ಚರಿಸಿದರು.
ಖಾಸಗಿ ಸಂಸ್ಥೆಗಳಲ್ಲಿ..: ವೃತ್ತಿ ಕೌಶಲ್ಯಗಳನ್ನು ಅರಿಯುವ ಮೂಲಕ ಹೆಸರಾಂತ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ. ಹೈ.ಕ. ಭಾಗದ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಹೆಚ್ಚು ಗಮನಹರಿಸಬೇಕಿದೆ. ಶಿಕ್ಷಣದ ನಂತರ ಉದ್ಯೋಗ ಪಡೆಯುವ ಮೂಲಕ ಬದುಕು ಸುಭದ್ರಗೊಳಿಸಿಕೊಳ್ಳಬೇಕು. ಸರ್ಕಾರಿ ನೌಕರಿಗೆ ಕಾಯದೇ ಖಾಸಗಿ ಸಂಸ್ಥೆಗಳಲ್ಲಿ ಉನ್ನತವಾದದ್ದನ್ನು ಸಾಧಿಸಲು ಮುಂದಾಗುವಂತೆ ಕರೆ ನೀಡಿದರು.
ಜ್ಞಾನ ತುಂಬುವ ಕಾರ್ಯ: ಕಾಂಗ್ರೆಸ್ ಯುವಮುಖಂಡ ರವಿ ಬೋಸರಾಜು ಮಾತನಾಡಿ, ಹೈ.ಕ. ಭಾಗದಲ್ಲಿನ ಶಿಕ್ಷಣ ಗುಣಮಟ್ಟದ ಕುಸಿತ ಅನೇಕರಿಗೆ ಉದ್ಯೋಗ ದೊರಕಿಸಿಕೊಳ್ಳಲು ತೊಂದರೆಯಾಗುತ್ತಿದೆ. ಈ ಭಾಗದ ಶಿಕ್ಷಣ ಸಂಸ್ಥೆಗಳು ಮಕ್ಕಳಲ್ಲಿ ವೃತ್ತಿ ಕೌಶಲ್ಯ ಸೇರಿದಂತೆ ಎಲ್ಲ ರೀತಿಯ ಜ್ಞಾನವನ್ನು ತುಂಬುವ ಕಾರ್ಯ ಮಾಡಬೇಕಿದೆ ಎಂದರು.
ಉದ್ಯೋಗ ಮೇಳದ ಉದ್ಘಾಟನೆ ಸಮಾರಂಭದಲ್ಲಿ ಆಪ್ಟೈಮ್ ಸರ್ವೀಸಸ್ ಸಂಸ್ಥೆಯ ಎಂಡಿ ರಾಕೇಶ್ ರಾಜಲಬಂಡಾ, ಪ್ರಮುಖರಾದ ಡಾ. ರಜಾಕ್ ಉಸ್ತಾದ್, ಮೈಲಾಪುರ ಎನ್.ಮೂರ್ತಿ, ಅಮರೇಶ್ ಪಾಟೀಲ್, ಎಸ್ಎಸ್ಎಂ ಕಾಲೇಜಿನ ಪ್ರಾಚಾರ್ಯ ಎಸ್.ಎ. ಮಾಲಿಪಾಟೀಲ್, ಜಂಬುನಾಥ್ ಯಾದವ್ ಸೇರಿದಂತೆ ಅನೇಕರಿದ್ದರು. ಉದ್ಯೋಗ ಮೇಳದಲ್ಲಿ ವಿವಿಧೆಡೆಯಿಂದ ಆಗಮಿಸಿದ್ದ 13 ಕಂಪನಿಗಳು ಪಾಲ್ಗೊಂಡಿದ್ದು, 400ಕ್ಕೂ ಹೆಚ್ಚಿನ ಜನ ಮೇಳದಲ್ಲಿ ಭಾಗವಹಿಸಿದ್ದರು.