ತೊಗರಿ ಖರೀದಿ ಪುನಾರಂಭ?
.ಪ್ರ. ವಾರ್ತೆ ಗುಲ್ಬರ್ಗ ಏ.25
ಕಳೆದ ಒಂದೂವರೆ ತಿಂಗಳಿನಿಂದ ಸ್ಥಗಿತಗೊಂಡಿರುವ ತೊಗರಿ ಖರೀದಿ ಪ್ರಕ್ರಿಯೆಯನ್ನು ಪುನರಾರಂಭಿಸಲು ಸೋಮವಾರ ನಡೆಯಲಿರುವ ಕೃಷಿಗೆ ಸಂಬಂಧಿಸಿದ ಸಚಿವ ಸಂಪುಟದ ಉಪ ಸಮಿತಿಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ ತಿಳಿಸಿದ್ದಾರೆ.
ಉಪ ಸಮಿತಿ ಅಧ್ಯಕ್ಷ ಪಶು ಸಂಗೋಪನಾ ಸಚಿವ ಟಿ.ಬಿ. ಜಯಚಂದ್ರ ಅವರನ್ನು ಭೇಟಿ ಮಾಡಿ ತೊಗರಿ ಖರೀದಿ ಪುನರಾರಂಭಿಸಬೇಕೆಂದು ಒತ್ತಾಯಿಸಿದಾಗ, ಸೋಮವಾರ ನಡೆಯಲಿರುವ ಸಂಪುಟದ ಉಪ ಸಮಿತಿ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದಿಕೊಳ್ಳುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.
5 ಸಾವಿರದಂತೆ ಖರೀದಿಸಲು ಒತ್ತಾಯ: ಮುಚ್ಚಿರುವ ಖರೀದಿ ಕೇಂದ್ರಗಳನ್ನು ಪುನಾರಂಭಿಸಿ ಪ್ರತಿ ಕ್ವಿಂಟಲ್ಗೆ 5,000ರಂತೆ ತೊಗರಿ ಖರೀದಿಸಬೇಕೆಂದು ಜಯಚಂದ್ರ ಅವರಿಗೆ ಒತ್ತಾಯಿಸಲಾಯಿತು. ಅದಕ್ಕೆ ಸ್ಪಂದಿಸಿದ ಅವರು, ಕೇಂದ್ರ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ) 4,300ರಂತೆ ಖರೀದಿ ಮಾಡುವುದಾಗಿ ಹೇಳಿದರು.
ನಾವು ಅದಕ್ಕೆ ಒಪ್ಪಲಿಲ್ಲ. ಈ ಮೊದಲಿನಂತೆ 5 ಸಾವಿರದಂತೆ ಖರೀದಿ ಮಾಡಬೇಕೆಂದು ಒತ್ತಾಯಿಸಿದಾಗ, ಸಂಪುಟ ಉಪ ಸಮಿತಿಯ ಸಭೆಯಲ್ಲಿ ಖಂಡಿತವಾಗಿಯೂ ಈ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಭರವಸೆಯನ್ನು ಸಚಿವರು ನೀಡಿದರು.
ಸಚಿವರಿಗೆ ಮನವರಿಕೆ: ಈಗಾಗಲೇ ಸುಮಾರು 35 ಸಾವಿರ ರೈತರು ತಮ್ಮ ಹೆಸರುಗಳನ್ನು ಗುಲ್ಬರ್ಗ, ಬೀದರ್, ಯಾದಗಿರಿಗಳಲ್ಲಿ ಪ್ರಾರಂಭಿಸಲಾಗಿದ್ದ ಖರೀದಿ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ. ಆದರೆ ಅವರಲ್ಲಿ ಕೇವಲ 20 ಸಾವಿರ ರೈತರ ತೊಗರಿ ಮಾತ್ರ ಖರೀದಿ ಮಾಡಲಾಗಿದೆ. ಹೆಸರು ನೋಂದಾಯಿಸಿದ ರೈತರ ತೊಗರಿಯಾದರೂ ಖರೀದಿ ಮಾಡುವ ಅಗತ್ಯತೆ ಕುರಿತು ಸಚಿವರಿಗೆ ಮನವರಿಕೆ ಮಾಡಿ ಕೊಡಲಾಗಿದೆ ಎಂದೂ ಹೇಳಿದರು.
ಇದಲ್ಲದೇ ಈಗಾಗಲೇ ಖರೀದಿ ಕೇಂದ್ರಗಳಿಗೆ ತೊಗರಿ ನೀಡಿರುವ ಬೆಳೆಗಾರರಿಗೆ ಬರಬೇಕಾಗಿರುವ ಬಿಲ್ ಪಾವತಿ ಮಾಡಬೇಕೆಂದು ಕೇಳಿಕೊಂಡಿದ್ದೇವೆ. ಅದಕ್ಕೂ ಸಚಿವರು ಸಹಮತ ವ್ಯಕ್ತಪಡಿಸಿದ್ದಾರೆ ಎಂದರು.
ಸ್ಪಂದಿಸದಿದ್ದರೆ ಹೋರಾಟ: ಸಂಪುಟದ ಉಪಸಮಿತಿ ಸಭೆಯಲ್ಲಿ ತೊಗರಿ ಬೆಳೆಗಾರರಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಧಾರ ಕೈಗೊಳ್ಳದಿದ್ದರೆ ಈಗಾಗಲೇ ಘೋಷಣೆ ಮಾಡಿದಂತೆ ಮೇ 3ರಂದು ತೊಗರಿ ಬೆಳೆಯುವ ಪ್ರದೇಶದಲ್ಲಿ ಧರಣಿ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಮಾನ್ಪಡೆ ಸ್ಪಷ್ಟಪಡಿಸಿದರು.
ತೊಗರಿ ಬೆಳೆಗಾರರು ನಿರ್ಲಕ್ಷ್ಯ ಮಾಡಿದರೆ ಸಹಿಸುವುದಿಲ್ಲ. ರಾಜ್ಯ ಸರ್ಕಾರವೂ ತೊಗರಿ ಬೆಳೆಗಾರರಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬ ವಿಶ್ವಾಸವಿದೆ. ಆದಾಗ್ಯೂ ಬೇಡಿಕೆ ಈಡೇರದಿದ್ದರೆ ಹೋರಾಟ ಆರಂಭಿಸಲಾಗುವುದು ಎಂದು ಅವರು ಹೇಳಿದರು.