ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಪ್ರಾಕೃತಿಕ ಆರೋಗ್ಯಧಾಮ ಕಾರ್ಯಾರಂಭ 27ಕ್ಕೆ

Rashmi Kasaragodu
Updated On : 25 Apr 2014, 10:51 am

ಕ.ಪ್ರ. ವಾರ್ತೆ    ರಾಯಚೂರು    ಏ.24
ಪ್ರಾಕೃತಿಕ ಶೈಲಿಯ ಆರೋಗ್ಯ ಚಿಕಿತ್ಸಾ ಪದ್ಧತಿಯ ಆರೋಗ್ಯ ಕೇಂದ್ರವು ನಗರದಲ್ಲಿ ಏ.27ರಿಂದ ಕಾರ್ಯಾರಂಭ ಮಾಡಲಿದೆ ಎಂದು ಎಬಿಎನ್ ಚಾರಿಟಬಲ್ ಟ್ರಸ್ಟ್ ಸಂಸ್ಥೆಯ ಅಧ್ಯಕ್ಷ ಭೀಮಣ್ಣ ಅರೋಲಿ ಹೇಳಿದರು.
ಅವರು ನಗರದಲ್ಲಿ ಗುರುವಾರ ಕರೆದಿದ್ದ ಸುದ್ದಗೋಷ್ಠಿಯಲ್ಲಿ ಮಾತನಾಡಿ, ನಗರದ ವಾಸವಿನಗರ ಬಸ್ ನಿಲ್ದಾಣದ ಬಳಿ ದೀರ್ಘಾಯು ಪ್ರಕೃತಿ ಆರೋಗ್ಯಧಾಮ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದೆ. ಈ ಪ್ರಾಕೃತಿಕ ಆರೋಗ್ಯಧಾಮದಲ್ಲಿ ಔಷಧರಹಿತ ಚಿಕಿತ್ಸಾ ಪದ್ಧತಿ ಅನುಸರಿಸಿ ತೀರಾ ಕಡಿಮೆ ವೆಚ್ಚದಲ್ಲಿ ಜನತೆಗೆ ಶಾಶ್ವತ ಆರೋಗ್ಯ ಸಂಬಂಧಿ ಸಮಸ್ಯೆ ನಿವಾರಣೆ ಸಾಧ್ಯವಾಗಲಿದೆ ಎಂದು ತಿಳಿಸಿದರು.
ಪರಿಹಾರ: ಆಧುನಿಕ ಜಗತ್ತಿನಲ್ಲಿನ ಮಾನವನ ಜೀವನಶೈಲಿಯಿಂದ ಅನೇಕ ಬಗೆಯ ದೀರ್ಘಕಾಲೀನ ಆರೋಗ್ಯ ಸಂಬಂಧಿ ಸಮಸ್ಯೆಗಳು ಎದುರಾಗುತ್ತವೆ. ಅಂಥ ಸಮಸ್ಯೆಗಳಿಗೆ ಪ್ರಾಕೃತಿಕ ಆರೋಗ್ಯ ಚಿಕಿತ್ಸಾ ಪದ್ಧತಿಯಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂಬುದನ್ನು ಈಗಾಗಲೇ ಆರೋಗ್ಯ ಧಾಮದ ಸಿಬ್ಬಂದಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆಂದರು.
ಶರೀರದಲ್ಲಿ ಸಜೀವ ಮತ್ತು ನಿರ್ಜೀವ ಪದಾರ್ಥಗಳಿರುತ್ತವೆ. ಇವುಗಳ ಪೈಕಿ ನಿರ್ಜೀವ ಪದಾರ್ಥಗಳಿಂದಲೇ ನಾನಾ ರೀತಿಯ ಆರೋಗ್ಯ ಸಂಬಂಧಿ ಸಮಸ್ಯೆಗಳು ಎದುರಾಗುತ್ತವೆ. ನೈಸರ್ಗಿಕ ಚಿಕಿತ್ಸೆಗಳ ಮೂಲಕ ಇಂಥ ನಿರ್ಜೀವ ಪದಾರ್ಥವನ್ನು ದೇಹ ದಿಂದ ಹೊರಹಾಕುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಆರೋಗ್ಯ ಧಾಮದಲ್ಲಿ ನೀಡಲಾಗುತ್ತದೆ ಎಂದರು.
ಅಧಿಕ ಭಾರ, ರಕ್ತದೊತ್ತಡ, ಮಧುಮೇಹ, ಪಾರ್ಶ್ವವಾಯು, ಥೈರಾಯಿಡ್, ರಕ್ತಹೀನತೆ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಪ್ರಾಕೃತಿಕ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಜಲಚಿಕಿತ್ಸೆ, ಯೋಗ ಚಿಕಿತ್ಸೆ, ಅಂಗಮರ್ದನ ಚಿಕಿತ್ಸೆ, ಮಣ್ಣಿನ ಚಿಕಿತ್ಸೆ, ಉಪವಾಸ ಚಿಕಿತ್ಸೆ, ಫಿಸಿಯೋಥೆರಪಿ ಸೇರಿದಂತೆ ವಿವಿಧ ಬಗೆಯ ಚಿಕಿತ್ಸೆ ಕಡಿಮೆ ವೆಚ್ಚದಲ್ಲಿ ನೀಡುವ ಉದ್ದೇಶವಿದೆ ಎಂದು ತಿಳಿಸಿದರು.
ಪ್ರಾಕೃತಿಕ ಚಿಕಿತ್ಸೆ: ಆರೋಗ್ಯಧಾಮದಲ್ಲಿ ಸದ್ಯ ರೋಗಿಗಳಿಗೆ ಉಚಿತವಾಗಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕನಿಷ್ಟ ಶುಲ್ಕ ಪಡೆದು ದೇಶದ ಪಾರಂಪರಿಕ ಪ್ರಾಕೃತಿಕ ಚಿಕಿತ್ಸೆ ಪದ್ಧತಿಯಡಿ ಆರೋಗ್ಯ ಸಮಸ್ಯೆ ಪರಿಹರಿಸಲಾಗುತ್ತದೆ ಎಂದು ಅವರು ಹೇಳಿದರು.
ವಿವಿಧೆಡೆ ತಾವು 18 ವರ್ಷಗಳ ಚಿಕಿತ್ಸೆ ಪದ್ಧತಿ ತರಬೇತಿ ಪಡೆದಿದ್ದು, ಈ ಬಗ್ಗೆ ನಗರದ ವಿಠ್ಠಲ ರುಕ್ಮಿಣಿ ಕಲ್ಯಾಣ ಮಂಟಪದಲ್ಲಿ ಈಗಾಗಲೇ ಜನತೆಗೆ ಆರೋಗ್ಯ ಪದ್ಧತಿಯ ಕುರಿತು ಮಾಹಿತಿ ನೀಡಿಕೆ ಕಾರ್ಯಕ್ರಮ ನೀಡಿದ್ದಾಗಿ ತಿಳಿಸಿದ ಅವರು, ಎಲ್ಲ ರೀತಿಯ ಚಿಕಿತ್ಸಾ ಸೌಲಭ್ಯವಿರುವ ಸುಸಜ್ಜಿತ ಆರೋಗ್ಯ ಕೇಂದ್ರವನ್ನು ಮುಂದಿನ ದಿನಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವುದಾಗಿ ಹೇಳಿದರು.
ಸದ್ಯ ವಾಸವಿನಗರದ ಬಸ್ ನಿಲ್ದಾಣದ ಬಳಿ ದೀರ್ಘಾಯು ಪ್ರಕೃತಿ ಆಶ್ರಮ ಮತ್ತು ದೀರ್ಘಾಯು ಪ್ರಕೃತಿ ಆರೋಗ್ಯ ಧಾಮ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಕೇಂದ್ರವನ್ನು ಏ. 27ರಿಂದ ಆರಂಭಿಸಲಾಗುತ್ತಿದೆ ಎಂದು ಹೇಳಿದರು. ಈ ಸಂದರ್ಭ ಉಪನ್ಯಾಸಕ ಜೆ.ಎಲ್. ಈರಣ್ಣ , ಶರಣಪ್ಪ ಕಡಗೋಲ, ಕೊಂಡಪ್ಪ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement