ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಿಸಿಲಿನ ಝಳಕ್ಕೆ ಜನ, ಜಾನುವಾರು ತತ್ತರ

Rashmi Kasaragodu
Updated On : 22 Apr 2014, 11:57 am

ಆಳಂದ: ಮುಂಜಾನೆ ಆಗುವುದೇ ತಡ, ಸೂರ್ಯನ ಮುಖ ನೋಡ-ನೋಡುವಷ್ಟರಲ್ಲಿಯೇ ಬಿಸಿಲಿನ ತಾಪ ನೆತ್ತಿಗೇರುತ್ತದೆ. ಬಳಿಕ ಸಮಯ ಕಳೆದಂತೆ ಕಾಯ್ದ ಹಂಚಿನ ಮೇಲೆ ನೀರು ಸುರಿದಂತೆ ವಾತಾವರಣ ನಿರ್ಮಾಣವಾಗಿರುತ್ತದೆ. ಹೀಗಾಗಿ ಝಳ ಹಾಗೂ ಬಿಸಿಲಿನ ವಿಪರೀತ ಹೊಡೆತಕ್ಕೆ ಜನರು ತತ್ತರಿಸುವಂತಾಗಿದೆ.
ಒಂದೆಡೆ ಅಕಾಲಿಕ ಮಳೆಯಿಂದ ಕೈಗೆ ಬಂದಿದ್ದ ಫಸಲು ಕಳೆದುಕೊಂಡ ಚಿಂತೆ, ಮತ್ತೊಂದೆಡೆ ಚುನಾವಣೆ ಮುಗಿದ ಫಲಿತಾಂಶದ ದಿನಗಳ ನಿರೀಕ್ಷೆಯ ಬಿಸಿಯ ನಡುವೆಯೂ ದಿನಗಳೆಯುತ್ತಿರುವ ನಾಗರಿಕರಿಗೆ ಬಿಸಿಲಿನ ಬೇಗುದಿ ತೊಂದರೆ ಮಾಡಿದೆ.   
ತಂಪಾದ ನೀರು ಕುಡಿದರೂ ಬಿಸಿಲಿನ ಧಗೆ, ಬಾಯಾರಿಕೆ ಜನರಿಗೆ ಕಾಟ ಸಹಿಸದಂತಾಗಿದೆ. ಹೀಗಾಗಿ ಕಲ್ಲಂಗಡಿ ಅಲ್ಲದೇ ವಿವಿಧ ಹಣ್ಣುಗಳ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ.
ಕಲ್ಲಂಗಡಿ ಹಣ್ಣು 40 ರಿಂದ 60 ವರೆಗೆ ಮಾರಾಟವಾದರೆ. ಪೈನಾಪಲ್, ಕರಬೂಜಾ, ನಿಂಬೆ ಶರಬತ್ತು, ಮಾವಿನ ರಸ, ಚಿಕ್ಕು, ಮೋಸಂಬಿ, ಸೇಬು ಇತರೆ ಹಣ್ಣಿನ ರಸಗಳ ಮತ್ತು ವಿವಿಧ ಕಂಪೆನಿಗಳ ತಂಪು ಪಾನೀಯಗಳ ದುಬಾರಿ ಬೆಲೆಯ ಮಾರಾಟ ಬಲು ಜೋರಾಗಿದೆ.
ತಂಪು ಪಾನೀಯ ವ್ಯಾಪಾರ ಬಲು ಜೋರು:ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಎಲ್ಲರಿಗೂ ಬಿಸಿಲಿನ ತಾಪದಿಂದ ಪಾನಿಯಗಳ ಮೊರೆ ಹೋಗುವಂತಾಗಿದೆ. ಆಳಂದ ಪಟ್ಟಣ ಅಲ್ಲದೇ ಗ್ರಾಮೀಣ ಭಾಗದ ಕಡಗಂಚಿ, ನರೋಣಾ, ನಿಂಬರ್ಗಾ, ಮಾದನಹಿಪ್ಪರಗಾ, ಖಜೂರಿ, ಸಾವಳೇಶ್ವರ, ಸರಸಂಬಾ, ಹಿರೋಳಿ, ಮಾಡಿಯಾಳ, ಹೊದಲೂರ, ಲಾಡ ಚಿಂಚೋಳಿ, ಭೂಸನೂರ ಮುಂತಾದ ಕಡೆಗಳಲ್ಲಿಯೂ ತಂಪು ಪಾನೀಯಗಳ ವ್ಯಾಪಾರ ಬಲು ಜೋರಾಗಿದೆ.
ಬಿಸಿಲಿನ ತಾಪದಿಂದ ಕುಡಿಯುವ ನೀರಿಗೂ ಜನ ಹಪಹಪಿಸುವಂತಾಗಿದೆ. ಮೊನ್ನೆ ಸುರಿದ ಮಳೆಯಿಂದ ಬಿಸಿಲಿನ ಝಳ, ತಾಪ ಮತ್ತಷ್ಟು ಹೆಚ್ಚಾದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ನೀರಿನ ಅರವಂಟಿಗೆಗಳ ವ್ಯವಸ್ಥೆ ಇಲ್ಲ. ಪರದಾಡಿ ಜನರು ನೀರು ಕುಡಿದರೆ ಸಾಕು ಎನ್ನುವಂತಾಗಿದೆ.
ಕಳೆದ ವರ್ಷಕ್ಕಿಂತಲೂ ಈ ಬಾರಿ ಹೆಚ್ಚು: ಕಳೆದ ವರ್ಷಕ್ಕಿಂತಲೂ ಈ ಬಾರಿ ಬಿಸಿಲು ಹೆಚ್ಚಾಗಿದೆ ಎನ್ನುತ್ತಾರೆ ಸಾರ್ವಜನಿಕರು. ಮಕ್ಕಳು, ವಯೋವೃದ್ಧರು, ಬಿಸಿಲಿಲಿಂದ ಪರದಾಡುವಂತಾಗಿದೆ. ಅನುಕೂಲಸ್ಥರು ಹವಾನಿಯಂತ್ರಿತ ಕೋಣೆಯಲ್ಲಿ ಕಾಲ ಕಳೆದರೆ, ಬಡವರು, ಕಾರ್ಮಿಕರು ಬಿಸಿಲಿನ ಝಳಕ್ಕೆ ತತ್ತರಿಸಿ ಹೋಗುತ್ತಿದ್ದಾರೆ. ಆಗಾಗ ವರುಣ ದಯೆ ತೋರಿದರೆ ಭೂಮಿ ತಂಪಾಗಿ ಜನರು ನೆಮ್ಮದಿಯಿಂದ ನಿಟ್ಟುಸಿರು ಬಿಟ್ಟು ಬೇಸಿಗೆ ಅವಧಿ ಪಾರಾಗಲಿ ಎನ್ನುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement