ಅಂತರ್ಜಲ ಹೆಚ್ಚಳಕ್ಕೆ ಮಾಗಿ ಉಳುಮೆ ಮದ್ದು
ಕ.ಪ್ರ. ವಾರ್ತೆ ಆಳಂದ ಏ.22
ಕಳೆದ ಹಂಗಾಮಿನಲ್ಲಿ ಮಳೆ, ಬೆಳೆ ಸಕಾಲಕ್ಕೆ ಬಾರದೆ ಸಾಕಷ್ಟು ನಷ್ಟದ ಮಧ್ಯೆಯೂ ರೈತರು ಮತ್ತೆ ಉತ್ತಮ ಮುಂಗಾರು ಹಂಗಾಮು ನಿರೀಕ್ಷೆಯೊಂದಿಗೆ ಮಾಗಿ ಉಳುಮೆಯಲ್ಲಿ ತೊಡಗಿದ್ದಾರೆ.
ಇದು ಆತನಿಗೆ ಅನಿವಾರ್ಯವೋ ಅಥವಾ ಋಣಾನುಬಂಧವೋ ಗೊತ್ತಿಲ್ಲ. ಆದರೆ ಅನ್ನದಾತ ಮಾತ್ರ ವರ್ಷವಿಡೀ ಬೆವರು ಸುರಿಸಿ ದುಡಿದೂ ಕೈಗೆ ಬಂದ ತುತ್ತು ಬಾಯಿದೆ ಬಾರದಿದ್ದರೂ ಕೃಷಿಯಿಂದ ವಿಮುಖನಾಗದೆ ಮುಂದಿನ ಹಂಗಾಮಿನ ಆಶಾಭಾವದೊಂದಿಗೆ ಮತ್ತೆ ಮತ್ತೆ ತನ್ನ ಕಾಯಕದಲ್ಲಿ ನಿರತನಾಗುತ್ತಿದ್ದಾನೆ. ರೈತಪಿ ವರ್ಗದ ಇಂತಹ ದುಡಿಮೆ ಯಾರಿಗಾಗಿ, ಯಾತಕ್ಕಾಗಿ, ಅವರಿಗೆ ಕೃಷಿ ಅನಿವಾರ್ಯವೋ ಅಥವಾ ಋಣಾನುಬಂಧವೋ ಎನ್ನುವ ಪ್ರಶ್ನೆ ಮತ್ತೆ ಮತ್ತೆ ಎದುರಾಗುತ್ತದೆ.
ಮಾಗಿ ಉಳುಮೆಯಿಂದೇನು ಲಾಭ?: ಅದೇನೇ ಇರಲಿ.. ಈಗಂತೂ ತಾಲೂಕಿನಾದ್ಯಂತ ರೈತರು ನೇಗಿಲು, ಕುಂಟಿಯಿಂದ ಬಿರು ಬಿಸಿಲ ಝಳವನ್ನೂ ಲೆಕ್ಕಿಸದೆ ಮಾಗಿ ಉಳುಮೆಯಲ್ಲಿ ನಿರತರಾಗಿ ಭೂಮಿ ಹಸನುಗೊಳಿಸುತ್ತಿದ್ದಾರೆ. ಇದರಿಂದ ಭೂಮಿಯ ಕೋಶಗಳು ಬಿಸಿಲಿಗೆ ಬಿದ್ದು ನಾಶವಾಗುತ್ತವೆ. ಪಕ್ಷಿಗಳು ತಿಂದು ನಾಶ ಮಾಡುತ್ತವೆ. ಇದರಿಂದ ಮುಂದೆ ತೊಗರಿ ಬೆಳೆಯಲ್ಲಿ ಪತಂಗಗಳು ಬರುವ ಸಾಧ್ಯತೆ ಕಡಿಮೆ ಹಾಗೂ ಬೇಸಿಗೆಯಲ್ಲಿ ಎರಡ್ಮೂರು ಬಾರಿ ಸಾಗುವಳಿಯಿಂದ ಮಣ್ಣು ಬಿಸಿಲಿಗೆ ಬಿದ್ದು ಹಗುರವಾಗುತ್ತದೆ.
ನಂತರ ಮಳೆ ಬೀಳುವ ಮಳೆ ನೀರನ್ನು ತನ್ನೊಡಲದಲ್ಲಿ ಇಂಗಿಸಿಕೊಳ್ಳುವುದರಿಂದ ಅಂತರ್ಜಲವೂ ವೃದ್ಧಿಯಾಗುತ್ತದೆ. ಮಳೆ ಏರುಪೇರಾದ ಮೇಲೂ ಬೆಳೆ ಕೆಲ ದಿನಗಳವರೆಗೆ ಗಟ್ಟಿಯಾಗಿ ನಿಂತು ಬೆಳೆಯುತ್ತದೆ ಎನ್ನುತ್ತಾರೆ ಅನುಭವಿ ರೈತರು.
ಅತಿಯಾದ ರಸಾಯನಿಕ ಗೊಬ್ಬರ, ವಿಷಕಾರಿ ಕ್ರಿಮಿನಾಶಕದಿಂದ ಪರಿಸರದಲ್ಲಿ ಭಯಾನಕತೆ ಉಂಟು ಮಾಡಿದೆ. ಇದರಿಂದ ಮಾನವನ ಆರೋಗ್ಯಕರವಾಗಿರಲು ರೈತರ ಮನೆಬಾಗಿಲಿಗೆ ತಂತ್ರಜ್ಞಾನದ ಎಲ್ಲ ಲಾಭವನ್ನು ತಲುಪಿಸಬೇಕು ಎನ್ನುತ್ತಾರೆ ರೈತರು.
ಅಂತರ್ಜಲ ಪಾತಾಳಕ್ಕೆ: ಎಲ್ಲಡೆ ಅತಿಯಾದ ಬೋರ್ವೆಲ್ ಕೊರೆತದಿಂದ ವರ್ಷ ಕಳೆದಂತೆ ಅಂತರ್ಜಲ ಮತ್ತಷ್ಟು ಪಾತಾಳಕ್ಕೆ ಕುಸಿಯತೊಡಗಿದೆ. ಇದರಿಂದ ಜನ- ಜಾನುವಾರು ಹಾಗೂ ಇದನ್ನೇ ನಂಬಿಕೊಂಡಿದ್ದ ತೋಟಗಾರಿಕೆ ರೈತರಲ್ಲಿ ನೀರಿನ ಕೊರತೆಯಿಂದ ಭಯಾನಕ ಸಂಕಷ್ಟ ಎದುರಾಗಿದೆ.
ಮಾಗಿ ಉಳುಮೆ ಮಾಡಿ ಮುಂಗಾರು ಹಂಗಾಮಿಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಅನ್ನದಾತರಿಗೆ ಸರ್ಕಾರ ರಸಗೊಬ್ಬರ ಹಾಗೂ ಸಬ್ಸಿಡಿ ಬೀಜಗಳನ್ನು ಸಮಯಕ್ಕೆ ನೀಡಿದರೆ ಅವರಿಗೆ ಶ್ರಮ ಹಾಗೂ ಹಣ ಉಳಿತಾಯವಾಗಿ ಅಲೆಯುವುದು ತಪ್ಪುತ್ತದೆ ಎನ್ನುವುದು ರೈತರ ಒತ್ತಾಯ.