ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಲೋಕ ಚುನಾವಣೆ ಚಿಹ್ನೆಗಳ ತಾರತಮ್ಯ ಆಯೋಗಕ್ಕೆ ದೂರು

Rashmi Kasaragodu
Updated On : 23 Apr 2014, 12:08 pm

ರಾಯಚೂರು: ಲೋಕಸಭೆ ಚುನಾವಣೆಯ ಮತಯಂತ್ರದಲ್ಲಿ ಅಳವಡಿಸಿದ ಮತಪತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಹೊರತುಪಡಿಸಿ ಇನ್ನುಳಿದ ಪಕ್ಷಗಳ ಚಿಹ್ನೆಗಳ ಮುದ್ರಣದಲ್ಲಿ ಜಿಲ್ಲಾಡಳಿತ ತೋರಿದ ತಾರತಮ್ಯದ ವಿರುದ್ಧ ಈಚೆಗೆ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು ಶಾಸಕ ಡಾ. ಶಿವರಾಜ್ ಪಾಟೀಲ್ ನೇತೃತ್ವದಲ್ಲಿ ನಿಯೋಗ ತೆರಳಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಚುನಾವಣಾ ಚಿಹ್ನೆಗಳ ತಾರತಮ್ಯದ ವಿರುದ್ಧ ದೂರು ಸಲ್ಲಿಸಿ ಮತಯಂತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಚಿಹ್ನೆಗಳನ್ನು ದಪ್ಪಗೊಳಿಸಿರುವುದನ್ನು ಹಾಗೂ ಉಳಿದೆಲ್ಲ ಅಭ್ಯರ್ಥಿಗಳ ಚುನಾವಣಾ ಚಿಹ್ನೆಗಳನ್ನು ಮಸುಕುಗೊಳಿಸಿರುವುದನ್ನು ಉಪಚುನಾವಣಾಧಿಕಾರಿಗಳ ಗಮನಕ್ಕೆ ತರಲಾಯಿತು. ಮತದಾರರನ್ನು ಕೇವಲ ಎರಡು ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಮತ ನೀಡುವಂತೆ ಪ್ರಭಾವಕ್ಕೊಳಪಡಿಸುವ ಕಾರ್ಯ ಆಡಳಿತ ಮಾಡಿದೆ. ಮೇಲ್ನೋಟಕ್ಕೆ ತಾರತಮ್ಯ ಎಸಗಲಾಗಿದೆ ಎಂಬುದು ಕಂಡುಬರುತ್ತದೆ. ಇದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಪರಿಕಲ್ಪನೆಗೆ ತದ್ವಿರುದ್ಧವಾಗಿದೆ. ಆದ್ದರಿಂದ ಮರು ಚುನಾವಣೆ ಘೋಷಿಸುವಂತೆ ಒತ್ತಾಯಿಸಲಾಯಿತು. ಚುನಾವಣಾ ಚಿಹ್ನೆಗಳ ತಾರತಮ್ಯದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿ ತಪ್ಪತಸ್ಥರಿಗೆ ಶಿಕ್ಷೆ ಕೊಡಿಸುವ ಕಾರ್ಯ ಆಯೋಗ ಮಾಡಬೇಕೆಂದು ಆಗ್ರಹಿಸಲಾಯಿತು. ನಿಯೋಗದಲ್ಲಿ ಎಸ್ ಯುಸಿಐ-ಸಿ ಅಭ್ಯರ್ಥಿ ಕೆ. ಸೋಮಶೇಖರ್, ಆಮ್ ಆದ್ಮಿ ಪಕ್ಷದ ಭೀಮರಾಯ ಜರದಬಂಡಿ, ಲೋಕಸತ್ತಾ ಪಾರ್ಟಿಯ ಭಗವಂತಪ್ಪ ನಾಯಕ, ಪಕ್ಷೇತರ ಅಭ್ಯರ್ಥಿ ಚಿನ್ನಯ್ಯ ನಾಯಕ ಹಾಗೂ ಜೆಡಿಎಸ್‌ನ ಪ್ರಮುಖರು ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement