ಅಕ್ರಮ ಮರಳು ದಂಧೆ ವಿರುದ್ಧ ಕ್ರಮಕ್ಕೆ ಒತ್ತಾಯ
ಚಿತ್ತಾಪುರ: ತಾಲೂಕಿನ ಭಾಗೋಡಿ, ಮುಡಬೂಳ, ದಂಡೋತಿ, ತೆಂಗಳಿ, ಮರಗೋಳ, ಕುನ್ನುರ ಸೇರಿದಂತೆ ಹಲವಾರು ನದಿ ಪಾತ್ರದ ಗ್ರಾಮಗಳಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದು, ಇದನ್ನು ತಡೆಯಬೇಕೆಂದು ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ವೀರೇಶ ಪಾಟೀಲ್ ಒತ್ತಾಯಿಸಿದ್ದಾರೆ.
ಸರ್ಕಾರ ಮರಳು ಸಾಗಣೆಯನ್ನು ನಿಷೇದಿಸಿದ್ದರೂ ಕೆಲ ರಾಜಕೀಯ ವ್ಯಕ್ತಿಗಳ ಬೆಂಬಲದಿಂದ ಅಕ್ರಮವಾಗಿ ರಾತ್ರಿ ಹಗಲು ಎನ್ನದೇ ಜೆಸಿಬಿ ಮೂಲಕ ಲಾರಿ, ಟಿಪ್ಪರ್, ಟ್ರ್ಯಾಕ್ಟರ್‌ಗಳ ಮೂಲಕ ರಾಜಾರೋಷವಾಗಿ ಸಾಗಾಟವಾಗುತ್ತಿದ್ದರೂ ಅದನ್ನು ತಡೆಯಬೇಕಾದ ಅಧಿಕಾರಿಗಳು ಮಾತ್ರ ಇದು ತಮಗೆ ಸಂಬಂಧಿಸಿದಲ್ಲ ಎಂದು ಸುಮ್ಮನೇ ಕುಳಿತಿದ್ದಾರೆ. ಇದನ್ನು ನೋಡಿದರೆ ಇದರಲ್ಲಿ ಅವರಿಗೂ ಪಾಲು ಇದ್ದಂತೆ ಕಾಣುತ್ತಿದೆ ಎಂದು ಅವರು ಆರೋಪಿಸಿದರು.
ನೈಸರ್ಗಿಕ ಸಂಪತ್ತನ್ನು ಇಂತಹ ಕೆಲವರು ಲೂಟಿ ಮಾಡಿ ನದಿಗಳಲ್ಲಿ ನೀರಿನ ಹರಿವು ಇಲ್ಲದಂತೆ ಮಾಡುತ್ತಿದ್ದು, ಇದನ್ನು ಜಯ ಕರ್ನಾಟಕ ಸಂಘಟನೆ ಉಗ್ರವಾಗಿ ಖಂಡಿಸುತ್ತದೆ. ಮುಂದಿನ ದಿನಗಳಲ್ಲಿ ಇದರ ವಿರುದ್ಧ ಕ್ರಮ ಕೈಗೊಂಡು ಅಕ್ರಮ ಮರಳು ಸಾಗಣೆ ನಿಲ್ಲಿಸಬೇಕು. ವಿಳಂಬ ನೀತಿ ಅನುಸರಿಸಿದಲ್ಲಿ ಇದರ ವಿರುದ್ಧ ಸಂಘಟನೆಯು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಜಯ ಕರ್ನಾಟಕ ಸಂಘಟನೆ ತಾಲೂಕು ಗೌರವ ಅಧ್ಯಕ್ಷ ಭೀಮು ವಚ್ಚಾ, ಮಾರುತಿ, ಬಸವರಾಜ ಮಡಿವಾಳ, ಮಹೇಶ ಸಾತನೂರ, ಶಿವು ಡಿಗ್ಗಿ, ಹಣಮಂತ, ಶಿವು ಅರಬೋಳ, ರಾಮು, ಬಸ್ಸು, ಜಗ್ಗು ಮಾನ್ವಿ ಇದ್ದರು.