'ವ್ಯಕ್ತಿತ್ವ ರೂಪಿಸಿಕೊಳ್ಳಲು ಪುಸ್ತಕಗಳು ಸಹಕಾರಿ'
ಗುಲ್ಬರ್ಗ: ಪುಸ್ತಕಗಳು ಓದುಗರ ಒಳ್ಳೆಯ ಸಂಗಾತಿಯಾಗಿದ್ದು, ಉತ್ತಮ ನಾಗರಿಕನಾಗಲು ಹಾಗೂ ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಪುಸ್ತಕಗಳು ಸಹಕಾರಿ ಎಂದು ಗುಲ್ಬರ್ಗ ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಅಪ್ಪಾರಾವ ಅಕ್ಕೊಣಿ ಹೇಳಿದರು.
ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ಗುಲ್ಬರ್ಗ ನಗದ ಕೇಂದ್ರ ಗ್ರಂಥಾಲಯದಲ್ಲಿ ಆಯೋಜಿಸಿದ್ದ ಹೊಸ ಪುಸ್ತಕ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದೇಶ ಕಂಡ ಅನೇಕ ಮಹಾಪುರುಷರು ತಮ್ಮ ಜ್ಞಾನವನ್ನು ಪುಸ್ತಕದಿಂದ ರೂಪಿಸಿಕೊಂಡು ಸಮಾಜಕ್ಕೆ ಒಳ್ಳೆಯ ಮಾರ್ಗದರ್ಶನ ನೀಡಿರುವುದು ಇತಿಹಾಸವಾಗಿದ್ದು, ಪ್ರತಿಯೊಬ್ಬರು ಪುಸ್ತಕಗಳನ್ನು ಮನೆಯಲ್ಲಿ ಸಂಗ್ರಹಿಸಿಕೊಂಡು ತಮ್ಮ ಜ್ಞಾರ್ನಾಜನೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಉಪ ಗ್ರಂಥಪಾಲಕ ಡಾ. ಖೇಮಣ್ಣ ಅಲ್ದಿ ಮಾತನಾಡಿ, ಪುಸ್ತಕಗಳು ಇಲ್ಲದಿದ್ದರೆ ಇತಿಹಾಸ ಸೃಷ್ಟಿಯಾಗಲು ಸಾಧ್ಯವಾಗುತ್ತಿರಲಿಲ್ಲ. ಪುಸ್ತಕಗಳು ಗ್ರಂಥಾಲಯ ಕಪಾಟಿನಲ್ಲಿ ಶೇಖರಿಸಿಡದೆ ಓದುಗನ ಕೈಗೆ ಪುಸ್ತಕ ಸಿಕ್ಕಾಗ ಮಾತ್ರ ಪುಸ್ತಕದ ಜೀವನ ಸಾರ್ಥಕವಾಗುತ್ತದೆ ಎಂದರು. ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್, ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಡಿ.ಎಚ್. ಕೇಸರಿ ಮಾತನಾಡಿದರು.
ದೀಪಕ ಎಂ. ಕಮತಕರ್ ಸ್ವಾಗತಿಸಿ ನಿರೂಪಿಸಿದರು. ಸುನೀಲ ಮುದಗಲ್ ವಂದಿಸಿದರು.