ನಿರಂತರ ಅಧ್ಯಯನದಿಂದ ಜ್ಞಾನ ವೃದ್ಧಿ: ಪುಲ್ಹಾರಿ
ದೇವದುರ್ಗ: ನಿರಂತರ ಅಧ್ಯಯನದಿಂದ ಜ್ಞಾನ ವೃದ್ಧಿಯಾಗಲು ಸಾಧ್ಯ. ಜ್ಞಾನದ ಮೂಲಕ ಮೌಲ್ಯಯುತ ಜೀವನ ನಡೆಸಲು ಪಿಎಸ್ಸೈ ಬಸವರಾಜ ಪುಲ್ಹಾರಿ ಹೇಳಿದರು.
ಈಚೆಗೆ ಪಟ್ಟಣದ ಶಾಖಾ ಗ್ರಂಥಾಲಯದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯ ರಾಯಚೂರು ಹಾಗೂ ಶಾಖಾ ಗ್ರಂಥಾಲಯ ದೇವದುರ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಪುಸ್ತಕ ಹಾಗೂ ಕೃತಿಸ್ವಾಮ್ಯ ದಿನಾಚರಣೆಯಲ್ಲಿ ಮಾತನಾಡಿದರು.
ಪಟ್ಟಣದಲ್ಲಿ ಅತ್ಯಾಧುನಿಕ ಗ್ರಂಥಾಲಯದ ಸೌಲತ್ತು ಲಭ್ಯವಿದ್ದು, ಅದರ ಪ್ರಯೋಜನ ಪಡೆಯಲು ಅವರು ಮನವಿ ಮಾಡಿದರು.
ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಹನುಮಂತ್ರಾಯ ಶಾಖೆ ಮಾತನಾಡಿ, ವಿಶ್ವ ಸಾಹಿತ್ಯದ ಸಾಮ್ರಾಟ್ ವಿಲಿಯಂ ಷೇಕ್ಸ್ಪಿಯರ್ ಅವರ ಜನ್ಮದಿನವನ್ನು ವಿಶ್ವ ಪುಸ್ತಕ ಹಾಗೂ ಕೃತಿಸ್ವಾಮ್ಯ ದಿನಾಚರಣೆಯಾಗಿ ಆಚರಿಸಲಾಗುತ್ತಿದೆಂದು ತಿಳಿಸಿದರು.
ಯುವ ಸಾಹಿತಿ ಶಂಕರರಾವ್ ಉಭಾಳೆ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಖಾ ಗ್ರಂಥಾಲಯದ ಗ್ರಂಥಪಾಲಕ ವಿ.ಬಿ. ಕುಲಕರ್ಣಿ ವಹಿಸಿದ್ದರು. ಬಸವೇಶ್ವರ ಡಿ.ಇಡಿ ಕಾಲೇಜಿನ ಪ್ರಾಂಶುಪಾಲ ಬಸವರಾಜ ಬ್ಯಾಗವಾಟ್, ಶಾಖಾ ಗ್ರಂಥಾಲಯ ಸಹಾಯಕಿ ಪಾರ್ವತಿ, ಬಸವರಾಜ, ಇಬ್ರಾಹಿಂ ಸಾಬ್ ಮಾತನಾಡಿದರು. ಅಶೋಕ ಬಗರಿ, ಹನುಮಂತ ಅಂಚೆಸೂಗೂರು, ಮರಿಗೆಪ್ಪ ರಾಯಚೂರಕರ್, ನವಾಬ್ ಪಟೇಲ್ ಇದ್ದರು.