ಜಿಪಂನಿಂದ ಕುಡಿವ ನೀರಿನ ಯೋಜನೆಗಳ ಪರಿಶೀಲನೆ
ರಾಯಚೂರು: ಪ್ರಸಕ್ತ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಪಂ ಪೂರಕ ಕ್ರಮಕ್ಕೆ ಮುಂದಾಗಿದ್ದು, ಗುರುವಾರ ಜಿಪಂ ಸಿಇಒ ವಿಜಯಜೋತ್ಸ್ನಾ ಮತ್ತು ಅಧಿಕಾರಿಗಳ ತಂಡವು ಜಿಲ್ಲೆಯ ಸಿಂಧನೂರು ತಾಲೂಕಿನ ವಿವಿಧೆಡೆ ಭೇಟಿ ನೀಡಿ ಪರಿಶೀಲಿಸಿತು.
ಸಿಂಧನೂರು ತಾಲೂಕಿನ ತುರ್ವಿಹಾಳ ಮತ್ತು ಭೋಗಾಪುರ ಗ್ರಾಮಗಳ ಬಹು ಗ್ರಾಮ ಯೋಜನೆಯ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯ ಸ್ಥಳ ಪರಿಶೀಲನೆ ಜಿಪಂ ಸಿಇಒ ವಿಜಯ ಜೋತ್ಸ್ನಾ ನಡೆಸಿ, ತುರ್ವಿಹಾಳ ಗ್ರಾಮದ ತುರ್ವಿಹಾಳ ಹಾಗೂ ಇತರೆ 33 ಗ್ರಾಮಗಳ ಯೋಜನೆಯ ಜಲಸಂಗ್ರಹಾಗಾರ, ನೀರುಶುದ್ಧೀಕರಣ ಘಟಕ, ಮೇಲ್ಮಟ್ಟದ ಜಲಸಂಗ್ರಹಾಗಾರ ತುಂಗಭದ್ರಾ ಎಡದಂಡೆ ಕಾಲುವೆ ಹತ್ತಿರ ಜಾಕ್ ವೆಲ್ ನಿರ್ಮಾಣ ಪರಿಶೀಲಿಸಿದರು.
ಮಾಹಿತಿ: ಈ ವೇಳೆ ಸ್ಥಳದಲ್ಲಿದ್ದ ಸಿಂಧನೂರು ಎಇಇ ಬಿ.ಆರ್. ಗೌಡೂರು ಅವರು ಯೋಜನೆಯಿಂದ ಈಗಾಗಲೇ ತುರ್ವಿಹಾಳ ಮತ್ತು ಕಲ್ಮಂಗಿ ಗ್ರಾಮಗಳಿಗೆ ನೀರು ಪೂರೈಸುತ್ತಿರುವುದಾಗಿ ಮಾಹಿತಿ ನೀಡಿದರು.
ಬಳಿಕ ಗುಂಡಾ ಗ್ರಾಪಂ ವ್ಯಾಪ್ತಿಯ ಭೋಗಾಪುರ ಗ್ರಾಮದ ಭೋಗಾಪುರ ಹಾಗೂ ಇತರೆ 12 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಮೊದಲ ಹಂತದ ಕಾಮಗಾರಿ ಪರಿಶೀಲಿಸಿದ ಅವರಿಗೆ ಭೋಗಾಪುರ ಮತ್ತು ಹತ್ತಿಗುಡ್ಡ ಗ್ರಾಮಗಳಿಗೆ ನೀರು ಒದಗಿಸುತ್ತಿರುವುದನ್ನು ತಿಳಿಸಿದರು.
ನೀರು ಶುದ್ಧೀಕರಣ ಘಟಕದ ಪರಿವೀಕ್ಷಣೆ ಸಂದರ್ಭದಲ್ಲಿ ಕ್ಲೋರಿನೇಷನ್ ಘಟಕ ಅಳವಡಿಸಿ ನೀರು ಪೂರೈಸಲು ಜಿಪಂ ಸಿಇಒ ಅಧಿಕಾರಿಗಳಿಗೆ ಸೂಚಿಸಿ ನಂತರ ಸಮರ್ಪಕ ನೀರು ಪೂರೈಕೆಯಾಗುವುದನ್ನು ಖಚಿತ ಪಡಿಸಿಕೊಳ್ಳಲು ಹತ್ತಿಗುಡ್ಡ ಗ್ರಾಮಕ್ಕೆ ತೆರಳಿದಾಗ ಮಹಿಳೆಯರು ದೂರದಿಂದ ನೀರು ಹೊತ್ತು ಸಾಗುವುದನ್ನು ಕಂಡು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು ಕುಡಿಯುವ ನೀರಿನ ಯೋಜನೆಯ ಕಾಮಗಾರಿ ತೀವ್ರ ಮುಗಿಸಲು ಆದೇಶಿಸಿದರು.
ಸೂಚನೆ: ಗ್ರಾಮದಲ್ಲಿನ ಆರು ಸಾರ್ವಜನಿಕ ನೀರಿನ ತೊಟ್ಟಿಯ ಬದಲಿಗೆ ಹೆಚ್ಚುವರಿಯಾಗಿ ಆರು ಸಾರ್ವಜನಿಕ ನೀರಿನ ತೊಟ್ಟಿಗಳನ್ನು ನಿರ್ಮಿಸಲು ಹಾಗೂ ಕೂಡಲೇ ನೀರೊದಗಿಸಲು ಸೂಚಿಸಿದರು.
ಅವರೊಂದಿಗೆ ಜಿಪಂ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಕಾರ್ಯಪಾಲಕ ಎಂಜಿನಿಯರ್ ಜಿ.ಎನ್. ಪ್ರಕಾಶ್, ಸಿಂಧನೂರಿನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ಆರ್.ಗೌಡೂರು ಸೇರಿದಂತೆ ಅನೇಕ ಅಧಿಕಾರಿಗಳಿದ್ದರು.