ಸೋಲು, ಗೆಲವಿನ ಲೆಕ್ಕಾಚಾರದಲ್ಲಿ ಕಾರ್ಯಕರ್ತರು
ದೇವದುರ್ಗ: ಲೋಕಸಭೆ ಚುನಾವಣೆ ಮತದಾನದ ಮುಗಿದಿದ್ದು ಎಲ್ಲರ ಚಿತ್ತವೀಗ ಫಲಿತಾಂಶದತ್ತಲೇ ನೆಟ್ಟಿದೆ. ವಿವಿಧ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತಾಲೂಕಿನವರಾಗಿದ್ದರಿಂದ ಈಗಿನಿಂದಲೇ ಸೋಲು ಗೆಲವಿನ ಲೆಕ್ಕಾಚಾರ, ಭವಿಷ್ಯ ಕೇಳುವ ಕಾರ್ಯದಲ್ಲಿ ಕಾರ್ಯಕರ್ತರು ತೊಡಗಿರುವುದು ಕಂಡುಬಂದಿದೆ.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿ ವಿವಿಧ ಪಕ್ಷದ ಮುಖಂಡರು, ಕಾರ್ಯಕರ್ತರು ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲವು, ಸೋಲಿನ ಲೆಕ್ಕಾಚಾರದಲ್ಲಿ ಮಗ್ನರಾಗಿದ್ದು, ಮತದಾನ ನಡೆದ ದಿನದ ನಂತರದಲ್ಲಿ ಪಕ್ಷಗಳ ಕಾರ್ಯಕರ್ತರು ಸೋಲು-ಗೆಲವಿಗೆ ನಾನಾ ರೀತಿಯಲ್ಲಿ ಲೆಕ್ಕಾಚಾರ ಹಾಕತೊಡಗಿದ್ದಾರೆ.
ಫಲಿತಾಂಶದತ್ತ ಚಿತ್ತ: ಈಚೆಗೆ ನಡೆದ ಲೋಕಸಭೆ ಚುನಾವಣೆ ಕಣದಲ್ಲಿದ್ದ ಕಾಂಗ್ರೆಸ್ ನ ಅಭ್ಯರ್ಥಿ ಬಿ.ವಿ. ನಾಯಕ ಹಾಗೂ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಅವರಿಬ್ಬರೂ ತಾಲೂಕಿನವರೇ ಆಗಿರುವುದು ರಾಜಕೀಯ ಕ್ಷೇತ್ರದಲ್ಲಿ ಜಿದ್ದಾಜಿದ್ದಿ ಜತೆಗೆ ಫಲಿತಾಂಶದ ಮೇಲೆಯೇ ಎಲ್ಲರ ಗಮನವಿಡುವಂತೆ ಮಾಡಲು ಕಾರಣವಾಗಿದೆ.
ಜಾತಿ ಮತಗಳ ಲೆಕ್ಕಾಚಾರ, ಕ್ಷೇತ್ರವಾರು ಮತಗಳ ಬರುವಿಕೆ ಆಧಾರದಲ್ಲಿ ಕಾರ್ಯಕರ್ತರು ತಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾ ನೆಂದು ಈಗಲೇ ಬೀಗುತ್ತಿರುವುದು ಕ್ಷೇತ್ರದಲ್ಲಿ ಸರ್ವೇ ಸಾಮಾನ್ಯ ಕಂಡುಬರುತ್ತಿದೆ. ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಎಲ್ಲಿಯೇ ಹೋದರೂ ರಾಜಕೀಯ ಲೆಕ್ಕಾಚಾರದ್ದೇ ಚರ್ಚೆಗೆ ತೊಡಗುತ್ತಿರುವುದು ವಿಶೇಷ.
ಅಭ್ಯರ್ಥಿಗಳ ಮೌನ: ಪ್ರಮುಖ ರಾಜಕೀಯ ಪಕ್ಷಗಳ ಕಾರ್ಯಕರ್ತರು ಸೋಲು ಗೆಲವಿನ ಲೆಕ್ಕಾಚಾರದಲ್ಲಿ ತೊಡಗಿದ್ದರೆ, ಕಣದಲ್ಲಿನ ಅಭ್ಯರ್ಥಿಗಳು ಮೌನಕ್ಕೆ ಶರಣಾಗಿದ್ದಾರೆ. ಆದರೆ ಕಾರ್ಯಕರ್ತರು ಮಾತ್ರ ಅಲ್ಲಿಲ್ಲಿ ದೇವಸ್ಥಾನ ಮತ್ತಿತರೆಡೆ ಜೋತಿಷ್ಯ, ಗಿಳಿ ಭವಿಷ್ಯ ಕೇಳುವ ಮೂಲಕ ಪಕ್ಷದ ಗೆಲವು ಖಚಿತ ಎಂದೇ ಹೇಳಿಕೊಂಡು ಬೀಗುತ್ತಿರುವುದು ಮಾತ್ರ ವಾಸ್ತವ. ಆದರೆ ಅಂತಿಮವಾಗಿ ಮತದಾರರು ಬರೆದಿರುವ ಅಭ್ಯರ್ಥಿಗಳ ಹಣೆಬರೆಹ ಬಯಲಾಗಲು ಮೇ 16ರವರೆಗೆ ಕಾಯುವುದು ಮಾತ್ರ ಅನಿವಾರ್ಯವಾಗಿದೆ.