ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಖಾತ್ರಿ ಕೂಲಿ ಪಾವತಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ

Rashmi Kasaragodu
Updated On : 26 Apr 2014, 12:16 pm

ಕ.ಪ್ರ. ವಾರ್ತೆ   ರಾಯಚೂರು   ಏ.25
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಿದ ಕೂಲಿಕಾರ್ಮಿಕರಿಗೆ ಕೂಲಿ ಹಣ ಪಾವತಿಸಲು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಶುಕ್ರವಾರದಿಂದ ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆ ಕಾರ್ಯಕರ್ತರು ಅನಿರ್ದಿಷ್ಟ ಧರಣಿ ಆರಂಭಿಸಿದರು.
ನಗರದ ಜಿಪಂ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ ಸಂಘಟನೆಯ ಕಾರ್ಯಕರ್ತರು ಜಿಪಂ ಸಿಇಒಗೆ ಮನವಿ ಸಲ್ಲಿಸಿ, ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಮಾಡಿದ ಕೂಲಿಕಾರ್ಮಿಕರ ಕೂಲಿ ಪಾವತಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆಂದು ಆರೋಪಿಸಿದರು.
ಕೂಲಿಕಾರ್ಮಿಕರು ಸಂಕಷ್ಟಕ್ಕೆ: ಎರಡು ತಿಂಗಳ ಹಿಂದೆಯೇ ಜಿಪಂ ಆಡಳಿತಕ್ಕೆ ಕೂಲಿ ಹಣ ಪಾವತಿಗೆ ಕೋರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಈ ಹಿಂದೆ ಲೋಕಸಭೆ ಚುನಾವಣೆಯ ನೀತಿ ಸಂಹಿತೆಯ ಹಿನ್ನೆಲೆ ಕೂಲಿ ಹಣ ಪಾವತಿಸಲಾಗದು ಎಂದು ಹೇಳಿ ಜಾರಿಕೊಂಡಿದ್ದಾರೆ. ಸದ್ಯ ಚುನಾವಣೆ ಮುಗಿದಿದ್ದರೂ ಕೂಲಿ ಹಣ ಪಾವತಿಸಲು ಹಿಂದೇಟು ಹಾಕುತ್ತಿದ್ದಾರೆಂದು ದೂರಿದರು.
ಜಿಪಂ ಅಧಿಕಾರಿಗಳು ಜಿಲ್ಲಾಡಳಿತದಿಂದ ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಿಸಿ ಸೂಚನೆ ದೊರೆಯುವವರೆಗೆ ಕೂಲಿ ಹಣ ಪಾವತಿಸುವುದಿಲ್ಲ ಮತ್ತು ಹೊಸದಾಗಿ ಕೆಲಸವನ್ನೂ ನೀಡುವುದಿಲ್ಲ ಎಂದು ಹೇಳುತ್ತಿದ್ದು ಅದರಿಂದ ಕೂಲಿಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆಂದು ಆರೋಪಿಸಿದರು.
1 ಕೋಟಿ ಕೂಲಿ ಹಣ ಜಮಾ ಮಾಡಿ: ರಾಜ್ಯ ಸರ್ಕಾರದಿಂದ ಉದ್ಯೋಗ ಖಾತ್ರಿ ಯೋಜನೆ ಅಡಿ ಅಗತ್ಯ ಅನುದಾನ ಒದಗಿಸಿದ್ದರೂ ಕೂಲಿ ಹಣ ಪಾವತಿಸಲು ಜಿಪಂನಿಂದ ವಿಳಂಬ ಮಾಡಲಾಗುತ್ತಿದೆ. ಕೂಲಿಕಾರ್ಮಿಕರ ಖಾತೆಗೆ ಕೂಡಲೇ ಬಾಕಿಯಿರುವ 1 ಕೋಟಿ ಕೂಲಿ ಹಣವನ್ನು ಜಮಾ ಮಾಡಬೇಕೆಂದು ಆಗ್ರಹಿಸಿದರು.
ಉದ್ಯೋಗಕ್ಕಾಗಿ 100 ಹಳ್ಳಿಗಳಿಂದ ಕೆಲಸ ನೀಡುವಂತೆ ಅರ್ಜಿ ಸಲ್ಲಿಕೆಗೆ ಮುಂದಾಗಿದ್ದರೂ ಜಿಪಂ ವ್ಯಾಪ್ತಿಯ ಅಧಿಕಾರಿಗಳು ಮಾತ್ರ ಅರ್ಜಿ ಪಡೆಯದೇ ಸದ್ಯಕ್ಕೆ ಕೆಲಸ ನೀಡುವುದಿಲ್ಲ ಎಂದು ನಿರಾಕರಿಸುತ್ತಿದ್ದಾರೆಂದು ಆರೋಪಿಸಿದ ಹೋರಾಟಗಾರರು, ಕಳೆದೊಂದು ವರ್ಷದಿಂದ ಉದ್ಯೋಗ ಖಾತ್ರಿ ಯೋಜನೆಯನ್ನು ಅಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ ಎಂದು ದೂರಿದರು.
ಜಿಲ್ಲೆಯ ಮಟ್ಟೂರು, ಜಾಗೀರಜಾಡಲದಿನ್ನಿ, ಪೋತ್ನಾಳ್, ಜಾನೇಕಲ್, ಹಿರೇಕೊಟ್ನೆಕಲ್ ಹಾಗೂ ಗೋನ್ವಾರ್ ಗ್ರಾಪಂನ ಅಡಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾರ್ಯನಿರ್ವಹಿಸಿದ ಕೂಲಿಕಾರ್ಮಿಕರಿಗೆ ಕೂಲಿ ಹಣ ಪಾವತಿಸಿಲ್ಲ. ಈ ಗ್ರಾಪಂಗಳಿಂದ ಕೂಲಿ ಹಣದ ಪಾವತಿಯಷ್ಟೇ ಅಲ್ಲ ನಷ್ಟ ಪರಿಹಾರ ಪಾವತಿಗೆ ಹೋರಾಟಗಾರರು ಒತ್ತಾಯಿಸಿದರು.
ಉಮಲೂಟಿ ಗ್ರಾಪಂ ವ್ಯಾಪ್ತಿಯಲ್ಲಿ ವಂಚನೆ: ಸಿಂಧನೂರು ತಾಲೂಕಿನ ಉಮಲೂಟಿ ಗ್ರಾಪಂ ವ್ಯಾಪ್ತಿಯಲ್ಲಿ ಕೆಲಸ ಮಾಡಿದ ಕೂಲಿಕಾರ್ಮಿಕರಿಗೆ ಕಡಿಮೆ ಹಣ ಪಾವತಿಸಲಾಗಿದೆ. ಹಾಗೆಯೇ ಕೆಲಸ ಮಾಡದಂಥವರಿಗೂ ಕೂಲಿ ಹಣ ಪಾವತಿಸಿ ವಂಚಿಸಲಾಗಿದೆ. ಹೊರ ಜಿಲ್ಲೆಯಲ್ಲಿರುವ ಕಾರ್ಮಿಕರಿಗೂ ಕೂಲಿ ಹಣ ಪಾವತಿಸುವ ಕಾರ್ಯ ಗ್ರಾಪಂ ಪಿಡಿಒ ಮಾಡಿದ್ದಾರೆಂದು ಟೀಕಿಸಿದರು.
ಕಾರಣ ಕೂಡಲೇ ಬಾಕಿ ಕೂಲಿ ಹಣ ಮತ್ತು ನಷ್ಟ ಪರಿಹಾರ ನೀಡಬೇಕು. ನಿರುದ್ಯೋಗ ಭತ್ಯೆ ಒದಗಿಸಬೇಕು. ಕೂಲಿಕಾರ್ಮಿಕರಿಗೆ ಅನ್ಯಾಯ ಮಾಡಿ ಕೆಲಸ ಮಾಡದವರಿಗೆ ಹಣ ನೀಡುವುದನ್ನು ತಡೆಯಬೇಕು. ಕಾಮಗಾರಿ ನಡೆದ ಸ್ಥಳ ಪರಿಶೀಲಿಸಿದ ನಂತರವೇ ಕೂಲಿ ಹಣ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೂಲಿಕಾರ್ಮಿಕರಿಗೆ ಆಧಾರ್ ಕಾರ್ಡು ಕಡ್ಡಾಯಗೊಳಿಸಿರುವುದನ್ನು ಕೂಡಲೇ ಹಿಂಪಡೆಯಬೇಕು. ಜಾಬ್ ಕಾರ್ಡು ನೀಡಲು ಆಧಾರ್ ಕಾರ್ಡು ಹಾಜರುಪಡಿಸುವಂತೆ ಸೂಚಿಸುತ್ತಿದ್ದು ಅದರಿಂದ ಕೂಲಿಕಾರ್ಮಿಕರಿಗೆ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ಆಧಾರ್ ಕಾರ್ಡು ಕಡ್ಡಾಯಗೊಳಿಸದಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಶರಣಗೌಡ, ಗುರುರಾಜ್, ರಾಜಮ್ಮ, ಲಕ್ಷ್ಮಣ, ಸಂಜೀವಮ್ಮ, ಮರಿಯಾ ಸೇರಿ ಅನೇಕರಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement