ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸೌಲಭ್ಯಕ್ಕಾಗಿ ಹೋರಾಡಿ

Mainashree
Updated On : 21 Apr 2014, 10:39 am

ಕ.ಪ್ರ. ವಾರ್ತೆ ್ಣ ರಾಯಚೂರು ್ಣ ಏ.20
ರಾಜ್ಯದಲ್ಲಿ ಬಿಸಿಯೂಟ ನೌಕರರು ಅತ್ಯಂತ ಕಡಿಮೆ ಸಂಬಳ, ಜೀವನಕ್ಕೆ ಭದ್ರತೆ ಇಲ್ಲದಂಥ ಸ್ಥಿತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರದಿಂದ ವಿವಿಧ ಸವಲತ್ತು ಪಡೆಯುವತ್ತ ಬಿಸಿಯೂಟ ನೌಕರರು ಹೋರಾಟಕ್ಕೆ ಮುಂದಾಗಬೇಕಿದೆ ಎಂದು ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘ (ಸಿಐಟಿಯು ಸಂಯೋಜಿತ)ದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮಸ್ತಿ ಕರೆ ನೀಡಿದರು.
ನಗರದ ಹಾಷ್ಮಿಯಾ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಬಿಸಿಯೂಟ ನೌಕರರ ಜಿಲ್ಲಾ ಮಟ್ಟದ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ನೌಕರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆಸಿದ ಹೋರಾಟಗಳಿಗೆ ರಾಜ್ಯ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಕನಿಷ್ಟ ಸಂಬಳ, ಉದ್ಯೋಗ ಭದ್ರತೆ ಕಲ್ಪಿಸದೆ ಬಿಸಿಯೂಟ ನೌಕರರನ್ನು ಸಂಪೂರ್ಣ ಕಡೆಗಣಿಸಿರುವುದು ಖಂಡನೀಯ ಎಂದು ಟೀಕಿಸಿದರು.
ಪರಿಶ್ರಮ: ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ದಿನವೂ ಮಕ್ಕಳಿಗೆ ಬಿಸಿಯೂಟ ತಯಾರಿಸಿ ಒದಗಿಸುತ್ತಿರುವ ನೌಕರರು ಶಾಲಾ ಮಕ್ಕಳ ಹಾಜರಾತಿ ಹೆಚ್ಚಳಕ್ಕೆ ಕಾರಣರಾಗಿದ್ದಾರೆ. ಹಾಗೆಯೇ ಅವರು ಮಕ್ಕಳಲ್ಲಿನ ಅಪೌಷ್ಟಿಕತೆ ಸಮಸ್ಯೆ ನಿವಾರಣೆಗೂ ಕೊಡುಗೆ ನೀಡುತ್ತಿದ್ದಾರೆ. ಯೋಜನೆ ಆರಂಭಗೊಂಡು 11 ವರ್ಷಗಳು ಕಳೆದರೂ ನೌಕರರ ಪ್ರಾಮಾಣಿಕ ಸೇವೆಗೆ ಸರ್ಕಾರ ಬೆಲೆ ನೀಡುತ್ತಿಲ್ಲ. ಬಿಸಿಯೂಟ ನೌಕರರ ಕರ್ತವ್ಯನಿಷ್ಠೆಯಿಂದಾಗಿಯೇ ದೇಶದಲ್ಲಿಯೇ ರಾಜ್ಯವು ಅಕ್ಷರ ದಾಸೋಹ ಯೋಜನೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂಬುದನ್ನು ಮರೆಯುವಂತಿಲ್ಲ ಎಂದು ಹೇಳಿದರು.
ಶಾಲೆಗಳ ಅಭಿವೃದ್ಧಿಪಡಿಸಲಿ: ದೇಶ ಮಟ್ಟದಲ್ಲಿ ರಾಜ್ಯಕ್ಕೆ ಗೌರವ ತಂದುಕೊಟ್ಟಿರುವ ಬಿಸಿಯೂಟ ನೌಕರರಿಗೆ ರಾಜ್ಯ ಸರ್ಕಾರ ಕನಿಷ್ಟ ಸವಲತ್ತು ಒದಗಿಸುತ್ತಿಲ್ಲ. ಸರ್ಕಾರಕ್ಕೆ ಕೃತಜ್ಞತೆಯ ಭಾವನೆಯೇ ಇಲ್ಲವಾಗಿದೆ ಎಂದು ಟೀಕಿಸಿದ ಅವರು, ಬಿಸಿಯೂಟ ನೌಕರರ ಬೇಡಿಕೆಗಳ ಜತೆ ಶಾಲೆಗಳಲ್ಲಿ ಶುಚಿತ್ವ ಕಾಪಾಡಬೇಕು. ನೌಕರರಿಗೆ ಅಡುಗೆ ಮಾಡಲು ಸೂಕ್ತ ಪರಿಕರಗಳನ್ನು ನೀಡಬೇಕು. ಅಡುಗೆ ಕೋಣೆ ನಿರ್ಮಾಣ, ಪರಿಸರ ಸಂರಕ್ಷಣೆ, ಆಟದ ಮೈದಾನ ಸೇರಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಶಿಬಿರದ ಅಧ್ಯಕ್ಷತೆ ವಹಿಸಿದ್ದ ಸಿಐಟಿಯು ಜಿಲ್ಲಾಧ್ಯಕ್ಷೆ ಎಚ್.ಪದ್ಮಾ ಮಾತನಾಡಿ, ನೌಕರರು ತಮ್ಮ ಸವಲತ್ತುಗಳನ್ನು ಪಡೆಯಲು ಎಲ್ಲರೂ ಸಂಘಟಿತರಾಗುವುದು ಅವಶ್ಯ. ಬೇಡಿಕೆಗಳ ಈಡೇರಿಸುವುದಕ್ಕಾಗಿ ಹೋರಾಟದ ಹಾದಿ ಹಿಡಿಯಬೇಕಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನೌಕರರಿಗೆ ಅಗತ್ಯವಾದ ಸವಲತ್ತು ದೊರೆಯುವವರೆಗೆ ಹೋರಾಟ ಮುಂದುವರಿಸುವ ನಿಟ್ಟಿನಲ್ಲಿ ಒಗ್ಗೂಡುವಂತೆ ಮನವಿ ಮಾಡಿದರು.
ಸಮಾರಂಭದಲ್ಲಿ ಸಂಘದ ತಾಲೂಕು ಸಮಿತಿ ಅಧ್ಯಕ್ಷೆ ನಾಗಮ್ಮ, ಪ್ರಧಾನ ಕಾರ್ಯದರ್ಶಿ ಅಕ್ಕಮಹಾದೇವಿ, ಸಿಐಟಿಯು ಉಪಾಧ್ಯಕ್ಷ ಜೆ.ಎಂ.ಚನ್ನಬಸಯ್ಯ, ಗಿರಿಯಪ್ಪ ಪೂಜಾರಿ, ಶ್ರೀಲೇಖಾ, ತುಳಜಾ, ಮರಿಯಮ್ಮ, ಶರಣಮ್ಮ, ರೇಣುಕಮ್ಮ ಸೇರಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಶಿಬಿರಾರ್ಥಿಗಳು, ಬಿಸಿಯೂಟ ನೌಕರರು, ಸಂಘದ ಸದಸ್ಯರು, ಪದಾಧಿಕಾರಿಗಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement