ಆದೇಶ ರದ್ದತಿಗೆ ಆಗ್ರಹ
ಸಿಂಧನೂರು: ನಗರದ ಸುಕಾಲಪೇಟೆ ರಸ್ತೆಯ ಖಾಸಗಿ ವಾಣಿಜ್ಯ ಮಳಿಗೆಯಲ್ಲಿ ನಡೆಯುತ್ತಿದ್ದ ಮುನಿರಾಬಾದ್ ಮಹೆಬೂಬ್ ನಗರ ರೇಲ್ವೆ ಮಾರ್ಗ ನಿರ್ಮಾಣ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯನ್ನು ಬಾಗಲಕೋಟೆಗೆ ಸ್ಥಳಾಂತರಿಸಿದ ಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ. ರಾಜ್ಯ ಸರ್ಕಾರ ಆದೇಶ ಹೊರಡಿಸಿರುವ ಕ್ರಮವನ್ನು ಸಮುದಾಯದ ಎಸ್.ದೇವೇಂದ್ರ ಗೌಡ, ಮನುಜಮತ ಬಳಗದ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾದರ್ಲಿ, ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಬಸವರಾಜ ಗೋಡೆಹಾಳ ಖಂಡಿಸಿದ್ದಾರೆ. ಬುಧವಾರ ಹೇಳಿಕೆ ನೀಡಿರುವ ಅವರು, ಈ ಭಾಗದ ಕನಸಿನ ಕೂಸಾಗಿರುವ ಮುನಿರಾಬಾದ್- ಮಹೆಬೂಬ್ ನಗರ ರೇಲ್ವೆ ಮಾರ್ಗ ನಿರ್ಮಾಣಕ್ಕೆ ಆರೇಳು ವರ್ಷಗಳಿಂದ ಭೂ ಸ್ವಾಧೀನ ಪ್ರಕ್ರಿಯೆ ನಡೆಸಲಾಗುತ್ತಿದೆ. ಆದರೆ ಇದುವರೆಗೂ ಅದು ಪೂರ್ಣಗೊಂಡಿಲ್ಲ. ಭೂಸ್ವಾಧೀನಕ್ಕೆ ಒಳಗಾಗಿ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರವೂ ಕೊಟ್ಟಿಲ್ಲ. ಹೀಗಿರುವಾಗ ರಾಜ್ಯ ಸರ್ಕಾರ ಏಕಾಏಕಿ ಕಚೇರಿಯನ್ನು ಬೇರೆಡೆ ಸ್ಥಳಾಂತರ ಮಾಡಿರುವ ಕ್ರಮ ಸರಿಯಲ್ಲ. ಕಾರಣ ಸರ್ಕಾರ ತನ್ನ ಆದೇಶವನ್ನು ರದ್ದುಗೊಳಿಸಿ ಅನ್ಯಾಯಕ್ಕೊಳಗಾದ ರೈತರಿಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪೂರ್ವಭಾವಿ ಸಭೆ ಇಂದು
ಸಿಂಧನೂರು: ಮೇ 2ರಂದು ಆಚರಿಸಲಾಗುವ ಬಸವೇಶ್ವರ ಜಯಂತಿ ಬಗ್ಗೆ ಕುರಿತು ಚರ್ಚಿಸಲು ಏ.25ರಂದು ಬೆಳಗ್ಗೆ 11 ಗಂಟೆಗೆ ತಾಪಂ ಸಭಾಂಗಣದಲ್ಲಿ ಪೂರ್ವ ಸಿದ್ಧತಾ ಸಭೆ ಕರೆಯಲಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳು, ಸಂಘ-ಸಂಸ್ಥೆಗಳು ಪದಾಧಿಕಾರಿಗಳು ಭಾಗವಹಿಸಲು ಕೋರಿದ್ದಾರೆ