ಮಳೆ ಬಿದ್ದರೂ ಗರಿಷ್ಠ ತಾಪಮಾನ
ಗುಲ್ಬರ್ಗ: ಬಿರು ಬಿಸಿಲಿನಿಂದ ಬಳಲಿದ್ದ ಜನತೆಗೆ ಶನಿವಾರ ರಾತ್ರಿ ಗುಲ್ಬರ್ಗದಲ್ಲಿ ಸುರಿದ ಮಳೆ ತಂಪು ನೀಡಿದೆ. ಆದರೆ ಭಾನುವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡಂತೆ ಹಿಂದಿನ 24 ಗಂಟೆಗಳ ತಾಪಮಾನ ರಾಜ್ಯದಲ್ಲೇ ಗರಿಷ್ಠ 39.8 ಡಿಗ್ರಿ ದಾಖಲಾಗಿದೆ. ಮಳೆ ಪರಿಣಾಮ ಕನಿಷ್ಠ ತಾಪಮಾನ 22.9 ಡಿಗ್ರಿ ದಾಖಲಾಗಿದೆ.
ಜಿಲ್ಲೆಯಲ್ಲಿ ಏಪ್ರಿಲ್ ತಿಂಗಳ ಸರಾಸರಿ ತಾಪಮಾನವೂ ಗರಿಷ್ಠ 40 ಡಿಗ್ರಿ ಹಾಗೂ ಕನಿಷ್ಠ 25.4 ಡಿಗ್ರಿ ಆಗಿದ್ದು, ಪ್ರಸ್ತುತ ತಾಪಮಾನವೂ ಇದಕ್ಕಿಂತ ಕಡಿಮೆ ಇದೆ. ಏಪ್ರಿಲ್ ಎರಡನೇ ವಾರದಲ್ಲಿ ತಾಪಮಾನವೂ ಸರಾಸರಿಗಿಂತ ಮೇಲೇರಿದ್ದು, 41 ಡಿಗ್ರಿ ದಾಟಿತ್ತು. 25 ಏಪ್ರಿಲ್ 2000 ದಂದು ದಾಖಲಾದ 45.1 ಡಿಗ್ರಿ ಈ ಶತಮಾನದಲ್ಲಿ ಏಪ್ರಿಲ್ ತಿಂಗಳಲ್ಲಿ ಜಿಲ್ಲೆಯಲ್ಲಿ ದಾಖಲಾದ ಗರಿಷ್ಠ ತಾಪಮಾನವಾಗಿದೆ. 14 ಮೇ 2010 ರಂದು ಜಿಲ್ಲೆಯಲ್ಲಿ ದಾಖಲಾದ 46.1 ಡಿಗ್ರಿ ರಾಜ್ಯದಲ್ಲೇ ಈ ಶತಮಾನದ ಗರಿಷ್ಠ ತಾಪಮಾನವಾಗಿದೆ.
ಭಾನುವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡಂತೆ 24 ಗಂಟೆಯಲ್ಲಿ ಜಿಲ್ಲೆಯಲ್ಲಿ 8.1ಮಿ.ಮೀ. ಮಳೆಯಾಗಿದೆ. ಈ ಪೈಕಿ ಆಳಂದ ತಾಲೂಕಿನ ಖಜೂರಿಯಲ್ಲಿ 5 ಮಿ.ಮೀ, ಉಳಿದಂತೆ ಗಾಣಗಾಪುರ, ನಗರದ ಹೊರವಲಯ ಮತ್ತಿತರರೆಡೆ 2 ಮಿ.ಮೀ ಮಳೆಯಾಗಿದೆ. ಮಳೆಯ ಪರಿಣಾಮ ತಾಪಮಾನವೂ 2 ಡಿಗ್ರಿ ಇಳಿಕೆಯಾಗಿದೆ.
ಮುಂದಿನ ದಿನಗಳಲ್ಲಿ ಶುಷ್ಕ ಹವೆ ಮುಂದುವರೆಯಲಿದ್ದು, ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆಯ ವರದಿಗಳು ತಿಳಿಸಿವೆ.