ಖಾಸಗಿ ಬಸ್ ಪಲ್ಟಿ: ಮೂವರಿಗೆ ಗಾಯ
ರಾಯಚೂರು: ಮಾನವಿ ತಾಲೂಕಿನ ಸಿರವಾರ ಬಳಿಯ ನೀಲಗಲ್ ಕ್ರಾಸ್ ಹತ್ತಿರ ಗುರುವಾರ ತಡರಾತ್ರಿ ಗೋವಾಕ್ಕೆ ತೆರಳುತ್ತಿದ್ದ ಆಂಧ್ರ ಮೂಲದ ಖಾಸಗಿ ಬಸ್ಸೊಂದು ಪಲ್ಟಿಯಾಗಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ಸಿನ ಚಾಲಕರು ಸೇರಿ ಮೂವರಿಗೆ ಗಾಯಗಳಾಗಿವೆ.
ಆಂಧ್ರದ ಹೈದರಾಬಾದ್ನಿಂದ ಗೋವಾಕ್ಕೆ ತೆರಳುತ್ತಿದ್ದ ಕೇಸಿನೇನಿ ಸಂಸ್ಥೆಗೆ ಸೇರಿದ ವೋಲ್ವೋ ಬಸ್ ಗುರುವಾರ ರಾತ್ರಿ ನೀಲಗಲ್ ಕ್ರಾಸ್ ಬಳಿ ತೆರಳುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಲಾರಿಗೆ ಮಾರ್ಗ ನೀಡುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಘಟನೆಯಲ್ಲಿ ಕ್ಲೀನರ್ ವೆಂಕಟೇಶ್, ಚಾಲಕರಾದ ಬಾಲಾಜಿ, ಮನೋಹರ ಎಂಬುವವರಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ. ಬಸ್ಸಿನಲ್ಲಿ ಒಟ್ಟು 24 ಜನ ಪ್ರಯಾಣಿಕರಿದ್ದರು ಎಂದು ಮೂಲಗಳು ತಿಳಿಸಿವೆ. ಈ ಕುರಿತು ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.