ವೈಜ್ಞಾನಿಕ ಪರಿಹಾರಕ್ಕೆ ಆಗ್ರಹಿಸಿ ಧರಣಿ
ಕ.ಪ್ರ. ವಾರ್ತೆ ರಾಯಚೂರು ಏ.21
ಅಕಾಲಿಕ ಆಲಿಕಲ್ಲು ಮಳೆಗೆ ಹಾನಿಗೀಡಾದ ಬೆಳೆಗೆ ಪ್ರತಿಯಾಗಿ ವೈಜ್ಞಾನಿಕ ಪರಿಹಾರಕ್ಕೆ ಆಗ್ರಹ, ಮರಳು ಅಕ್ರಮ ಸಾಗಾಣಿಕೆಯನ್ನು ತಡೆಯುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೋಮವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ ಧರಣಿ ಕೈಗೊಂಡರು.
ನಗರದ ಪ್ರಮುಖ ರಸ್ತೆಯಲ್ಲಿ ಪ್ರತಿಭಟನಾ ಮೆರವವಣಿಗೆ ನಡೆಸಿದ ಸಂಘಟನೆ ಕಾರ್ಯಕರ್ತರು ನಂತರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ, ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಈಚೆಗೆ ಅಕಾಲಿಕ ಆಲಿಕಲ್ಲು ಮಳೆ ಸುರಿದು ಬಿರುಗಾಳಿ ಬೀಸಿ ಭಾರೀ ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿದೆ. ಅದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆಂದು ಆರೋಪಿಸಿದರು.
ಆತಂಕದಲ್ಲಿ ರೈತರು: ಲಿಂಗಸ್ಗೂರು ಮತ್ತು ದೇವದುರ್ಗ ತಾಲೂಕುಗಳಲ್ಲಿ ರೈತರು ಬೆಳೆದ ಬತ್ತ, ಹತ್ತಿ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳು ಅಕಾಲಿಕ ಮಳೆಗೆ ಹಾಳಾಗಿವೆ. ಬೆಳೆ ಹಾನಿ ಜತೆಜತೆಗೆ ರೈತರ ಹಾಗೂ ಬಡವರ ಮನೆಗಳಿಗೆ ಹೊದಿಸಿದ ತಗಡಿನ ಚಾವಣಿ ಸಹ ಕಿತ್ತು ಹೋಗಿದ್ದು ಅದರಿಂದ ರೈತರು ಆತಂಕದಲ್ಲಿ ಬದುಕು ಕಳೆಯುತ್ತಿದ್ದಾರೆಂದು ದೂರಿದರು.
ಕಾರಣ ಕೂಡಲೇ ಬೆಳೆ ಹಾನಿ ಮತ್ತು ಆಸ್ತಿ-ಪಾಸ್ತಿಗೆ ಹಾನಿ ಅನುಭವಿಸಿದ ರೈತರು ಮತ್ತು ಬಡವರಿಗೆ ವೈಜ್ಞಾನಿಕ ರೀತಿಯಲ್ಲಿ ಹಾನಿ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕೆಂದು ಆಗ್ರಹಿಸಿದ ಹೋರಾಟಗಾರರು, ಜಿಲ್ಲಾದ್ಯಂತ ವಿವಿಧೆಡೆ ಅಕ್ರಮವಾಗಿ ಮರಳು ಸಾಗಣೆ ದಂಧೆ ರಾಜಾರೋಷವಾಗಿ ನಡೆದಿದೆ. ಅದರಿಂದಾಗಿ ಅಂತರ್ಜಲಕ್ಕೆ ಧಕ್ಕೆಯಾಗುತ್ತಿದ್ದು ಕೂಡಲೇ ಅಕ್ರಮಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿದರು.
ಬಿಪಿಎಲ್ ಕಾರ್ಡ್‌ಗೆ ಆಗ್ರಹ: ಜಿಲ್ಲೆಯ ವಿವಿಧೆಡೆಯ ಕೆರೆಗಳ ಒತ್ತುವರಿ ಮಾಡಿಕೊಳ್ಳಲಾಗುತ್ತಿದ್ದು, ಕೂಡಲೇ ಕೆರೆಗಳ ಸರ್ವೇ ಮಾಡಿಸಿ ಕೆರೆಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಬಿಪಿಎಲ್ ಅಂತ್ಯೋದಯ ಕಾರ್ಡುಗಳು ಬಡವರಿಗೆ ತಲುಪಿಲ್ಲ. ಶ್ರೀಮಂತರ ಪಾಲಾಗುತ್ತಿದ್ದು, ಈ ನಿಟ್ಟಿನಲ್ಲಿ ಗಮನಹರಿಸಿ ಅರ್ಹರಿಗೆ ಬಿಪಿಎಲ್ ಕಾರ್ಡು ದೊರಕಿಸುವಂತೆ ಆಗ್ರಹಿಸಿದರು.
ನಾರಾಯಣಪುರ ಬಲದಂಡೆ ಕಾಲುವೆಯ ಆಧುನೀಕರಣಕ್ಕೆ ಚಾಲನೆ ನೀಡಬೇಕು. ಹೊಲಗಾಲುವೆಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ತುಂಗಭದ್ರಾ ಎಡದಂಡೆ ಕಾಲುವೆಯಿಂದ ಅಕ್ರಮವಾಗಿ ನೀರು ಪಡೆಯುವುದನ್ನು ತಡೆದು ಕಾಲುವೆಯ ಕಡೆಯ ರೈತರಿಗೆ ಸಮರ್ಪಕ ನೀರೊದಗಿಸಲು ಪೂರಕ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಮೀಕ್ಷಾ ಶುಲ್ಕ ದುಬಾರಿ: ಗ್ರಾಪಂ ಕ್ರಿಯಾ ಯೋಜನೆಗಳಲ್ಲಿ ಬಡ ರೈತರಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಲ್ಲಿ ಸೌಲಭ್ಯ ದೊರೆಯುವಂತೆ ಅವಕಾಶ ಕಲ್ಪಿಸಬೇಕು. ಸರ್ಕಾರ ಸಂಪೂರ್ಣ ಭೂಮಿ ಸರ್ವೇ ಕಾರ್ಯಕ್ಕೆ ಚಾಲನೆ ನೀಡಬೇಕು. ಭೂ ಸಮೀಕ್ಷೆಗೆ ನಿಗದಿ ಮಾಡಿದ ಶುಲ್ಕವು ದುಬಾರಿಯಾಗಿದ್ದು, ರೈತರಿಗೆ ಅದರ ಹೊರೆ ತಪ್ಪಿಸಬೇಕೆಂದು ಆಗ್ರಹಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ನಿರ್ಮಿಸಿಕೊಂಡಂಥ ಫಲಾನುಭವಿಗಳಿಗೆ ಸರ್ಕಾರ ಕೂಡಲೇ ಗ್ರಾಪಂ ಮೂಲಕ ಹಣ ಪಾವತಿಗೆ ಕ್ರಮ ಜರುಗಿಸಬೇಕು. ಬಗರ್‌ಹುಕುಂ ಸಾಗುವಳಿದಾರರಿಗೆ ಅರಣ್ಯ ಇಲಾಖೆಯವರು ಒಕ್ಕಲೆಬ್ಬಿಸುವುದನ್ನು ಕೂಡಲೇ ತಡೆಯಬೇಕು. ವಿವಿಧ ವಸತಿ ಯೋಜನೆಗಳಡಿ ಬಡವರಿಗೆ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಧರಣಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ, ಜಿಲ್ಲಾ ಗೌರವಾಧ್ಯಕ್ಷ ಬಸವನಗೌಡ ಬಲ್ಲಟಗಿ, ಸಿದ್ದೇಶ ಗೌಡೂರು, ಬಸನಗೌಡ ಬಳಗಾನೂರು, ಜಯಪ್ಪಸ್ವಾಮಿ, ನರಸಿಂಹರಾವ್ ಕುಲಕರ್ಣಿ ಚಂದ್ರಬಂಡಾ, ಮಲ್ಲಣ್ಣ ದಿನ್ನಿ, ವೀರೇಶಗೌಡ ಕಡಗಂದೊಡ್ಡಿ ಸೇರಿದಂತೆ ಅನೇಕರಿದ್ದರು.