ಮರು ಚುನಾವಣೆಗೆ ಆಗ್ರಹಿಸಿ ಪ್ರತಿಭಟನೆ
ಕ.ಪ್ರ. ವಾರ್ತೆ ್ಣ ರಾಯಚೂರು ್ಣ ಏ.19
ಏ.17ರಂದು ನಡೆದ ಲೋಕಸಭೆ ಚುನಾವಣೆಯ ಮತದಾನದ ವೇಳೆ ಬಳಸಿದ ಮತಯಂತ್ರಗಳಲ್ಲಿ ಅಳವಡಿಸಿದ್ದ ಮತಪತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಚಿಹ್ನೆಗಳನ್ನು ದೊಡ್ಡದಾಗಿ ಮುದ್ರಿಸಿ ಇನ್ನುಳಿದ ಪಕ್ಷಗಳ ಚಿಹ್ನೆಗಳನ್ನು ಚಿಕ್ಕದಾಗಿ ಮುದ್ರಿಸಲಾಗಿದೆ. ಈ ತಾರತಮ್ಯ ಖಂಡಿಸಿ ಹಾಗೂ ಮರುಚುನಾವಣೆಗೆ ಆಗ್ರಹಿಸಿ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿ, ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ಅಳವಡಿಸಿರುವ ಚಿಹ್ನೆಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಚಿಹ್ನೆಗಳನ್ನು ಮಾತ್ರ ದೊಡ್ಡದಾಗಿ ಮುದ್ರಿಸಲಾಗಿದೆ ಎಂದು ದೂರಿದರು.
ಪ್ರಭಾವ: ಕಣದಲ್ಲಿದ್ದ ಇನ್ನುಳಿದ 9 ಅಭ್ಯರ್ಥಿಗಳ ಚುನಾವಣಾ ಚಿಹ್ನೆಗಳನ್ನು ಚಿಕ್ಕದಾಗಿ ಮತ್ತು ಮಸುಕಾಗಿ ಅಸ್ಪಷ್ಟವಾಗಿ ಮುದ್ರಿಸಲಾಗಿತ್ತು. ಇದರಿಂದ ಮತದಾರರು ಆ ಎರಡೇ ಪಕ್ಷಗಳ ಅಭ್ಯರ್ಥಿಗಳ ಪರ ಮತ ನೀಡುವಂತೆ ಪ್ರಭಾವ ಬೀರುವ ನಿಟ್ಟಿನಲ್ಲಿ ಕಾರ್ಯ ಮಾಡಲಾಗಿದೆ ಎಂದು ಆರೋಪಿಸಿದರು.
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಪರಿಕಲ್ಪನೆಗೆ ಜಿಲ್ಲಾಡಳಿತದ ತಾರತಮ್ಯ ನೀತಿ ತದ್ವಿರುದ್ಧವಾಗಿದೆ. ಮತಪತ್ರದಲ್ಲಿನ ದೋಷದಿಂದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಚುನಾವಣಾ ಪ್ರಕ್ರಿಯೆಯು ಚುನಾವಣೆಯ ಅಣಕವಾಗಿದ್ದು, ಕೂಡಲೇ ಈ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಮರುಚುನಾವಣೆಗೆ ಆಗ್ರಹ: ಮುದ್ರಣ ದೋಷ ಉದ್ದೇಶಪೂರ್ವಕವಾಗಿದೆ. ಈ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ಅನುಕೂಲ ಕಲ್ಪಿಸುವ ಕಾರ್ಯ ಆಡಳಿತ ಮಾಡಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಚುನಾವಣೆ ಪ್ರಕ್ರಿಯೆ ರದ್ದುಗೊಳಿಸಿ ಮರುಚುನಾವಣೆ ಘೋಷಿಸಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಚುನಾವಣೆ ಗುರುತುಗಳು ಮಾತ್ರ ಮತಪತ್ರದಲ್ಲಿ ದೊಡ್ಡದಾಗಿ ಮುದ್ರಣಗೊಳ್ಳಲು ಹಾಗೂ ಇನ್ನುಳಿದ ಅಭ್ಯರ್ಥಿಗಳ ಗುರುತುಗಳು ಮಸುಕಾಗಿರಲು ಕಾರಣ ಹುಡುಕುವ ನಿಟ್ಟಿನಲ್ಲಿ ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ದೊರಕಿಸಬೇಕೆಂದು ಒತ್ತಾಯಿಸಿದರು.
ಆಹ್ವಾನವಿಲ್ಲ: ಚುನಾವಣೆಗೂ ಮುನ್ನ ಅಭ್ಯರ್ಥಿಗಳಿಗೆ ಮತಪತ್ರ ಪ್ರದರ್ಶಿಸಿಲ್ಲ. ಕೇವಲ ಕೆಲವೇ ಅಭ್ಯರ್ಥಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ವಿದ್ಯುನ್ಮಾನ ಮತಯಂತ್ರಗಳಿಗೆ ಮತಪತ್ರ ಅಳವಡಿಸುವ ಪ್ರಕ್ರಿಯೆ ಬಗ್ಗೆಯೂ ತಮಗೆ ಮಾಹಿತಿ ನೀಡಿಲ್ಲ ಎಂದು ದೂರಿದರು.
ಹೀಗಾಗಿ ಚುನಾವಣೆಗೆ ಮುನ್ನ ಅಭ್ಯರ್ಥಿಗಳಿಗೆ ನೀಡಬೇಕಾಗಿರುವ ಮಾಹಿತಿಯನ್ನು ಸರಿಯಾಗಿ ನೀಡದೆ ಇಡೀ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಮುಖಂಡರು ದೂರಿ ಈ ಬಗ್ಗೆ ಬೆಂಗಳೂರಿಗೆ ತೆರಳಿ ರಾಜ್ಯ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಎಸ್ಯುಸಿಐ-ಸಿ ಪಕ್ಷದ ಮುಖಂಡ ಡಾ. ಸುನೀತಕುಮಾರ್, ಅಭ್ಯರ್ಥಿ ಕೆ.ಸೋಮಶೇಖರ ಯಾದಗಿರಿ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎನ್.ಶಿವಶಂಕರ, ಎಎಪಿ ಅಭ್ಯರ್ಥಿ ಭೀಮರಾಯ ಜರದಬಂಡಿ, ಸಿಪಿಎಂಎಲ್ನ ಮುಖಂಡ ರಾಜಶೇಖರ, ಲೋಕಸತ್ತಾ ಪಾರ್ಟಿಯ ಜಿಲ್ಲಾಧ್ಯಕ್ಷ ರಾಮಣ್ಣ ಆರ್ಎಚ್ಜೆ, ಪಕ್ಷೇತರ ಅಭ್ಯರ್ಥಿ ಚಿನ್ನಯ್ಯ ನಾಯಕ, ಪಿರಾಮಿಡ್ ಪಾರ್ಪಿಯ ಕೋಟೇಶ್ವರ ರಾವ್ ಸೇರಿದಂತೆ ಅನೇಕರಿದ್ದರು. ಪಕ್ಷಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.